ಪತ್ನಿಯ ಶಾಪಕ್ಕೆ ಗುರಿಯಾಗಿದ್ದ ಬ್ರಹ್ಮದೇವ: ಅಷ್ಟಕ್ಕೂ ಸಾವಿತ್ರಿ ಕೊಟ್ಟ ಶಾಪವೇನು..?

ಶಾಪ ಅನ್ನೋದು ದೇವಾನುದೇವತೆಗಳಿಗೂ ಬಿಟ್ಟಿಲ್ಲ. ಇಂದು ನಾವು ಬ್ರಹ್ಮನ ಪತ್ನಿಯಾಗಿದ್ದ ಸಾವಿತ್ರಿ ಬ್ರಹ್ಮನ ಮೇಲೆ ಏಕೆ ಕೋಪಗೊಂಡಳು..? ಬ್ರಹ್ಮ ಮಾಡಿದ ತಪ್ಪಾದರೂ ಏನು..? ಸಾವಿತ್ರಿ ಬ್ರಹ್ಮನಿಗೆ ಏನು ಶಾಪ ಕೊಟ್ಟಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ವಜ್ರನಾಶನೆಂಬ ರಾಕ್ಷಸ ಅಟ್ಟಹಾಸ ಮೆರೆಯುತ್ತಿದ್ದ ಸಂದರ್ಭದಲ್ಲಿ, ಬ್ರಹ್ಮನು ವಜ್ರನಾಶನೊಂದಿಗೆ ಹೋರಾಡಿ ಆತನನ್ನು ಸಂಹರಿಸಿದನು. ತದನಂತರ ಬ್ರಹ್ಮಾಂಡದ ಒಳಿತಿಗಾಗಿ ಬ್ರಹ್ಮ ಪುಷ್ಕರ ಗಣ್ಯದಲ್ಲಿ ಯಜ್ಞವನ್ನು ಏರ್ಪಡಿಸುತ್ತಾನೆ. ಆ ಯಜ್ಞದಲ್ಲಿ ಆಹುತಿ ಕೊಡಬೇಕೆಂದರೆ, ಪತ್ನಿ ಸಮೇತನಾಗಿ ಬ್ರಹ್ಮ ಆಹುತಿ ಕೊಡಬೇಕಾಗುತ್ತದೆ. ಆದ್ರೆ ಬ್ರಹ್ಮನ ಪತ್ನಿ ಸಾವಿತ್ರಿ ಆ ಯಜ್ಞಕ್ಕೆ ಬರುವುದು ತಡವಾಗುತ್ತದೆ.

ಬ್ರಹ್ಮ ತುಂಬ ಸಮಯ ಕಾಯುತ್ತಾನೆ. ಆದರೂ ಕೂಡ ಸಾವಿತ್ರಿ ಯಜ್ಞ ನಡೆಯುವ ಜಾಗಕ್ಕೆ ಬರುವುದಿಲ್ಲ. ಆಗ ಬ್ರಹ್ಮ ಅಲ್ಲೇ ಇದ್ದ ಗಾಯತ್ರಿ ಎಂಬ ಕನ್ಯೆಯನ್ನು ವರಿಸಿ, ಅವಳೊಂದಿಗೆ ಯಜ್ಞಕ್ಕೆ ಆಹುತಿ ನೀಡುತ್ತಾನೆ. ಆ ಹೊತ್ತಿಗೆ ಸಾವಿತ್ರಿ ಯಜ್ಞ ನಡೆಯುವ ಜಾಗಕ್ಕೆ ಬರುತ್ತಾಳೆ. ತನ್ನ ಪತಿಯೊಂದಿಗೆ ಗಾಯತ್ರಿ ಆಹುತಿ ನೀಡುವುದನ್ನು ಕಂಡ ಸಾವಿತ್ರಿ ಕೋಪಗೊಳ್ಳುತ್ತಾಳೆ.

ಬ್ರಹ್ಮನಿಗೆ ಸಾವಿತ್ರಿ ಶಾಪ ನೀಡುತ್ತಾಳೆ. ನೀನು ದೇವರಾಗಿದ್ದರೂ ಕೂಡ ಭೂಲೋಕದಲ್ಲಿ ನಿನ್ನನ್ನು ಯಾರೂ ಪೂಜಿಸಬಾರದು. ನಿನಗೆ ಯಾವುದೇ ಪ್ರಾಶಸ್ತ್ಯ ನೀಡಬಾರದು ಎಂದು ಶಾಪ ನೀಡುತ್ತಾಳೆ. ನಂತರ ಕೋಪ ಕಡಿಮೆಯಾದ ಬಳಿಕ ಕೊಟ್ಟ ಶಾಪ ಹಿಂದೆಗೆದುಕೊಳ್ಳಬೇಕೆಂದು ದೇವತೆಗಳು ಬೇಡಿಕೊಳ್ಳುತ್ತಾರೆ. ಆಗ ಸಾವಿತ್ರಿ, ಪುಷ್ಕರ ಗಣ್ಯದಲ್ಲಿ ಮಾತ್ರ ಭಕ್ತರು ನಿಮ್ಮನ್ನು ಪೂಜಿಸಲಿ. ಬೇರೆಲ್ಲೂ ನಿಮ್ಮ ಪೂಜೆ ನಡೆಯುವುದಿಲ್ಲವೆಂದು ಹೇಳುತ್ತಾಳೆ.

ಆದ್ದರಿಂದಲೇ ನಾವು ಶಿವ ಮತ್ತು ವಿಷ್ಣುವನ್ನು ಮಾತ್ರ ಪೂಜಿಸುತ್ತೇವೆ. ಆದ್ರೆ ಬ್ರಹ್ಮನನ್ನು ಪೂಜಿಸುವುದಿಲ್ಲ. ಮತ್ತು ಬ್ರಹ್ಮನಿಗಾಗಿ ದೇವಸ್ಥಾನವೂ ಇಲ್ಲ. ಇನ್ನು ಪುಷ್ಕರ ಗಣ್ಯದಲ್ಲಿ ಕಾರ್ತಿಕ ಹುಣ್ಣಿಮೆಯಂದು ಅದ್ಧೂರಿ ಪೂಜೆ ಸಲ್ಲಿಸಲಾಗುತ್ತದೆ. ಮತ್ತು ಆ ವೇಳೆ 5 ದಿನಗಳ ಕಾಲ ಇಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ದೇಶದ ಹಲವೆಡೆಯಿಂದ ಭಕ್ತಾದಿಗಳು ಬ್ರಹ್ಮನ ದರ್ಶನ ಪಡೆಯಲು ಬರುತ್ತಾರೆ.

About The Author