ಚೀನಾವು ಟಿಬೆಟ್ನ ‘ಮೆಡೋಗ್’ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಬೃಹತ್ ಜಲವಿದ್ಯುತ್ ಅಣೆಕಟ್ಟು ಭಾರತ ಮತ್ತು ಬಾಂಗ್ಲಾದೇಶಕ್ಕೆ ದೊಡ್ಡ ಅಪಾಯವಾಗಿ ಪರಿಣಮಿಸಿದೆ. ಹಿಮಾಲಯದ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದ ಬೆನ್ನಲ್ಲೇ, ಈ ಅಣೆಕಟ್ಟು ಭವಿಷ್ಯದಲ್ಲಿ ‘ಜಲ ಬಾಂಬ್’ ಆಗಿ ಬದಲಾಗಬಹುದು ಎಂದು ಅಂತರರಾಷ್ಟ್ರೀಯ ಭೂವಿಜ್ಞಾನಿಗಳು ಮತ್ತು ರಕ್ಷಣಾ ತಜ್ಞರು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಅಸಲಿಗೆ ಇದರ ಕಥೆ ಏನು ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ಈಗ ನೋಡೋಣ.
ಹೌದು ‘ಟಿಬೆಟ್-ನೇಪಾಳ ಗಡಿಯಲ್ಲಿ ಸಂಭವಿಸಿದ ಭೂಕಂಪ ಮತ್ತು ಹಿಮಪಾತವು ಭೀಕರ ಪ್ರವಾಹವನ್ನು ಸೃಷ್ಟಿಸಿ ನೂರಾರು ಜೀವಗಳನ್ನು ಬಲಿ ಪಡೆದಿದೆ. ಈ ದುರಂತದ ಸಮಯದಲ್ಲಿ ಚೀನಾ ಯಾವುದೇ ಮುನ್ನೆಚ್ಚರಿಕೆ ನೀಡದಿರುವುದು ಕೆಳಭಾಗದ ದೇಶಗಳಲ್ಲಿ ಆತಂಕವನ್ನು ಇಮ್ಮಡಿಗೊಳಿಸಿದೆ ಅಂತಾನೆ ಹೇಳಬಹುದು.
ಭೂಕಂಪನ ಪ್ರವೃತ್ತಿ ಅತ್ಯಧಿಕವಾಗಿರುವ ಹಿಮಾಲಯನ್ ಸಿಸ್ಮಿಕ್ ವಲಯದಲ್ಲೇ ಈ ಬೃಹತ್ ಜಲವಿದ್ಯುತ್ ಯೋಜನೆ ನಿರ್ಮಾಣವಾಗುತ್ತಿರುವುದು ಅಪಾಯದ ತೀವ್ರತೆಯನ್ನು ಹೆಚ್ಚಿಸಿದೆ. ಸ್ವತಃ ಚೀನಾದ ಜಿಯೋಲಾಜಿಕಲ್ ಸರ್ವೇ ನಡೆಸಿದ ಅಧ್ಯಯನದ ಪ್ರಕಾರ, ಈ ಮೆಡೋಗ್ ಅಣೆಕಟ್ಟು ಅತ್ಯಂತ ಸಕ್ರಿಯವಾಗಿರುವ ‘ಪೈಝೇನ್ ಭೂಕಂಪನ ಫಾಲ್ಸ್ ಲೈನ್’ ಮೇಲೆಯೇ ನಿರ್ಮಾಣಗೊಳ್ಳುತ್ತಿದೆ.
ಒಂದು ವೇಳೆ ಭಾರಿ ಭೂಕಂಪ ಸಂಭವಿಸಿ ಅಣೆಕಟ್ಟು ಹಾನಿಗೊಳಗಾದರೆ ಅಥವಾ ಚೀನಾ ಏಕಾಏಕಿ ದೊಡ್ಡ ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟರೆ, ಭಾರತದ ಅರುಣಾಚಲ ಪ್ರದೇಶ ಹಾಗೂ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳು ಸಂಪೂರ್ಣವಾಗಿ ಜಲಾವೃತಗೊಳ್ಳುವ ಭೀತಿ ಎದುರಾಗಿದೆ.
ಇದರ ನಡುವೆ ‘ಈ ಭೂರಾಜಕೀಯ ಮತ್ತು ಪರಿಸರ ಅಪಾಯವನ್ನು ಎದುರಿಸಲು ಭಾರತ ಸರ್ಕಾರವು ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದರ ಭಾಗವಾಗಿ ಅರುಣಾಚಲ ಪ್ರದೇಶದ ಸಿಯಾಂಗ್ ನದಿಗೆ ಅಡ್ಡಲಾಗಿ 11,000 ಮೆಗಾವಾಟ್ ಸಾಮರ್ಥ್ಯದ ‘ಸಿಯಾಂಗ್ ಅಪ್ಪರ್ ಬಹುಪಯೋಗಿ ಯೋಜನೆ’ಯನ್ನು ನಿರ್ಮಿಸಲು ಭಾರತ ಮುಂದಾಗಲಿದೆ ಎಂದು ಹೇಳಲಾಗ್ತಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ನೀರು ನಿರ್ವಹಣೆ ಮತ್ತು ಹಠಾತ್ ಪ್ರವಾಹದ ಅನಾಹುತಗಳನ್ನು ತಡೆಯಲು ಈಗಿಂದಲೇ ಸಜ್ಜಾಗುತ್ತಿದೆ ಅಂತ ಹೇಳಬಹುದು.
ಚೀನಾದ ಈ ವಿವಾದಾತ್ಮಕ ಜಲವಿದ್ಯುತ್ ಯೋಜನೆಯು ಕೇವಲ ಪರಿಸರ ನಾಶವಷ್ಟೇ ಅಲ್ಲದೆ, ಭಾರತದ ಈಶಾನ್ಯ ರಾಜ್ಯಗಳ ರಾಷ್ಟ್ರೀಯ ಭದ್ರತೆಗೂ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಕೇಂದ್ರ ಸರ್ಕಾರದ ಮುಂದಿನ ಹೆಜ್ಜೆಗಳು ತೀವ್ರ ಕುತೂಹಲ ಮೂಡಿಸಿವೆ.
