ಲಖನೌ : ಮುಂಬರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗಾಗಿ ಪ್ರಚಾರ ಕೈಗೊಂಡಿದ್ದ ಬಿಜೆಪಿ ಶಾಸಕರೊಬ್ಬರನ್ನು ಗ್ರಾಮಸ್ಥರು ಅಟ್ಟಾಡಿಸಿ, ವಾಪಸ್ ಕಳುಹಿಸಿರುವ ಘಟನೆ ನಡೆದಿದೆ.
ಶಾಸಕರ ವಿಧಾನಸಭಾ ಕ್ಷೇತ್ರವಾದ ಮುಜಾಫರ್ನಗರದಲ್ಲೇ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಖತೌಲಿ ಮೂಲದ ಬಿಜೆಪಿ ಶಾಸಕ ವಿಕ್ರಮ್ ಸಿಂಗ್ ಸೈನಿ ಅವರು ಸಭೆ ಒಂದರಲ್ಲಿ ಪಾಲ್ಗೊಳ್ಳಲು ಬುಧವಾರ ಗ್ರಾಮಕ್ಕೆ ಬಂದಿದ್ದಾಗ ಇಡೀ ಗ್ರಾಮಸ್ಥರು ಶಾಸಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಗುಂಪಿನ ಗ್ರಾಮಸ್ಥರು ಶಾಸಕ ಸೈನಿ ಕಾರನ್ನು ಹಿಂಬಾಲಿಸಿ, ಕಾರಿನಿಂದ ಕೆಳಗೆ ಇಳಿಯುವಂತೆ ಕೂಗಾಡಿದ್ದಾರೆ. ಅಲ್ಲದೆ, ಶಾಸಕರ ವಿರುದ್ಧ ಘೋಷಣೆ ಕೂಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಅಂದಹಾಗೆ ಕಳೆದ ಒಂದು ವರ್ಷದ ಪ್ರತಿಭಟನೆಯ ನಂತರ ಸರ್ಕಾರವು ರದ್ದುಗೊಳಿಸಿದ ವಿವಾದಾತ್ಮಕ ಕೃಷಿ ಕಾನೂನುಗಳಿಗೆ ಅನೇಕರು ಅಸಮಾಧಾನವನ್ನು ಹೊಂದಿದ್ದಾರೆ.
ಶಾಸಕ ವಿಕ್ರಮ್ ಸೈನಿ ವಿವಾದಾತ್ಮಕ ಹೇಳಿಕೆಯಿಂದ ಹಿಂದೊಮ್ಮೆ ಕುಖ್ಯಾತಿ ಪಡೆದಿದ್ದರು. ಭಾರತ ಸುರಕ್ಷಿತವಲ್ಲ ಎಂದು ಹೇಳುವವರಿಗೆ 2019ರಲ್ಲಿ ಬಾಂಬ್ ಬೆದರಿಕೆ ಹಾಕಿದ್ದರು. ನಮ್ಮ ದೇಶವನ್ನು ಹಿಂದುಸ್ಥಾನ್ ಎಂದು ಕರೆಯುತ್ತಾರೆ. ಇದು ಹಿಂದುಗಳಿಗೆ ಮಾತ್ರ ಸ್ವಂತ. ಗೋವುಗಳನ್ನು ಕೊಲ್ಲುವವರ ಕಾಲುಗಳನ್ನು ಕತ್ತರಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.
ಅಂದಹಾಗೆ ಉತ್ತರ ಪ್ರದೇಶದ ವಿಧಾನಸಭಾ ಚನಾವಣೆಯು ಫೆ. 10ರಂದು ಆರಂಭವಾಗಲಿದ್ದು, ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

