ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನದ ಪ್ರಕರಣ ಈಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ರಾಮಮಂದಿರದ ಹುಂಡಿ ಹಣ ಕಳ್ಳತನವಾಗಿದ್ದು ಹೇಗೆ? ಅಸಲಿಗೆ ಈ ಪಾಪ ಮಾಡಿದ್ದು ಯಾರು? ಕೊನೆಗೂ ಇದರ ಅಸಲಿ ಸತ್ಯ ಬಯಲಾಗಿದೆ! ಬನ್ನಿ ಇದರ ಸಂಪೂರ್ಣ ವಿವರ ಈಗ ನೋಡೋಣ. ಮೊದಲಿಗೆ ಈ ಕಳ್ಳತನಕ್ಕೂ, ದೇವಾಲಯ ನಿರ್ಮಾಣಕ್ಕಾಗಿ ಸಂಗ್ರಹಿಸಿದ ಕೋಟ್ಯಂತರ ರೂಪಾಯಿ ದೇಣಿಗೆ ಹಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದುಬಂದಿದೆ. ಇದು ದೇಗುಲದ ಹುಂಡಿ ಹಣ ಎಣಿಕೆ ವೇಳೆ ನಡೆದ ಕಳ್ಳತನದ ಪ್ರಕರಣ!
ರಾಮಮಂದಿರ ಟ್ರಸ್ಟ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಡುವಿನ ಒಪ್ಪಂದದ ಪ್ರಕಾರ, ಹುಂಡಿಗಳನ್ನು ಬ್ಯಾಂಕ್ ಸಿಬ್ಬಂದಿಗೆ ಹಸ್ತಾಂತರಿಸುವುದು ಮಾತ್ರ ಟ್ರಸ್ಟ್ ಜವಾಬ್ದಾರಿಯಾಗಿತ್ತು. ಹಣ ಎಣಿಕೆಗಾಗಿ ಎಸ್ಬಿಐ ‘ಸೈನಿಕ್ ಸುರಕ್ಷಾ ಸಮಿತಿ’ ಎಂಬ ಸಂಸ್ಥೆಯ ಸಿಬ್ಬಂದಿಯನ್ನು ನೇಮಿಸಿತ್ತು.
ಹುಂಡಿಗೆ ಎರಡು ಬೀಗಗಳಿದ್ದು, ಕಟ್ಟುನಿಟ್ಟಾದ ಭದ್ರತೆಯೊಂದಿಗೆ ಸಾರ್ವಜನಿಕ ಸೌಲಭ್ಯ ಕೇಂದ್ರಕ್ಕೆ ಹಣವನ್ನು ಸಾಗಿಸಲಾಗುತ್ತಿತ್ತು. ಆದರೆ ನೋಟುಗಳನ್ನು ಯಂತ್ರದಲ್ಲಿ ಎಣಿಸುವ ಮೊದಲು, ಸಿಬ್ಬಂದಿ ಕೈಯಿಂದ ನೋಟುಗಳನ್ನು ಜೋಡಿಸಿ ಬಂಡಲ್ ಮಾಡುವ ಹಂತದಲ್ಲೇ ಹಣವನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ!
ಘಟನೆ ಬಳಿಕ ಎಚ್ಚೆತ್ತುಕೊಂಡ ಆಡಳಿತ ಮಂಡಳಿ, ಎಣಿಕೆ ಕೇಂದ್ರದಲ್ಲಿ ಭದ್ರತೆಯನ್ನು ತೀವ್ರಗೊಳಿಸಿದೆ. ನೌಕರರಿಗೆ ಜೇಬುಗಳಿಲ್ಲದ ಸಮವಸ್ತ್ರಗಳನ್ನು ಕಡ್ಡಾಯಗೊಳಿಸಲಾಗಿದ್ದು ಸಿಸಿಟಿವಿ ಕ್ಯಾಮೆರಾಗಳನ್ನ ಕೂಡ ನವೀಕರಿಸಲಾಗಿದೆಯಂತೆ!
ಇನ್ನು ರಾಮಮಂದಿರ ಟ್ರಸ್ಟ್ ಬಳಿಯಿರುವ ಸುಮಾರು ₹3,300 ಕೋಟಿ ದೇಣಿಗೆ ಹಣದ ಕುರಿತು ಹೇಳುವುದಾದರೆ, ಭಕ್ತರು ನೀಡಿರುವ ಈ ಸಂಪೂರ್ಣ ಮೊತ್ತಕ್ಕೆ ಲೆಕ್ಕಪರಿಶೋಧನೆ ಮಾಡಲಾಗಿದೆ. ಇದರಲ್ಲಿ ಭೂಮಿ ಖರೀದಿಗೆ ಸುಮಾರು ₹400 ಕೋಟಿ ಹಾಗೂ ದೇವಾಲಯದ ನಿರ್ಮಾಣಕ್ಕೆ ಸುಮಾರು ₹1,800 ಕೋಟಿ ಖರ್ಚು ಮಾಡಲಾಗಿದೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ.
ಒಟ್ಟಿನಲ್ಲಿ ಹುಂಡಿ ಎಣಿಕೆ ವೇಳೆ ನಡೆದ ಸಣ್ಣಪುಟ್ಟ ಲೋಪಗಳು ಮತ್ತು ಕಳ್ಳತನದ ರಹಸ್ಯ ಈಗ ಬಹಿರಂಗವಾಗಿದ್ದು, ವ್ಯವಸ್ಥೆಯನ್ನು ಮತ್ತಷ್ಟು ಕಟ್ಟುನಿಟ್ಟಗೊಳಿಸಲಾಗಿದೆ.




