ನಾವು ದೇವರ ಪೂಜೆ ಏನೋ ಮಾಡುತ್ತೇವೆ. ಆದ್ರೆ ಯಾವ ದಿನ ಯಾವ ದೇವರಿಗೆ ಪೂಜಿಸಬೇಕು ಅನ್ನೋದು ಹಲವರಿಗೆ ಗೊತ್ತಿಲ್ಲ. ಪ್ರತಿದಿನ ಪೂಜೆ ಮಾಡಲಾಗದಿದ್ದರೂ, ಆ ದೇವರನ್ನ ನೆನೆಯಬಹುದು. ಹಾಗಾದ್ರೆ ಯಾವ ದಿನ ಯಾವ ದೇವರನ್ನು ಪೂಜಿಸಬೇಕು ಅನ್ನೋದನ್ನ ತಿಳಿಯೋಣ ಬನ್ನಿ..
ಸೋಮವಾರ. ಸೋಮವಾರದ ದಿನ ಶಿವನ ಪೂಜೆ ಮಾಡಬೇಕು. ಭಕ್ತರು ಶಿವನ ದೇವಸ್ಥಾನಕ್ಕೆ ಹೋಗಿ ಜಲಾಭಿಶೇಕ ಮಾಡುತ್ತಾರೆ. ಅಥವಾ ಶಿವನ ದರ್ಶನ ಮಾಡಿ ಪ್ರಾರ್ಥಿಸಿ ಬರುತ್ತಾರೆ. ನೀವು ಈ ದಿನ ದೇವಸ್ಥಾನಕ್ಕೇ ಹೋಗಬೇಕು ಅಂತೇನಿಲ್ಲ. ಬದಲಾಗಿ ಮನೆಯಲ್ಲಿ ಶಿವನನ್ನು ನೆನೆದು ಓಂ ನಮಃ ಶಿವಾಯ ಎಂಬ ಜಪ ಮಾಡಿದ್ರೆ ಸಾಕು.
ಮಂಗಳವಾರ. ಮಂಗಳವಾರದ ದಿನ ಗಣೇಶನ ಪೂಜೆ ಮಾಡಬೇಕು. ಮಹಾರಾಷ್ಟ್ರದಲ್ಲಿ ಮಂಗಳವಾರದ ದಿನ ಹೆಚ್ಚಿನವರು ಮಾಂಸ ಮದ್ಯವನ್ನು ಸೇವಿಸುವುದಿಲ್ಲ. ಮತ್ತು ಪ್ರತಿ ಹಿಂದೂಗಳ ಮನೆಯಲ್ಲಿ ಒಬ್ಬರಾದರೂ ಗಣೇಶನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ.
ಬುಧವಾರ. ಬುಧವಾರದ ದಿನ ರಾಮ ಅಥವಾ ವಿಷ್ಣುವನ್ನು ಪೂಜಿಸುತ್ತಾರೆ. ಈ ದಿನ ರಾಮನಾಮ ಜಪ ಮಾಡಬಹುದು. ವಿಷ್ಣು ಸ್ವರೂಪವಾದ ವೆಂಕಟೇಶನ ದರ್ಶನಕ್ಕೆ ಭಕ್ತಾದಿಗಳು ಈ ದಿನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಗುರುವಾರ. ಗುರುವಾರದ ದಿನ ರಾಯರು, ಸಾಯಿ ಬಾಬಾ, ದತ್ತಾತ್ರೇಯ, ದಕ್ಷಿಣಾ ಮೂರ್ತಿ ಹೀಗೆ ಗುರು ಸ್ವರೂಪರ ಪೂಜೆ ಮಾಡುತ್ತಾರೆ. ದೇವರಿಗಿಂತ ಹೆಚ್ಚು ದೇವರಿಗೆ ಹತ್ತಿರವಾಗಿರುವವರ ಅಂದ್ರೆ ಗುರುಗಳನ್ನ ಸ್ಮರಿಸಬೇಕು ಎಂದು ಹಿರಿಯರು ಹೇಳುತ್ತಾರೆ. ಹಾಗಾಗಿ ಈ ದಿನ ನೀವು ದೇವಸ್ಥಾನಕ್ಕೆ ಹೋಗದಿದ್ದರೂ, ಮನೆಯಲ್ಲೇ ಗುರುಗಳನ್ನ ನೆನೆದರೂ ಸಾಕು.
ಶುಕ್ರವಾರ. ಶುಕ್ರವಾರದ ದಿನ ಲಕ್ಷ್ಮೀ ದೇವಿಯ ಪೂಜೆ ಮಾಡಲಾಗುತ್ತದೆ. ಈ ದಿನ ಮನೆಯನ್ನ ಶುದ್ಧಿಗೊಳಿಸಿ, ಅಂಗಳದಲ್ಲಿ ರಂಗೋಲಿ ಹಾಕಿ, ಮನೆಯ ಗೃಹಲಕ್ಷ್ಮೀ ಲಕ್ಷ್ಮೀ ಪೂಜೆ ಮಾಡುತ್ತಾಳೆ.
ಶನಿವಾರ: ಶನಿವಾರ ಶನಿದೇವರ ಅಥವಾ ಹನುಮಂತನ ಪೂಜೆ ಮಾಡಲಾಗುತ್ತದೆ. ಈ ದಿನ ಹಲವರು ಶನಿ ದೇವರಿಗೆ ಎಳ್ಳೆಣ್ಣೆ ಅರ್ಪಿಸುತ್ತಾರೆ. ಹನುಮನ ದೇವಸ್ಥಾನಕ್ಕೆ ಹೋಗುತ್ತಾರೆ. ಹನುಮಾನ್ ಚಾಲೀಸಾ ಪಠಿಸುತ್ತಾರೆ. ಅಥವಾ ರಾಮನಾಮ ಜಪಿಸಿ ದೇವರಿಗೆ ಪೂಜಿಸುತ್ತಾರೆ.
ರವಿವಾರ. ರವಿವಾರ ರವಿಯ ವಾರ. ಅಂದ್ರೆ ಸೂರ್ಯನನ್ನು ನೆನೆದು ಆರೋಗ್ಯಕ್ಕಾಗಿ ಪ್ರಾರ್ಥಿಸುವ ದಿನ.




