Hogenackal 2ನೇ ಹಂತದ ಯೋಜನೆ ಜಾರಿಗೆ ಬಿಡಲ್ಲ : ಕರ್ನಾಟಕ

ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿಯವರು ಹೊಗೇನಕಲ್ ಯೋಜನೆ 2ನೇ ಹಂತವನ್ನು ಕೈಗೆತ್ತಿಕೊಳ್ಳಲು 4,600 ಕೋಟಿ ವೆಚ್ಚದ ಡಿ.ಪಿ.ಆರ್. (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸುವುದಾಗಿ ಘೋಷಿಸಿರುವುದನ್ನು ಕರ್ನಾಟಕ ವಿರೋಧಿಸುತ್ತದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಕಾವೇರಿ ಕಣಿವೆಯಲ್ಲಿ ನ್ಯಾಯಾಧಿಕರಣ ಹಾಗೂ ಸುಪ್ರೀಂಕೋರ್ಟ್‌ ತೀರ್ಪುಗಳಲ್ಲಿನ ನೀರಿನ ಹಂಚಿಕೆಗಳ ಅನ್ವಯವಾಗಿ ತಮಿಳುನಾಡು ರಾಜ್ಯವು ಯೋಜನೆಗಳನ್ನು ಕೈಗೊಳ್ಳಬೇಕಾಗುತ್ತದೆ. ಆದರೆ, ಈ ಯೋಜನೆಯು ವಿವರಗಳನ್ನು ನ್ಯಾಯಾಧಿಕರಣ ಅಥವಾ ಸರ್ವೋಚ್ಚ ನ್ಯಾಯಾಲಯದ ಮುಂದೆ ಪ್ರಸ್ತುತ ಪಡಿಸದೇ ಇರುವ ತಮಿಳುನಾಡಿನ ಯಾವುದೇ ಯೋಜನೆಯನ್ನು ಕರ್ನಾಟಕ ಸರ್ಕಾರ ವಿರೋಧಿಸುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಯೋಜನೆಯನ್ನು ಕರ್ನಾಟಕ ಸರ್ಕಾರ ಎಲ್ಲ ಕಾನೂನಾತ್ಮಕ ಕ್ರಮಗಳ ಮೂಲಕ ಆಕ್ಷೇಪಿಸಲಿದೆ. ತಮಿಳುನಾಡು ಪ್ರಕಟಿಸಿರುವ ಯೋಜನೆ ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯಗಳ ಭೌಗೋಳಿಕ ವ್ಯಾಪ್ತಿಯಲ್ಲಿ ಇರುವುದರಿಂದ ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ವಿವಿಧ ಆಯಾಮಗಳಲ್ಲಿ ಹಾಗೂ ಕಾನೂನಾತ್ಮಕ ಪರಿಶೀಲನೆಗೆ ಒಳಪಡಬೇಕಾಗುತ್ತದೆ ಎಂದರು.

ತಮಿಳುನಾಡು ಏಕಪಕ್ಷೀಯವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಹೊಗೇನಕಲ್ ಪ್ರದೇಶವು ಕರ್ನಾಟಕ ಮತ್ತು ತಮಿಳುನಾಡಿನ ಜಂಟಿ ಗಡಿ ಪ್ರದೇಶದಲ್ಲಿ 64 ಕಿ.ಮೀ. ಉದ್ದದ ಭೂ ಪ್ರದೇಶದ ವ್ಯಾಪ್ತಿಯನ್ನು ಹೊಂದಿರುತ್ತದೆ.

ಕಾವೇರಿ ನ್ಯಾಯಾಧಿಕರಣದ ಐತೀರ್ಪಿನ ಕಲಂ 13ರನ್ವಯ ಈ ಯೋಜನೆಯನ್ನು ರಾಷ್ಟ್ರೀಯ ಜಲ ವಿದ್ಯುತ್ ನಿಗಮ (NHPC) ಮೂಲಕ ಕೈಗೆತ್ತಿಕೊಳ್ಳಬೇಕಾಗುವುದು.ಆದರೆ, ತಮಿಳುನಾಡು ಸಿಎಂ ಘೋಷಣೆ ಮಾಡಿರುವುದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಕರ್ನಾಟಕ ಮತ್ತು ತಮಿಳುನಾಡಿನ ಹೊಗೇನಕಲ್ ಜಂಟಿ ಗಡಿ ರೇಖೆಯನ್ನು ಸರ್ವೇ ಆಫ್‌ ಇಂಡಿಯಾ (Survey of India) ಮೂಲಕ ಅಂತಿಮಗೊಳಿಸಲಾಗಿಲ್ಲ ಎಂದು ಕಾರಜೋಳ ಸ್ಪಷ್ಟಪಡಿಸಿದರು.

About The Author