ರಾಮಾಯಣಕ್ಕೆ ವಿವಾದದ ಕಿಚ್ಚು – ಬಹಿಷ್ಕಾರಕ್ಕೆ ಹಿಂದೂ ಸಂಘಟನೆಗಳ ಕರೆ!

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಈಗ ಹೊಸ ವಿವಾದಕ್ಕೆ ಸಿಲುಕಿದೆ. ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಚಿತ್ರದ ವಿರುದ್ಧ ಕೆಲವು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಚಿತ್ರದಲ್ಲಿ ರಾಮಾಯಣದ ಮೂಲ ಕಥೆಯನ್ನೇ ಬದಲಾಯಿಸಲಾಗಿದೆ, ರಾವಣನನ್ನು ವೈಭವೀಕರಿಸಲಾಗಿದೆ ಎಂಬ ಗಂಭೀರ ಆರೋಪ ಮಾಡಿವೆ. ಅಷ್ಟೇ ಅಲ್ಲ, ಸನಾತನ ಹಿಂದೂಗಳು ಈ ಚಿತ್ರವನ್ನು ಬಹಿಷ್ಕರಿಸಬೇಕು ಎಂದೂ ಕರೆ ನೀಡಿವೆ. ಹಾಗಾದ್ರೆ ಸಂಘಟನೆಗಳ ಆಕ್ಷೇಪಗಳೇನು? ಚಿತ್ರತಂಡದ ವಾದವೇನು? ನೋಡೋಣ ಈ ವರದಿಯಲ್ಲಿ.

ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ‘ರಾಮಾಯಣ’ ಸಿನಿಮಾ ಇದೀಗ ವಿವಾದದ ಕೇಂದ್ರವಾಗಿದೆ. ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಕೆಲವು ಹಿಂದೂ ಸಂಘಟನೆಗಳು ಚಿತ್ರದ ಕಥೆ ಮತ್ತು ಪಾತ್ರಗಳ ಚಿತ್ರಣದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

ಸಂಘಟನೆಗಳ ಆರೋಪದ ಪ್ರಕಾರ, ಚಿತ್ರದಲ್ಲಿ ರಾವಣನನ್ನು ದಮನಿತರ ರಕ್ಷಕನಂತೆ, ಬಡವರಿಗೆ ಚಿನ್ನದ ಮನೆಗಳನ್ನು ನೀಡಿದವನಂತೆ ತೋರಿಸಲಾಗಿದೆ. ಮತ್ತೊಂದೆಡೆ, ರಾಮ ಮತ್ತು ಲಕ್ಷ್ಮಣರ ಶೌರ್ಯಕ್ಕೆ ಧಕ್ಕೆ ತರುವಂತಹ ದೃಶ್ಯಗಳಿವೆ. ಲಕ್ಷ್ಮಣನ ಪಾತ್ರವನ್ನು ಅವಹೇಳನ ಮಾಡಲಾಗಿದೆ. ಸೀತೆ ರಾಕ್ಷಸರ ವಿರುದ್ಧ ಹೋರಾಡುವ ದೃಶ್ಯಗಳೂ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ ಎಂದು ಆಕ್ಷೇಪಿಸಲಾಗಿದೆ.

ಇದನ್ನೆಲ್ಲಾ ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಆರೋಪಿಸಿರುವ ಸಂಘಟನೆಗಳು, ಚಿತ್ರ ಕಮ್ಯುನಿಸ್ಟ್ ಅಜೆಂಡಾವನ್ನು ಉತ್ತೇಜಿಸುತ್ತಿದೆ ಎಂದು ಟೀಕಿಸಿವೆ. ಅಲ್ಲದೆ, ಸೆನ್ಸಾರ್ ಮಂಡಳಿ ಹಿಂದೂಗಳ ಧಾರ್ಮಿಕ ಭಾವನೆಗಳ ಬಗ್ಗೆಯೂ ಸಂವೇದನಾಶೀಲವಾಗಿರಬೇಕು ಎಂದು ಒತ್ತಾಯಿಸಿವೆ.

ಇನ್ನು ಈ ವಿವಾದಕ್ಕೆ ಪ್ರತಿಕ್ರಿಯಿಸಿರುವ ನಿರ್ಮಾಪಕ ನಮಿತ್ ಮಲ್ಹೋತ್ರಾ, ಚಿತ್ರವು ವಾಲ್ಮೀಕಿ ರಾಮಾಯಣವನ್ನು ಆಧರಿಸಿದ್ದರೂ, ರಾಮಾಯಣದ ಸುಮಾರು 300 ವಿವಿಧ ಆವೃತ್ತಿಗಳಲ್ಲಿನ ಅಂಶಗಳನ್ನೂ ಒಳಗೊಂಡಿದೆ ಎಂದು ಹೇಳಿದ್ದಾರೆ.

ಹೀಗಾಗಿ ಸಿನಿಮಾ ಸುತ್ತ ಪರ-ವಿರೋಧದ ಚರ್ಚೆ ಜೋರಾಗಿದ್ದು, ಮುಂದಿನ ದಿನಗಳಲ್ಲಿ ವಿವಾದ ಯಾವ ತಿರುವು ಪಡೆಯಲಿದೆ ಅನ್ನೋದು ಕುತೂಹಲ ಮೂಡಿಸಿದೆ.

About The Author