ಉಡುಪಿ : ಕೊರೋನಾದ(corona) ಮೂರನೇ ಅಲೆಯ ನಡುವೆ ಉಡುಪಿ ಜಿಲ್ಲೆಯ ಕಾರ್ಕಳ(Karkala)ದಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ(Foot and Mouth Disease) ಕಾಣಿಸಿಕೊಂಡಿದ್ದು, 50ಕ್ಕೂ ಹೆಚ್ಚು ರಾಸುಗಳು ಕಾರ್ಕಳದ ಸುತ್ತಮುತ್ತಲಿನಲ್ಲಿ ಸಾವನ್ನಪ್ಪಿರುವದರಿಂದ ಅಲ್ಲಿನ ಜನರಿಗೆ ನೆಮ್ಮದಿಯ ಇಲ್ಲದಂತಾಗಿದೆ. ರೋಗಲಕ್ಷಣ ಬಂದ ಐದಾರು ದಿನಗಳಲ್ಲಿಯೇ ಹಸುಗಳು ಸಾವನ್ನಪ್ಪುತ್ತಿದ್ದು ಹಸುಗಳಿಗೆ ಚುಚ್ಚುಮದ್ದು ಹಾಗೂ ಅಗತ್ಯ ಚಿಕಿತ್ಸೆ ಕೊಡಿಸಲು ಜನರು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ. ಪಶು ಇಲಾಖೆಯ ನಿರ್ಲಕ್ಷದ ಬಗ್ಗೆ ಅಲ್ಲಿನ ಜನ ಅಕ್ರೋಶವನ್ನು ವ್ಯಕ್ತಪಡಿಸಿದ್ದು, ಒಂದರ ಮೇಲೊಂದು ರಾಸುಗಳು ಸಾವನ್ನಪ್ಪುತ್ತಿದ್ದರು,ಇಲಾಖೆಯ ಅಧಿಕಾರಿಗಳು ಗಮನ ಹರಿಸದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಸಾವನ್ನಪ್ಪಿದ ಜಾನುವಾರುಗಳನ್ನು ತಮ್ಮ ಜಮೀನುಗಳಲ್ಲಿ ಹುಳುತ್ತಿದ್ದು, ಈ ಕೂಡಲೇ ರಾಸುಗಳಿಗೆ ಅಗತ್ಯ ಚಿಕಿತ್ಸೆ ನೀಡಬೇಕೆಂದು ಪಶು ಇಲಾಖೆಗೆ ಒತ್ತಾಯಿಸಿದ್ದಾರೆ.




