ಕಾಂಗ್ರೆಸ್ ಮೈತ್ರಿಗೆ ಎನ್‌ಸಿಪಿ ಕೈಕೊಡುತ್ತಾ? ಕ್ಷೇತ್ರ ಪುನರ್ವಿಂಗಡಣೆ ಮಸೂದೆ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ಬೆಂಬಲ ನೀಡಲು ಮುಂದಾಗಿರುವ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಇದೀಗ ಅಧಿಕಾರ ಹಂಚಿಕೆಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆಗೆ ಕೇಂದ್ರ ಸಚಿವ ಸ್ಥಾನ ನೀಡಬೇಕೆಂಬ ಪ್ರಸ್ತಾಪವೂ ಮುನ್ನೆಲೆಗೆ ಬಂದಿದೆ.
ಹೌದು, ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡುವ ವಿಚಾರವಾಗಿ ಬಿಜೆಪಿ ಮತ್ತು ಎನ್‌ಸಿಪಿ ನಡುವೆ ತೆರೆಮರೆಯಲ್ಲಿ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದ್ದು, ಈ ಮಸೂದೆಗೆ ಬೆಂಬಲ ನೀಡುವ ಬದಲಾಗಿ ಕೇಂದ್ರ ಸಚಿವ ಸಂಪುಟದಲ್ಲಿ ಸುಪ್ರಿಯಾ ಸುಳೆಗೆ ಸ್ಥಾನ ನೀಡಬೇಕು ಎಂಬ ಬೇಡಿಕೆಯನ್ನು ಎನ್‌ಸಿಪಿ ಮುಂದಿಟ್ಟಿದೆ ಎನ್ನಲಾಗಿದೆ. ಕೇಂದ್ರದಲ್ಲಿ ಸಚಿವ ಸ್ಥಾನ ಮಾತ್ರವಲ್ಲ, ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದಲ್ಲೂ ಎರಡು ಕ್ಯಾಬಿನೆಟ್ ಸಚಿವ ಸ್ಥಾನಗಳನ್ನು ಪಕ್ಷ ಕೇಳಿದೆ ಎಂಬ ಮಾತು ಕೇಳಿ ಬಂದಿದೆ.
ಹಿರಿಯ ನಾಯಕ ಜಯಂತ್ ಪಾಟೀಲ್ ಅವರಿಗೆ ಹಣಕಾಸು ಖಾತೆ ಹಾಗೂ ಜಿತೇಂದ್ರ ಅವ್ಹಾದ್ ಅವರಿಗೆ ಮತ್ತೊಂದು ಸಚಿವ ಸ್ಥಾನ ನೀಡುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಇದರ ಜೊತೆಗೆ ಎರಡು ರಾಜ್ಯ ಸಚಿವ ಸ್ಥಾನಗಳಿಗೂ ಬೇಡಿಕೆ ಇಡಲಾಗಿದೆ ಎಂದು ವರದಿಗಳು ಹೇಳಿವೆ. ಇನ್ನು ಸುಪ್ರಿಯಾ ಸುಳೆಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಮಾಡುವಂತೆ ಶರದ್ ಪವಾರ್ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿಯನ್ನು ಸುಪ್ರಿಯಾ ತಳ್ಳಿಹಾಕಿದ್ದಾರೆ. ತಮ್ಮ ಪಕ್ಷಕ್ಕೆ ವಿಧಾನಸಭೆಯಲ್ಲಿ ಕೇವಲ ಹತ್ತು ಶಾಸಕರಿರುವಾಗ ಇಂತಹ ಬೇಡಿಕೆಗಳಿಗೆ ಅರ್ಥವಿಲ್ಲ ಎಂದಿದ್ದಾರೆ.
ಸದ್ಯ ಲೋಕಸಭೆಯಲ್ಲಿ ಎನ್‌ಸಿಪಿ ಎಂಟು ಸಂಸದರನ್ನು ಹೊಂದಿದೆ. ಹೀಗಾಗಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ವಿಚಾರದಲ್ಲಿ ಪಕ್ಷದ ನಿರ್ಧಾರ ಕುತೂಹಲ ಮೂಡಿಸಿದೆ.




