Political News: ಪೋಲೀಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್, ದೆಹಲಿಯ ಕುಮಾರಸ್ವಾಮಿ ನಿವಾಸದಲ್ಲಿ ಸ್ಟಿಂಗ್ ಆಪರೇಷನ್ ವಿಷಯಕ್ಕೆ ಸಂಬಂಧಿಸಿದಂತೆ ವಹಿವಾಟು ನಡೆದಿತ್ತು ಎಂದು ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆ ನೀಡಿದ್ದೇ ತಡ, ಕಾಂಗ್ರೆಸ್ ನಾಯಕರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ. ಈ ಬಗ್ಗೆ ಸಚಿವ ಕೃಷ್ಣಭೈರೇಗೌಡ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿಯವರೇ ಈ ಆರೋಪಿತ ‘ಸ್ಟಿಂಗ್ ವಿಡಿಯೋ’ ಬಿಡುಗಡೆಯ ರೂವಾರಿಯಾಗಿ, ಅವರ ಸೋಶಿಯಲ್ ಮೀಡಿಯಾ ತಂಡವೇ ಇದರಲ್ಲಿ ನೇರವಾಗಿ ಭಾಗಿಯಾಗಿ, ಈ ಕೆಲಸವನ್ನು ನಿರ್ವಹಿಸಲು ದೆಹಲಿಯ ಅವರ ಅಧಿಕೃತ ನಿವಾಸವನ್ನೇ ಬಳಸಿಕೊಳ್ಳಲಾಗಿತ್ತು ಹಾಗೂ ಹಣದ ವಹಿವಾಟು ಕೂಡ ನಡೆದಿತ್ತು. ಇದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರ: ಮಾಜಿ ಮುಖ್ಯಮಂತ್ರಿಯವರ ಗೌರವಕ್ಕೆ ಧಕ್ಕೆ ತರುವುದು ಮತ್ತು ಇದರ ಆಪಾದನೆಯನ್ನು ಹಾಲಿ ಮುಖ್ಯಮಂತ್ರಿಯವರ ಮೇಲೆ ಹಾಕುವುದು ರಾಜಕೀಯ ಕುತಂತ್ರದ ಮಾಸ್ಟರ್ ಸ್ಟ್ರೋಕ್! ಎಂದು ಕೃಷ್ಣಭೈರೇಗೌಡ ವಾಗ್ದಾಳಿ ನಡೆಸಿದ್ದಾರೆ.
ಕೆಲವೊಮ್ಮೆ ನಿಜ ಜೀವನವೇ ಕಾಲ್ಪನಿಕ ಕಥೆಗಳಿಗಿಂತಲೂ ಹೆಚ್ಚು ವಿಲಕ್ಷಣವಾಗಿರುತ್ತದೆ. ಇಂತಹ ಉನ್ನತ ಹಂತದಲ್ಲಿರುವ ಜನರು ಸಾರ್ವಜನಿಕ ಜೀವನವನ್ನು ಮತ್ತಷ್ಟು ಅಧೋಗತಿಗೆ ತಳ್ಳುತ್ತಿದ್ದಾರೆ. ಸಿಕ್ಕ ಅವಕಾಶಗಳನ್ನು ಜನರ ಕೆಲಸ ಮಾಡಲು ಬಳಸಿಕೊಳ್ಳುವ ಬದಲಾಗಿ, ಪ್ರತಿದಿನ ಇದನ್ನೇ ಮಾಡುತ್ತಾ ಕೂತರೆ, ರಾಜಕೀಯ ಕುತಂತ್ರಗಳೇ ಏಕೈಕ ಕೆಲಸವಾಗಿಬಿಡುತ್ತದೆ: ಅತ್ಯಂತ ಕೀಳುಮಟ್ಟದ ಚಾರಿತ್ರ್ಯ ವಧೆಯಲ್ಲಿ ತೊಡಗುವುದು ಮತ್ತು ಅದರ ಹೊರೆಯನ್ನು ಜಾಣತನದಿಂದ ಬೇರೆಯವರ ಮೇಲೆ ಹೊರಿಸುವುದು. ಇದು ಜನರಿಗೆ ಮಾಡುವ ಅನ್ಯಾಯ. ಜನರು ನಮ್ಮನ್ನು ಈ ಸ್ಥಾನದಲ್ಲಿ ಕೂರಿಸಿರುವುದು ಇದಕ್ಕಾಗಿಯೇ? ಜನರು ನಮಗೆ ಈ ಅಧಿಕಾರ ಮತ್ತು ಸ್ಥಾನವನ್ನು ನೀಡಿದ್ದು ಇದಕ್ಕೇನಾ? ಬೇರೆಯವರು ಅಧಿಕಾರದಲ್ಲಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಇಷ್ಟೆಲ್ಲಾ ಮಾಡಬೇಕೇ? ಕೇವಲ ದ್ವೇಷ ಮತ್ತು ಅಸಹಿಷ್ಣುತೆಯಿಂದಾಗಿ ಈ ಮಟ್ಟಕ್ಕೆ ಇಳಿಯಬೇಕೇ? ಎಂದು ಕೃಷ್ಣಭೈರೇಗೌಡ ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಆರೋಪ ಟೀಕೆ ಇವೆಲ್ಲ ಒಂದು ಭಾಗ. ಆದರೆ, ಇದೊಂದೇ ನಮ್ಮ ಕೆಲಸ ಆಗಿಬಿಟ್ಟರೆ, ಜನ ಏನಾಗಬೇಕು. ಇಷ್ಟು ಕೀಳುಮಟ್ಟಕ್ಕೆ ಇಳಿದು ಇದನ್ನೇ ತಮ್ಮ ಏಕೈಕ ಕೆಲಸವನ್ನಾಗಿ ಮಾಡಿಕೊಳ್ಳುವುದು ಜನರಿಗೆ ಮಾಡುವ ದ್ರೋಹ ಮಾತ್ರವಲ್ಲ, ಇಡೀ ರಾಜಕೀಯ ವ್ಯವಸ್ಥೆಯ ಮರ್ಯಾದೆ ಮತ್ತಷ್ಟು ಹಾಳುಮಾಡುತ್ತದೆ ಎಂದು ಕೃಷ್ಣಭೈರೇಗೌಡ ವಾಗ್ದಾಳಿ ನಡೆಸಿದ್ದಾರೆ.




