ಆಧುನಿಕತೆ, ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ತಂತ್ರಜ್ಞಾನದ ಭರಾಟೆಯಲ್ಲಿ ನಮ್ಮ ಕೃಷಿ ಕ್ಷೇತ್ರದ ಸ್ವರೂಪ ಸಂಪೂರ್ಣ ಬದಲಾಗಿದೆ. ಇಂದು ಕೃಷಿಯಲ್ಲಿ ಆರ್ಥಿಕ ಲಾಭದ ಉದ್ದೇಶವೇ ಮುಖ್ಯವಾಗಿದ್ದು, ಅತಿ ಹೆಚ್ಚು ಇಳುವರಿ ಪಡೆಯುವ ಆತುರದಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಅತಿಯಾದ ಬಳಕೆ ನಿರಂತರವಾಗಿ ನಡೆಯುತ್ತಿದೆ. ಇದರ ಪರಿಣಾಮವಾಗಿ ಮಣ್ಣಿನ ಫಲವತ್ತತೆ ದಿನದಿಂದ ದಿನಕ್ಕೆ ನಾಶವಾಗುತ್ತಿದ್ದು, ಅಂತರ್ಜಲ ಮಟ್ಟವೂ ತೀವ್ರವಾಗಿ ಕುಸಿಯುತ್ತಿದೆ. ಈ ಅವೈಜ್ಞಾನಿಕ ಕೃಷಿ ಪದ್ಧತಿಯಿಂದ ಇಂದು ಕೃಷಿ ವಲಯ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ರೈತರು ಸಾಲದ ಹೊರೆಗೆ ಸಿಲುಕಿ ಸಂಕಷ್ಟದ ಜೀವನ ನಡೆಸುವಂತಾಗಿದೆ.
ಭಾರತದ ಕೃಷಿ ವಲಯವು ಇತ್ತೀಚಿನ ವರ್ಷಗಳಲ್ಲಿ ಗಣನೀಯ ಬೆಳವಣಿಗೆ ಸಾಧಿಸಿದೆ ಎಂಬುದು ನಿಜ. ಆದರೆ ಆ ಬೆಳವಣಿಗೆಯನ್ನು ದೀರ್ಘಕಾಲ ಉಳಿಸಿಕೊಳ್ಳಬೇಕಾದರೆ ಮಣ್ಣಿನ ಆರೋಗ್ಯ, ನೀರಿನ ಲಭ್ಯತೆ ಮತ್ತು ಕೃಷಿ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವ ಸಹ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರ ಸುಧಾರಣೆ ಆಗಬೇಕೆಂದರೆ ‘ಪುನರುತ್ಪಾದಕ ಕೃಷಿ’ ಅತ್ಯಂತ ಅಗತ್ಯವಾದದ್ದು. ಇದು ಕೇವಲ ಅಸ್ತಿತ್ವದಲ್ಲಿರುವ ಪರಿಸ್ಥಿತಿಯನ್ನು ಉಳಿಸುವುದಲ್ಲ, ಬದಲಾಗಿ ಮಣ್ಣಿನ ಆರೋಗ್ಯವನ್ನು ಸಕ್ರಿಯವಾಗಿ ಪುನಃಸ್ಥಾಪಿಸುವುದು, ಜೀವವೈವಿಧ್ಯತೆಯನ್ನು ಹೆಚ್ಚಿಸುವುದು ಮತ್ತು ಹವಾಮಾನ ಒತ್ತಡಗಳ ವಿರುದ್ಧ ಹೊಲಗಳನ್ನು ಬಲಪಡಿಸುವ ಸಮಗ್ರ ವಿಧಾನವಾಗಿದೆ.
