ಕರ್ನಾಟಕ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ನಾಯಕತ್ವ ಬದಲಾವಣೆಯ ಕುರಿತು ತೀವ್ರ ಚರ್ಚೆ ಮುನ್ನೆಲೆಗೆ ಬಂದಿದೆ. ಮುಂಬರುವ ಸೆಪ್ಟೆಂಬರ್ 12 ರಂದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಅಲ್ಲೋಲ-ಕಲ್ಲೋಲ ಉಂಟಾಗಲಿದೆ ಎಂದು ಜೆಡಿಎಸ್ ಶಾಸಕ ಬಿ.ಎನ್. ರವಿಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯವಿರುವ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲದಿದ್ದರೂ, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಅಚ್ಚರಿಯ ಭವಿಷ್ಯ ನುಡಿದ್ದಾರೆ.
ಮಾಜಿ ಸಚಿವ ಬಿ. ನಾಗೇಂದ್ರ ಅವರ ಪ್ರಕರಣವನ್ನು ಉದಾಹರಣೆ ನೀಡಿದ ಶಾಸಕ ರವಿಕುಮಾರ್, ಸಚಿವ ಸ್ಥಾನದಲ್ಲಿ ದಿಢೀರ್ ಬದಲಾವಣೆಯಾಗಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಅದೇ ರೀತಿ ಡಿ.ಕೆ. ಶಿವಕುಮಾರ್ ಅವರ ವಿಚಾರದಲ್ಲೂ ಬದಲಾವಣೆ ನಿಶ್ಚಿತ ಎಂದಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ನೀಡಿರುವ ಹೇಳಿಕೆಗಳ ಹಿಂದೆ ದೊಡ್ಡ ರಾಜಕೀಯ ರಹಸ್ಯವಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಅಲ್ಲದೆ, ಒಂದು ವೇಳೆ ಮುಖ್ಯಮಂತ್ರಿ ಸ್ಥಾನ ಬದಲಾದರೆ, ಹಿರಿಯ ರಾಜಕಾರಣಿ ಕೆ.ಹೆಚ್. ಮುನಿಯಪ್ಪ ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ತಮ್ಮ ವೈಯಕ್ತಿಕ ಬಯಕೆ ಎಂದು ರವಿಕುಮಾರ್ ಮುಕ್ತವಾಗಿ ಅಭಿಪ್ರಾಯಪಟ್ಟಿದ್ದಾರೆ. ಸೆಪ್ಟೆಂಬರ್ 12 ರ ಗಡುವು ನೀಡಿ ಶಾಸಕರು ನೀಡಿರುವ ಈ ಹೇಳಿಕೆಗಳು ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ತಳಮಳ ಸೃಷ್ಟಿಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿವೆ ಅಂತಾನೆ ಹೇಳಬಹುದು.ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿವೆ ಎಂಬುದನ್ನ ಕಾದು ನೋಡೋಣ..




