Koppala News: ಅರ್ಹ ಫಲಾನುಭವಿಗಳಿಗೆ ಬಾಕಿ ಪಿಂಚಣಿ ಕೂಡಲೇ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

Koppal News: ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಮಾಜಿಕ ಭದ್ರತಾ ಪಿಂಚಣಿ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು.

ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಮುಖಂಡ ಶರಣು ಗಡ್ಡಿ, “ವೃದ್ಧರು, ವಿಧವೆಯರು, ವಿಕಲಚೇತನರು ಸೇರಿದಂತೆ ದುರ್ಬಲ ವರ್ಗದ ಜನರಿಗೆ ಪಿಂಚಣಿಯೇ ಬದುಕಿನ ಪ್ರಮುಖ ಆಸರೆಯಾಗಿದೆ. ಇಂತಹ ಫಲಾನುಭವಿಗಳ ಪಿಂಚಣಿಯನ್ನು ಹಲವು ತಿಂಗಳುಗಳಿಂದ ಸ್ಥಗಿತಗೊಳಿಸಿರುವುದು ಖಂಡನೀಯ.

ಪರಿಶೀಲನೆ ಮತ್ತು ದಾಖಲೆಗಳ ನೆಪದಲ್ಲಿ ಅರ್ಹ ಫಲಾನುಭವಿಗಳನ್ನು ಕಚೇರಿಗಳಿಗೆ ಅಲೆದಾಡಿಸುವ ಬದಲು, ಅವರ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ ಪಿಂಚಣಿಯನ್ನು ಮರುಜಾರಿಗೊಳಿಸಬೇಕು” ಎಂದು ಆಗ್ರಹಿಸಿದರು.

ಸರ್ಕಾರವು ಪಿಂಚಣಿ ಫಲಾನುಭವಿಗಳ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಅರ್ಹರ ಪಿಂಚಣಿಯನ್ನೂ ಸ್ಥಗಿತಗೊಳಿಸಿರುವುದರಿಂದ ಸಾವಿರಾರು ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಿಂಚಣಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ವೃದ್ಧರು, ವಿಧವೆಯರು ಮತ್ತು ವಿಕಲಚೇತನರಿಗೆ ಕೂಡಲೇ ಬಾಕಿ ಪಿಂಚಣಿ ಸೇರಿದಂತೆ ಹಣ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಕರ್ನಾಟಕ ಸರ್ಕಾರವು ಪಿಂಚಣಿ ಯೋಜನೆ ಯಾವುದೇ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು. ಪಿಂಚಣಿ ಪರಿಶೀಲನಾ ಪ್ರಕ್ರಿಯೆಯನ್ನು ಸರಳಗೊಳಿಸಿ, ಫಲಾನುಭವಿಗಳಿಗೆ ಅನಗತ್ಯ ತೊಂದರೆ ನೀಡಬಾರದು ಎಂದು ಶರಣು ಗಡ್ಡಿ ಆಗ್ರಹಿಸಿದರು.

ಜಿಲ್ಲೆಯ ವಿವಿಧ ಹಳ್ಳಿಗಳಿಂದ ಆಗಮಿಸಿದ ವಯಸ್ಸಾದ ವೃದ್ಧರು, ವಿಧವಾ ಮಹಿಳೆಯರು, ವಿಕಲಚೇತನರು ಸೇರಿದಂತೆ ಹಲವಾರು ಫಲಾನುಭವಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರತಿಭಟನೆಯಲ್ಲಿ ಗ್ರಾಮಗಳ ಮುಖಂಡರು ಮತ್ತು ಫಲಾನುಭವಿಗಳು ಭಾಗವಹಿಸಿದ್ದರು.ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಉಪಮುಖ್ಯಮಂತ್ರಿಗಳಾದ ಜಿ. ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಲಾಯಿತು.

About The Author