ಅಂದಹಾಗೆ ಪುನರುತ್ಪಾದಕ ಕೃಷಿ ಎಂದರೆ ಮಣ್ಣಿನ ಆರೋಗ್ಯ ಮತ್ತು ಜೀವವೈವಿಧ್ಯತೆಯನ್ನು ಕೇಂದ್ರಬಿಂದುವಾಗಿರಿಸುವ ವಿಧಾನ. ಮಣ್ಣಿಗೆ ಆಗುವ ತೊಂದರೆ ಕಡಿಮೆ ಮಾಡುವುದು, ಮಣ್ಣಿನ ಹೊದಿಕೆಯನ್ನು ಕಾಪಾಡುವುದು, ದೀರ್ಘಕಾಲಿಕ ಬೆಳೆಗಳ ಬೇರುಗಳನ್ನು ರಕ್ಷಿಸುವುದು ಹಾಗೂ ಜಾನುವಾರುಗಳನ್ನು ಕೃಷಿಯೊಂದಿಗೆ ಸಂಯೋಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇದರೊಂದಿಗೆ ಸೂಕ್ಷ್ಮ ನೀರಾವರಿ ಪದ್ಧತಿ, ಬೀಜಾಮೃತ, ಜೀವಾಮೃತದಂತಹ ನೈಸರ್ಗಿಕ ಒಳಹರಿವುಗಳ ಬಳಕೆ, ಹಸಿರು ಗೊಬ್ಬರ ಮತ್ತು ಕೃಷಿ ಅರಣ್ಯೀಕರಣದ ಮೂಲಕ ರೈತರು ಅತ್ಯುತ್ತಮ ಫಲಿತಾಂಶ ಪಡೆಯಬಹುದು.
ಹಿಂದಿನ ದಶಕಗಳಿಗೆ ಹೋಲಿಸಿದರೆ ಭಾರತದ ಕೃಷಿ ವಲಯ ಉತ್ತಮ ಬೆಳವಣಿಗೆ ದಾಖಲಿಸಿದ್ದರೂ, ತೀವ್ರ ಕೃಷಿ ಮತ್ತು ಹವಾಮಾನ ವೈಪರೀತ್ಯಗಳು ಸವಾಲಾಗಿ ಪರಿಣಮಿಸಿವೆ. ಈ ಸವಾಲುಗಳನ್ನು ಎದುರಿಸಲು ಕೇಂದ್ರ ಸರ್ಕಾರವೂ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. 2024ರಲ್ಲಿ ಪ್ರಾರಂಭಿಸಲಾದ ‘ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್’ ಅಡಿಯಲ್ಲಿ ರೈತರಿಗೆ ಪ್ರತಿ ಎಕರೆಗೆ ವರ್ಷಕ್ಕೆ 4,000 ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈಗಾಗಲೇ ಲಕ್ಷಾಂತರ ರೈತರು ಮತ್ತು ಹೆಕ್ಟೇರ್ ಭೂಮಿ ಇದರ ವ್ಯಾಪ್ತಿಗೆ ಬಂದಿದೆ.
ಇದರೊಂದಿಗೆ ‘ಪರ್ ಡ್ರಾಪ್ ಮೋರ್ ಕ್ರಾಪ್’ ಯೋಜನೆಯು ಹನಿ ಮತ್ತು ತುಂತುರು ನೀರಾವರಿಯನ್ನು ಭರ್ಜರಿಯಾಗಿ ಉತ್ತೇಜಿಸುತ್ತಿದ್ದು, ಕೋಟ್ಯಂತರ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ ಮಳೆಯಾಶ್ರಿತ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ ಹಾಗೂ 2015ರಿಂದ ಜಾರಿಯಲ್ಲಿರುವ ‘ಮಣ್ಣಿನ ಆರೋಗ್ಯ ಕಾರ್ಡ್’ ಯೋಜನೆಯು ರೈತರಿಗೆ ಪ್ಲಾಟ್-ವಾರು ಮಣ್ಣು ಪರೀಕ್ಷಾ ವರದಿ ಮತ್ತು ಬೆಳೆ-ನಿರ್ದಿಷ್ಟ ಶಿಫಾರಸುಗಳನ್ನು ಒದಗಿಸುವ ಮೂಲಕ ದೊಡ್ಡ ಮಟ್ಟದ ನೆರವು ನೀಡುತ್ತಿವೆ.
ಎಸ್ ‘ಪುನರುತ್ಪಾದಕ ಕೃಷಿ ಪದ್ಧತಿಯು ಕೇವಲ ಪರಿಸರ ರಕ್ಷಣೆ ಮಾತ್ರವಲ್ಲದೆ, ರೈತರ ಇನ್ಪುಟ್ ವೆಚ್ಚವನ್ನು ಗಣನೀಯವಾಗಿ ತಗ್ಗಿಸಲಿದೆ. ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು, ಇಂಗಾಲದ ಸಂಗ್ರಹ ಹೆಚ್ಚಿಸಲು ಮತ್ತು ಸುಸ್ಥಿರ ಅಭಿವೃದ್ಧಿ ಸಾಧಿಸಲು ಈ ಹಸಿರು ಕೃಷಿ ಪದ್ಧತಿಯೇ ನಮಗೆ ಮುಂದಿನ ದಾರಿಯಾಗಿದೆ ಅಂತ ಹೇಳಬಹುದು.
