ನಾಯಕ ರೋಹಿತ್ ಶರ್ಮಾ ಕೈ ವಶವಾದ ಟಿ20 ಸರಣಿ

ಕೊಲ್ಕತ್ತಾ : ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನೆನ್ನೆ ನಡೆದ ಮೂರನೇ ಟಿ20  ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 73 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಟಿ20  ಸರಣಿಯನ್ನು ಭಾರತ ಸಂಪೂರ್ಣವಾಗಿ ಗೆಲ್ಲುವುದರ ಮೂಲಕ ಟಿ20 ವಿಶ್ವಕಪ್ ಸೋಲಿನ ಸೇಡನ್ನು ನ್ಯೂಜಿಲೆಂಡ್ ವಿರುದ್ಧ ತೀರಿಸಿಕೊಂಡಿದೆ.ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಉತ್ತಮ ಆರಂಭವನ್ನು ಮಾಡಿದರು.   ರೋಹಿತ್ ಶರ್ಮಾ 31 ಎಸೆತಗಳಲ್ಲಿ 56 ರನ್ ಬಾರಿಸಿ ಇಶ್ ಸೋಧಿ ಅವರ ಬೌಲಿಂಗ್‌ನಲಿ ಕಾಟ್ ಆಂಡ್ ಬೌಲ್ಡ್ ಮಾಡಿದರು, ಇಶಾನ್ ಕಿಶನ್ 21 ಎಸೆತಗಳಲ್ಲಿ 29 ರನ್ ಬಾರಿಸಿ ಮಿಚೆಲ್ ಸಾಂಟ್‌ನರ್ ಅವರ ಬೌಲಿಂಗ್‌ನಲ್ಲಿ ಟಿಮ್ ಸೀಫರ್ಟ್ ಅವರು ಕ್ಯಾಚ್ ಹಿಡಿದಿದ್ದಾರೆ.

 ನಂತರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ 4 ಎಸೆತಗಳಲ್ಲಿ ಶೂನ್ಯದಿಂದ ಮಾರ್ಟಿನ್ ಗಪ್ಟಿಲ್ ಅವರಿಗೆ ಕ್ಯಾಚ್ ನೀಡಿದರು. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ  ರಿಷಭ್ ಪಂತ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಶ್ರೇಯಸ್ ಅಯ್ಯರ್ 25 ರನ್ ಗಳಿಸಿ ಔಟ್ ಆದರೆ ವೆಂಕಟೇಶ ಅಯ್ಯರ್ 20 ರನ್ ಕಲೆ ಹಾಕಿದರು. ಇನ್ನುಳಿದಂತೆ ಹರ್ಷಲ್ ಪಟೇಲ್ 18 ರನ್, ಅಕ್ಷರ್ ಪಟೇಲ್ ಅಜೇಯ 2 ರನ್ ಮತ್ತು ಕೊನೆಯಲ್ಲಿ ಆಟವಾಡಿದ ದೀಪಕ್ ಚಹರ್ 8 ಎಸೆತಗಳಲ್ಲಿ ಅಜೇಯ 21 ರನ್ ಚಚ್ಚಿದರು.

ಇನ್ನು ನ್ಯೂಜಿಲೆಂಡ್ ತಂಡದ ಪರ ಮಿಚೆಲ್ ಸಾಂಟ್‌ನರ್ 4 ಓವರ್ ಬೌಲಿಂಗ್ ಮಾಡಿ 27 ರನ್ ನೀಡಿ 3 ವಿಕೆಟ್ ಪಡೆಯುವುದರ ಮೂಲಕ ಮಿಂಚಿದರೆ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗ್ಯುಸನ್ ಮತ್ತು ಇಶ್ ಸೋಧಿ ತಲಾ 1 ವಿಕೆಟ್ ಪಡೆದರು.

ಭಾರತದ 185 ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಳಿದ ಮಾರ್ಟಿನ್ ಗಪ್ಟಿಲ್ 36 ಎಸೆತಗಳಲ್ಲಿ 51 ರನ್ ಗಳಿಸಿ ಉತ್ತಮ ಆಟವನ್ನಾಡಿದ್ದು ಬಿಟ್ಟರೆ ತಂಡದ ಉಳಿದ ಯಾವುದೇ ಆಟಗಾರನೂ ಸಹ ಗುರಿಯನ್ನು ಬೆನ್ನತ್ತುವಲ್ಲಿ ಶ್ರಮವಹಿಸಿ ಬ್ಯಾಟ್ ಬೀಸಲೇ ಇಲ್ಲ. ಉಳಿದಂತೆ ಡೇರಿಲ್ ಮಿಚೆಲ್ 5, ಮಾರ್ಕ್ ಚಾಂಪ್ ಮನ್ 0, ಗ್ಲೆನ್ ಫಿಲಿಪ್ಸ್ 0, ಟಿ ಸೀಫರ್ಟ್ 17, ಜೇಮ್ಸ್ ನೀಶಮ್ 3, ಮಿಚೆಲ್ ಸ್ಯಾಂಟ್ನರ್ 2, ಆ್ಯಡಂ ಮಿಲ್ನೆ 7, ಇಶ್ ಸೋಧಿ 9, ಲಾಕಿ ಫರ್ಗ್ಯೂಸನ್ 14 ಮತ್ತು  ಬೌಲ್ಟ್ ಅಜೇಯ 2 ರನ್ ಕಲೆಹಾಕಿದರು. ಈ ಮೂಲಕ ನ್ಯೂಜಿಲೆಂಡ್ 17.2 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲ್ ಔಟ್ ಆಯಿತು. ಹೀಗಾಗಿ ಭಾರತ 73 ರನ್‌ಗಳ ಜಯ ಸಾಧಿಸುವುದರ ಮೂಲಕ 3 ಪಂದ್ಯಗಳ ಟಿ 20 ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ವೈಟ್ ವಾಷ್ ಸಾಧನೆ ಮಾಡಿದೆ.

About The Author