Political News: ಕಾಂಗ್ರೆಸ್ ಪಕ್ಷ ಮನೆಯ“ಂದು ಮೂರು ಬಾಗಿಲಾಗಿದೆ. ಡಿಕೆಶಿ ಸರ್ಕಾರ 1 ಕಡೆ, ಸಿದ್ದರಾಮಯ್ಯ 1 ಕಡೆ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ 1 ಕಡೆಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿನ್ನೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ವ್ಯಂಗ್ಯವಾಡಿದ್ದರು.
ಇದೀಗ ವಿಜಯೇಂದ್ರ ವ್ಯಂಗ್ಯಕ್ಕೆ ಬಿ.ಕೆ.ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಮನೆ ಮೂರು ಬಾಗಿಲು ಎಂದು ಹೇಳುವ ವಿಜಯೇಂದ್ರ ಮೊದಲು ತಮ್ಮ ಮನೆಯ ಬಾಗಿಲುಗಳನ್ನು ಎಣಿಸಿಕೊಳ್ಳಲಿ. ಕಾಂಗ್ರೆಸ್ ಮನೆಗೆ ಮೂರು ಬಾಗಿಲುಗಳಿವೆ ಎಂದು ಹೇಳುವ ಬಿಜೆಪಿಯ ಮನೆ ಈಗ ‘ನೂರು ಬಾಗಿಲು’ ಆಗಿದೆ. ಇಷ್ಟಕ್ಕೂ ಕಾಂಗ್ರೆಸ್ ಪಕ್ಷದ ಕಚೇರಿಯ ಬಾಗಿಲು, ಕಿಟಕಿಗಳನ್ನು ಎಣಿಸುತ್ತಾ ಕೂರಲು ವಿಜಯೇಂದ್ರ ಕೆಪಿಸಿಸಿಯ ವಾಚ್ ಮೆನ್ ಆಗಿದ್ದಾರೆಯೇ? ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರು ರಾಜಕೀಯವಾಗಿ ಉತ್ತರ ಕೊಡಬೇಕಾದ ಪ್ರಶ್ನೆಗಳಿಗೆ ‘ದೇಶದ್ರೋಹ’ ಎಂಬ ಪದವನ್ನು ಬಳಸುತ್ತಿದ್ದಾರೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪ್ರತಿಯೊಬ್ಬರನ್ನೂ ದೇಶದ್ರೋಹಿ ಎಂದು ಕರೆಯುವುದು ಪ್ರಜಾಪ್ರಭುತ್ವದ ಭಾಷೆಯಲ್ಲ. ಸಂವಿಧಾನವನ್ನು ಗೌರವಿಸುವವರು ಆರೋಪ ಮಾಡುವ ಮೊದಲು ಕಾನೂನು ಮತ್ತು ನ್ಯಾಯಾಲಯದ ತೀರ್ಪುಗಳನ್ನು ಗೌರವಿಸಬೇಕು.
ನಾನು ಉಮರ್ ಖಾಲಿದ್ ಅವರನ್ನು ರಾಷ್ಟ್ರವಾದಿ ಎಂದು ಕರೆದಿದ್ದೇನೆ. ಅದರಲ್ಲಿ ನನಗೆ ಯಾವುದೇ ಹಿಂಜರಿಕೆಯಿಲ್ಲ. ಯಾರೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ ಎಂಬ ಕಾರಣಕ್ಕೆ ಅವರನ್ನು ನ್ಯಾಯಾಲಯದಲ್ಲಿ ಅಪರಾಧಿ ಎಂದು ಘೋಷಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಯಾವ ನ್ಯಾಯಾಲಯ ಖಾಲೀದ್ ನನ್ನು ದೇಶದ್ರೋಹಿ ಎಂದಿದೆ? ಆರು ವರ್ಷಗಳ ಕಾಲ ವಿಚಾರಣೆ ನಡೆಸದೆ ಯಾಕೆ ಮೀನಾಮೇಷ ಎಣಿಸುತ್ತಿದೆ? ಆರೋಪ ಮತ್ತು ಅಪರಾಧ ಸಾಬೀತಾಗಿರುವುದು ಒಂದೇ ಅಲ್ಲ. ಈ ಸರಳ ಕಾನೂನು ತತ್ವವನ್ನು ವಿಜಯೇಂದ್ರ ಮತ್ತು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳದೆ ತಮ್ಮ ಅವಿವೇಕಿತನವನ್ನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ದ ಹರಿಪ್ರಸಾದ್ ಕಿಡಿಕಾರಿದ್ದಾರೆ.
