Political News: ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ದಿನವ ಆಚರಿಸುವ ಕುರಿತು ಸಚಿವ ಯು.ಟಿ.ಖಾದರ್ ಹೇಳಿಕೆಗೆ, ಬಿಜೆಪಿ ನಾಯಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಕೋಮನ್ನು ಮೆಚ್ಚಿಸಲು ಕಾಂಗ್ರೆಸ್ ಯಾವ ಹಂತಕ್ಕೆ ಬೇಕಾದರೂ ಇಳಿಯಬಲ್ಲದು ಎನ್ನುವುದಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಚರಿಸುವುದಾಗಿ ಸರ್ಕಾರ ನಿರ್ಧರಿಸುವುದೇ ಸಾಕ್ಷಿ! ಮೊದಲನೆಯದಾಗಿ, ವಿಧಾನಸೌಧದಲ್ಲಿ ಉರ್ದು ಹಬ್ಬ ಮಾಡಿ ಎಂದು ಕೇಳಿದವರು ಯಾರು? ಈ ಹಿಂದೆ ದೂರದರ್ಶನದಲ್ಲಿ ಉರ್ದು ವಾರ್ತೆ ಆರಂಭಿಸಲು ಹೊರಟು ಅದಕ್ಕೆ ತೀವ್ರ ಪ್ರತಿರೋಧ, ಗಲಭೆ ಉಂಟಾದುದನ್ನು ಸರ್ಕಾರ ಮರೆತಿದೆಯೇ? ಎಂದು ರವಿ ಪ್ರಶ್ನಿಸಿದ್ದಾರೆ.
ಇಂದು ಉರ್ದು ಹಬ್ಬ ಮಾಡಲು ಹೊರಟು, ನಾಳೆ ಅದು ಕೋಮು ಸ್ವರೂಪ ತಳೆಯುವುದಿಲ್ಲ ಎಂದು ಏನು ಗ್ಯಾರಂಟಿ? ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ನೆಮ್ಮದಿ ಇರುವುದು ಬೇಕಿಲ್ಲ. ತನ್ನ ವೋಟ್ ಬ್ಯಾಂಕಿಗಾಗಿ ಒಂದು ಕೋಮನ್ನು ಅನುನಯಿಸಿ, ರಾಜ್ಯದ ನೆಮ್ಮದಿ ಭಂಗ ಮಾಡುವುದೇ ಡಿ.ಕೆ.ಶಿವಕುಮಾರ್ ಸರ್ಕಾರದ ಉದ್ದೇಶವಿದ್ದಂತಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಈಗಾಗಲೇ ಕನ್ನಡ ಪರ ಸಂಘಟನೆಗಳು ಸರ್ಕಾರದ ನಿಲುವನ್ನು ವಿರೋಧಿಸಿದ್ದು, ಉರ್ದು ಹಬ್ಬದ ಯೋಚನೆ ಕೈಬಿಡುವಂತೆ ಆಗ್ರಹಿಸಿವೆ. ಕನ್ನಡ ಪರ ಸಂಘಟನೆಗಳ ಧ್ವನಿಗೆ ನಮ್ಮ ಬೆಂಬಲವೂ ಇದೆ. ಕನ್ನಡದ ಅಸ್ಮಿತೆಯಾದ ವಿಧಾನಸೌಧದ ಮೆಟ್ಟಿಲಲ್ಲಿ ಉರ್ದು ಹಬ್ಬವನ್ನು ಯಾವ ಕನ್ನಡಿಗರೂ ಒಪ್ಪಲು ಸಾಧ್ಯವಿಲ್ಲ. ತಕ್ಷಣವೇ ಸರ್ಕಾರ ಈ ವಿವೇಚನಾರಹಿತ ನಿಲುವನ್ನು ಕೈಬಿಡಬೇಕು. ಇಲ್ಲವಾದರೆ ಸರ್ಕಾರ ಈ ದುಸ್ಸಾಹಸಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಸಿ.ಟಿ.ರವಿ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.




