Political News: ಕಾಂಗ್ರೆಸ್ ಮಾಜಿ ಸಚಿವ ರಾಜಣ್ಣರ ಪುತ್ರ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ ಕಾರಣಕ್ಕೆ, ಸಚಿವ ಬಾಲಕೃಷ್ಣ ರಾಜಣ್ಣ ಫ್ಯಾಮಿಲಿ ವಿರುದ್ಧ ಹರಿಹಾಯ್ದಿದ್ದಾರೆ. ಪಕ್ಷಕ್ಕೆ ರಾಜೀನಾಮೆ ನೀಡಿ ಹೋಗಲಿ ಎಂದಿದ್ದಾರೆ.
ಈ ವಿಷಯ ಇದೀಗ ವಿರೋಧ ಪಕ್ಷದವರಿಗೆ ಆಹಾರವಾಗಿದ್ದು, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಈ ಬಗ್ಗೆ ಎಕ್ಸ್ ಖಾತೆ ಮೂಲಕ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಎಲ್ಲೆ ಮೀರಿ ಹೋಗಿದೆ. ಈಗ ಸಚಿವ ಬಾಲಕೃಷ್ಣ ನೇರವಾಗಿ ಮಾಜಿ ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಯ ಆರೋಪ ಮಾಡಿದ್ದಾರೆ. “ರಾಜಣ್ಣ ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ” ಎಂದು ಸವಾಲು ಹಾಕಿದ್ದಾರೆ. ಸ್ಟಿಂಗ್ ಆಪರೇಶನ್, ವಿಧಾನಪರಿಷತ್ ಚುನಾವಣೆಯಲ್ಲಿ ಹೀನಾಯ ಸೋಲು, ಬಣ ರಾಜಕೀಯ, ಎಸ್ ಐಆರ್ ಹೋರಾಟಕ್ಕಾಗಿ ದೆಹಲಿಗೆ ಓಟ – ಇವೆಲ್ಲದರಿಂದಾಗಿ ಇಡೀ ಆಡಳಿತ ಮಕಾಡೆ ಮಲಗಿದೆ ಎಂದು ಆರ್.ಅಶೋಕ್ ಹೇಳಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ರೈತರಿಗೆ ಬರ ಪರಿಹಾರ ಸಿಗುತ್ತಿಲ್ಲ, ಕಬ್ಬು ಬೆಳೆಗಾರರ ಸಂಕಷ್ಟ ಆಲಿಸುತ್ತಿಲ್ಲ, ಶಾಲೆಗಳ ಅಭಿವೃದ್ಧಿ ನಡೆಯುತ್ತಿಲ್ಲ, ವಿಕಲಚೇತನರಿಗೆ ಪಿಂಚಣಿ ಸಿಗುತ್ತಿಲ್ಲ, ಗುತ್ತಿಗೆದಾರರಿಗೆ ಬಾಕಿ ಬಿಲ್ ಸಿಕ್ಕಿಲ್ಲ. ಹೀಗೆ ಎಲ್ಲದರಲ್ಲೂ ‘ಇಲ್ಲ’ ಎಂಬುದನ್ನು ನಿಮ್ಮ ಕಾಂಗ್ರೆಸ್ ಆಡಳಿತ ತೋರಿಸಿಕೊಟ್ಟಿದೆ.
ಈ ಸರ್ಕಾರದಲ್ಲಿ ಸ್ಥಳೀಯ ಮುಖಂಡರಿಂದ ಆರಂಭವಾಗಿ, ಶಾಸಕರು, ಸಚಿವರು ಪರಸ್ಪರ ಕಿತ್ತಾಡಿಕೊಂಡು ಜನರ ಸಂಕಷ್ಟಗಳನ್ನು ಕೇಳುವವರಿಲ್ಲದಂತಾಗಿದೆ. ಇನ್ನು ಎಲ್ಲರೂ ಬೀದಿಗೆ ಬಂದು ಹೊಡೆದಾಟ ಮಾಡುವುದೊಂದು ಬಾಕಿ ಇದೆ. ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿ ಯಾವುದೇ ತಾಳಮೇಳ ಇಲ್ಲ. ಈ ಕಿತ್ತುಹೋದ ನಿಮ್ಮ ಆಡಳಿತಕ್ಕೆ ತೇಪೆ ಹಾಕುವ ಬದಲು ರಾಜೀನಾಮೆ ನೀಡಿ ಅಧಿಕಾರದಿಂದ ತೊಲಗಿ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.