ದೇಶಪ್ರೇಮದ ಸರ್ಟಿಫಿಕೇಟ್ ನೀಡುವ ಅಧಿಕಾರವನ್ನು ಬಿಜೆಪಿಗೆ ಯಾರೂ ಕೊಟ್ಟಿಲ್ಲ. ದೇಶಪ್ರೇಮ ಎಂದರೆ ಬಿಜೆಪಿಯನ್ನು ಬೆಂಬಲಿಸುವುದು ಅಲ್ಲ. ಸಂವಿಧಾನ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ನ್ಯಾಯದ ಪರ ನಿಲ್ಲುವುದೂ ದೇಶಪ್ರೇಮವೇ. ಸ್ವತಂತ್ರ ಹೋರಾಟ, ಸಂವಿಧಾನ,ತ್ರಿವರ್ಣ ಧ್ವಜ, ರಾಷ್ಟ್ರಗೀತೆಯನ್ನು ವಿರೋಧ ಮಾಡಿದವರಿಂದ ದೇಶಪ್ರೇಮದ ಪಾಠ ಹೇಳಿಸಿಕೊಳ್ಳುವ ದಾರಿದ್ರ್ಯ ನನಗಂತೂ ಬರುವುದಿಲ್ಲ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಉಮರ್ ಖಾಲಿದ್ ಅವರು ಆರ್ ಎಸ್ ಎಸ್ ನಂತೆ ಪಾಕಿಸ್ತಾನದ ಜೊತೆ ಗುಪ್ತ ಚರ್ಚೆ ನಡೆಸಿಲ್ಲ. ಸಂಘಪರಿವಾರದವರಂತೆ ಐಎಸ್ಐ ಏಜೆಂಟ್ ಗಳ ಜೊತೆ ಮಾತುಕತೆಯನ್ನೂ ನಡೆಸಿಲ್ಲ. ಕನಿಷ್ಟಪಕ್ಷ ಆಮಂತ್ರಣವೇ ಇಲ್ಲದ ಪಾಕ್ ಪ್ರಧಾನಿಯ ಕುಟುಂಬದ ಕಾರ್ಯಕ್ರಮಕ್ಕೆ ಹೋಗಿ ಬಿರಿಯಾನಿ ತಿಂದಿಲ್ಲ. ದೇಶದ ಜನರ ಪರವಾಗಿ ಮಾತನಾಡಿದ ವಿದ್ಯಾವಂತ ಜನಪರ ಚಳವಳಿಗಾರ ಉಮರ್ ಖಾಲಿದ್ ರನ್ನು ದೇಶದ್ರೋಹಿ ಎನ್ನುವವರೇ ನಿಜವಾದ ರಾಷ್ಟ್ರದ್ರೋಹಿಗಳು.ಉಮರ್ ಖಾಲಿದ್ ಅವರನ್ನು ನಾನು ರಾಷ್ಟ್ರವಾದಿ ಎಂದು ಕರೆದಿದ್ದೇನೆ. ನನ್ನ ಹೇಳಿಕೆಯನ್ನು ‘ದೇಶದ್ರೋಹ’ ಎಂದು ಕರೆಯುವ ಹಕ್ಕು ಯಾರಿಗೂ ಇಲ್ಲ.
ವಿಜಯೇಂದ್ರ ಕಾಂಗ್ರೆಸ್ ಪಕ್ಷದ ಮನೆಯ ಬಾಗಿಲು ಎಣಿಸುವುದನ್ನು ಬಿಟ್ಟು, ಮೊದಲು ಬಿಜೆಪಿಯೊಳಗಿನ ಭಿನ್ನಾಭಿಪ್ರಾಯಗಳಿಗೆ ಉತ್ತರಿಸಲಿ. ಕೆಪಿಎಸ್ಸಿಯ ಅಧ್ಯಕ್ಷರನ್ನು ಪೇಮೆಂಟ್ ಮೇಲೆ ಆಯ್ಕೆಮಾಡಿ ಅದೇ ಹಣದಲ್ಲೇ ಬಿಜೆಪಿಯ ಅಧ್ಯಕ್ಷನಾಗಿದ್ದಾರೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಅವರ ಪ್ರಶ್ನೆಗಳಿಗೆ ಉತ್ತರಿಸಲಿ. ಆಮೇಲೆ ಕೆಪಿಸಿಸಿ ಕಚೇರಿಯ ಸುತ್ತ ಅಲೆದು ನಮ್ಮ ಕಚೇರಿಯ ಬಾಗಿಲಿನ ಲೆಕ್ಕ ಹಾಕುತ್ತಿರಲಿ. ಮುಂದಿನ ಐದು ವರ್ಷವೂ ವಿಜಯೇಂದ್ರಗೆ ಇದೇ ಕೆಲಸವನ್ನು ನಾವು ವಹಿಸಲಿದ್ದೇವೆ ಎಂದು ವಿಜಯೇಂದ್ರ ವಿರುದ್ಧ ಬಿ.ಕೆ.ಹರಿಪ್ರಸಾದ್ ತಿರುಗೇಟು.




