Political News: ಪೋಲೀಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್, ದೆಹಲಿಯ ಕುಮಾರಸ್ವಾಮಿ ನಿವಾಸದಲ್ಲಿ ಸ್ಟಿಂಗ್ ಆಪರೇಷನ್ ವಿಷಯಕ್ಕೆ ಸಂಬಂಧಿಸಿದಂತೆ ವಹಿವಾಟು ನಡೆದಿತ್ತು ಎಂದು ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆ ನೀಡಿದ್ದೇ ತಡ, ಕಾಂಗ್ರೆಸ್ ನಾಯಕರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ. ಈ ಬಗ್ಗೆ ಸಚಿವ ಚಲುವರಾಾಯಸ್ವಾಮಿ ಎಕ್ಸ್ ಖಾತೆ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ನೀವು ಅಂದುಕೊಂಡಿದ್ದೇ ಸತ್ಯ, ನೀವು ಹೇಳಿದ್ದೇ ಅಂತಿಮ ಎಂಬ ಭ್ರಮೆಯ ಲೋಕದಿಂದ ಮೊದಲು ಹೊರಬನ್ನಿ ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರೇ. ಈ ದೇಶದ ಸಂವಿಧಾನ, ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಗೆ ಗೌರವ ಕೊಡುವುದನ್ನು ಮೊದಲು ಕಲಿಯಿರಿ ಎಂದು ಚಲುವರಾಯಸ್ವಾಮಿ ವಾಾಗ್ದಾಳಿ ನಡೆಸಿದ್ದಾರೆ.
ದಿನಕ್ಕೊಂದು ಬಣ್ಣ, ಕ್ಷಣಕ್ಕೊಂದು ವೇಷ ಬದಲಿಸುವುದು ನಿಮ್ಮ ಹಳೆಯ ಚಾಳಿ. ನಿನ್ನೆ ಮೊನ್ನೆಯವರೆಗೂ ಮಾನ್ಯ ಸಿದ್ದರಾಮಯ್ಯನವರ ಮೇಲೆ ದಿಢೀರನೆ ಮೊಸಳೆ ಕಣ್ಣೀರು ಸುರಿಸಿ, ಅವರ ಬಗ್ಗೆ ಅಪಾರ ಪ್ರೀತಿ ಉಕ್ಕಿ ಹರಿದಂತೆ ನಟಿಸಿದಿರಿ. ನಮ್ಮ ನಾಯಕರ ತೇಜೋವಧೆ ಮಾಡುವ ರೀತಿಯ ಮಾತನ್ನಾಡಿ, ಗೊಂದಲ ಸೃಷ್ಟಿಸುವ ದುರುದ್ದೇಶದಿಂದ ಕಲ್ಪಿತ ‘ಸ್ಟಿಂಗ್ ಆಪರೇಷನ್’ ಕಥೆ ಕಟ್ಟಿ ಪ್ರಚಾರಕ್ಕೆ ಬಿಟ್ಟಿರಿ. ಆದರೆ, ತನಿಖೆ ಮುಂದುವರಿದು ಈ ಕಪೋಲಕಲ್ಪಿತ ಷಡ್ಯಂತ್ರದ ಅಸಲಿ ರೂವಾರಿಗಳು ಹಾಗೂ ಪ್ರಚಾರದ ಹಿಂದಿರುವ ಕಾಣದ ಕೈಗಳು ತಮ್ಮ ಬುಡದಲ್ಲೇ ಇವೆ ಎಂಬ ಸತ್ಯ ಬಯಲಾಗುತ್ತಿದ್ದಂತೆ, ಭಯಗೊಂಡು ಈಗ ಮತ್ತೆ ಉಲ್ಟಾ ಹೊಡೆಯುತ್ತಿದ್ದೀರಿ!
ತನಿಖೆಯನ್ನು ದಾರಿ ತಪ್ಪಿಸಲು, “ಸಿದ್ದರಾಮಯ್ಯನವರ ಮೇಲೆ ಏಕೆ ತನಿಖೆಯಾಗಿಲ್ಲ? ಅವರಿಗೆ ಕ್ಲೀನ್ ಚಿಟ್ ಕೊಟ್ಟವರು ಯಾರು? ನ್ಯಾಯಾಲಯ ತಾನೇ ಕ್ಲೀನ್ ಚಿಟ್ ಕೊಡಬೇಕಿರುವುದು?” ಎಂದು ಹೊಸ ನಾಟಕ ಶುರುಮಾಡಿದ್ದೀರಿ. ನವೆಂಬರ್ 1ರ ರಾತ್ರಿ “ಫುಲ್ ಸಿನಿಮಾ ಎಲ್ಲಾ ಮಾಡಿರೋನ್ ನಾನು” ಎಂದು ಅರಚಿದ್ದೀರಿ, ನಿನ್ನೆ “ಹಮಾರೇ ಪಾಸ್ ಫುಲ್ ಪಿಕ್ಷರ್ ಹೈ” ಎಂದು ಡೈಲಾಗ್ ಹೊಡೆದಿದ್ದೀರಿ! ಆದರೆ ನಿಮ್ಮ ಪತ್ರಿಕಾಗೋಷ್ಠಿಯಲ್ಲಿ ನಿಮ್ಮ ಕೈಯಲ್ಲಿರುವುದು ಕೇವಲ ‘ಖಾಲಿ ಡಬ್ಬಿ’ ಎಂಬುದು ಇಡೀ ರಾಜ್ಯದ ಜನತೆಗೆ ಸ್ಪಷ್ಟವಾಗಿ ಗೊತ್ತಾಗಿದೆ ಎಂದು ಚಲುವರಾಯಸ್ವಾಮಿ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.




