ಕೋಮು ಪ್ರಚೋದನೆ, ರಕ್ತ ಕಣ್ಣೀರು ಬಿಟ್ಟು ಕರಾವಳಿಗೆ ಬಿಜೆಪಿ ಕೊಟ್ಟ ಕೊಡುಗೆ ಶೂನ್ಯ!: ಪ್ರಿಯಾಂಕ್ ಖರ್ಗೆ

Political News: ಸಿಎಂ ಡಿ.ಕೆ.ಶಿವಕುಮಾರ್ ಮಂಗಳೂರು ಭೇಟಿ ಬಗ್ಗೆ ಬಿಜೆಪಿ ವ್ಯಂಗ್ಯವಾಡಿದ್ದರ ಬಗ್ಗೆ ಗೃಹಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದಿರುವ ಪ್ರಿಯಾಂಕ್, ಬಿಜೆಪಿ ಅಧಿಕಾರದಲ್ಲಿದ್ದಾಗ ಏನು ಮಾಡಿತ್ತು ಮತ್ತು ನಾವು ಅಧಿಕಾರದಲ್ಲಿದ್ದಾಗ ಏನು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಮಂಗಳೂರು ಕ್ಯಾಬಿನೆಟ್ ಬಗ್ಗೆ “ಮೂಗಿಗೆ ತುಪ್ಪ ಸವರುವ ಕ್ಯಾಬಿನೆಟ್” ಎನ್ನುವುದು ಬಿಜೆಪಿಗರ ಹತಾಶೆಯ ಟೀಕೆ, ಕರಾವಳಿಗರ ಕೈಗೆ ರಕ್ತ ಸವರುವುದನ್ನೇ ಕೆಲಸವನ್ನಾಗಿ ಮಾಡಿಕೊಂಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿಪರ ನಿಲುವುಗಳನ್ನು ನೋಡಿ ತಳಮಳ ಶುರುವಾಗಿದೆ.. ಬಿಜೆಪಿ ಕರಾವಳಿಯನ್ನು ಕೋಮುವಾದದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿತ್ತು, ನಾವು ಅಭಿವೃದ್ಧಿಯ ಪ್ರಯೋಗಶಾಲೆಯಾಗಿ ಪರಿವರ್ತಿಸುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬಿಜೆಪಿ ಕರಾವಳಿಯನ್ನು ಕೇವಲ ಮತಬ್ಯಾಂಕಿನ ಪ್ರದೇಶವಾಗಿ ಮಾತ್ರ ಕಾಣುತ್ತದೆ, ನಾವು ಕರಾವಳಿಯಲ್ಲಿ ಪ್ರಗತಿಯ ಸಾಧ್ಯತೆಗಳನ್ನು ಕಾಣುತ್ತಿದ್ದೇವೆ. ಬಿಜೆಪಿಗರು ಕರಾವಳಿಗೆ ಕಾಲಿಡುತ್ತಿದ್ದಿದ್ದು ಹೊಡಿ, ಬಡಿ ಎಂಬ ಪ್ರಚೋದನೆಯ ಭಾಷಣ ಕುಟ್ಟುವುದಕ್ಕೆ ಮಾತ್ರವಾಗಿತ್ತು, ನಾವು ಕರಾವಳಿಗರ ಆತ್ಮಗೌರವವನ್ನು ಗೌರವಿಸಲು ಕಾಲಿಟ್ಟಿದ್ದೇವೆ ಎಂದು ಗೃಹಸಚಿವರು ಹೇಳಿದ್ದಾರೆ.

ಬಿಜೆಪಿ ಕರಾವಳಿಯಲ್ಲಿ ಕೋಮು ಕಲಹದ ಚರ್ಚೆಗಳನ್ನು ಮಾತ್ರ ಹುಟ್ಟು ಹಾಕುತ್ತಿತ್ತು, ನಾವು ಡೇಟಾ ಸೆಂಟರ್, ವಾಟರ್ ಮೆಟ್ರೋ, ಪ್ರವಾಸೋದ್ಯಮ, ಮರೀನ್ ಬಯೋಟೆಕ್, ಮಾಹಿತಿ ತಂತ್ರಜ್ಞಾನಗಳಂತಹ ಪ್ರಗತಿಪರ ವಿಷಯಗಳ ಚರ್ಚೆ ಹುಟ್ಟುಹಾಕಿದ್ದೇವೆ.

ದಕ್ಷಿಣ ಕನ್ನಡದ ಜನರ ಬೇಡಿಕೆಗಳನ್ನು ಕೇಳಿಸಿಕೊಳ್ಳುವ ಕೆಲಸ ಬಿಜೆಪಿಗರು ಮಾಡಿರಲಿಲ್ಲ, ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಿದ್ದು ನಮ್ಮ ಸರ್ಕಾರ. ಕೋಮು ಪ್ರಚೋದನೆ ಮತ್ತು ರಕ್ತ ಕಣ್ಣೀರು ಇವೆರಡನ್ನೂ ಹೊರತುಪಡಿಸಿದರೆ ಕರಾವಳಿಗೆ ಬಿಜೆಪಿ ಕೊಟ್ಟ ಕೊಡುಗೆ ಶೂನ್ಯ! ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಕರಾವಳಿಯ 3 ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಘೋಷಣೆ ಐತಿಹಾಸಿಕವಾದುದು, ಕರಾವಳಿಯನ್ನು ಮತಬ್ಯಾಂಕ್ ಮಾಡಿಕೊಂಡಿದ್ದ ಬಿಜೆಪಿಗೆ ಈ ಅಭಿವೃದ್ಧಿಪರ ನಿಲುವು ತಳೆಯುವುದಕ್ಕೆ ಸಾಧ್ಯವಾಗಲಿಲ್ಲ ಏಕೆ? ಜನತೆ ಕೋಮು ವಿಷಯಗಳನ್ನು ಬಿಟ್ಟು ಪ್ರಗತಿಯ ವಿಷಯಗಳತ್ತ ಚಿಂತನೆಗಳನ್ನು ಆರಂಭಿಸಿರುವುದೇ ಬಿಜೆಪಿಗೆ ಅಸ್ತಿತ್ವದ ಭಯ ಕಾಡಲು ಶುರುವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.

About The Author