ರಾಮ ರಾವಣನನ್ನು ಸಂಹಾರ ಮಾಡಿದ ಬಳಿಕ, ಲಕ್ಷ್ಮಣನನ್ನು ಕುರಿತು. ಲಕ್ಷ್ಮಣ ಇನ್ನೇನು ರಾವಣನ ಅಂತ್ಯವಾಗಲಿದೆ. ಅದಕ್ಕೂ ಮುನ್ನ ಅವನ ಕಾಲ ಬಳಿ ಕುಳಿತು, ಅವನು ಹೇಳುವ ಜೀವನ ಪಾಠವನ್ನು ಕೇಳು ಎನ್ನುತ್ತಾನೆ. ಅದಕ್ಕೆ ಲಕ್ಷ್ಮಣ, ಅಣ್ಣ ಇವನೊಬ್ಬ ರಾಕ್ಷಸರ ರಾಜ, ಇವನ ಬಳಿ ಜೀವನ ಪಾಠ ಹೇಳಿಸಿಕೊಳ್ಳುವುದೇ ಎಂದು ಕೇಳುತ್ತಾನೆ. ಆಗ ರಾಮ, ಇವನು ರಾಕ್ಷಸರ ರಾಜನೇ ಆಗಿರಬಹುದು. ಆದ್ರೆ ಈತನೊಬ್ಬ ಬ್ರಾಹ್ಮಣ, ಶಿವನನ್ನು ಕುರಿತು ತಪಸ್ಸು ಮಾಡಿ, ವರ ಪಡೆದವ. ಹಾಗಾಗಿ ಅವನ ಬಳಿ ಜೀವನ ಪಾಠ ಕೇಳು ಎನ್ನುತ್ತಾನೆ. ಹಾಗಾದ್ರೆ ರಾವಣ, ಲಕ್ಷ್ಮಣನಿಗೆ ಹೇಳಿದ ಜೀವನ ಪಾಠ ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.
ಮೊದಲನೇಯದಾಗಿ ರಾವಣ ಲಕ್ಷ್ಮಣನಿಗೆ ಹೇಳಿದ ಮಾತು, ಶುಭಸ್ಯ ಶೀಘ್ರಂ. ಅಂದರೆ, ಶುಭ ಕಾರ್ಯ ಮಾಡಲು ಯಾವಾಗಲೂ ವಿಳಂಬ ಮಾಡಬಾರದು. ಆದಷ್ಟು ಬೇಗನೇ ಶುಭಕಾರ್ಯವನ್ನು ಮಾಡಿ ಮುಗಿಸಬೇಕು. ಮತ್ತು ಅಶುಭ ಕಾರ್ಯಗಳನ್ನು ಮಾಡಲು ಹಿಂಜರಿಯಬೇಕು. ನಾನು ಶ್ರೀರಾಮನ ಶಕ್ತಿಯನ್ನು ಅರಿಯದೇ ವಿಳಂಬ ಮಾಡಿದೆ. ಹಾಗಾಗಿ ಇಂದು ನನಗೀ ಪರಿಸ್ಥಿತಿ ಬಂದಿದೆ. ಹಾಗಾಗಿ ಶುಭಕಾರ್ಯವನ್ನು ಸಾಧ್ಯವಾದಷ್ಟು ಬೇಗ ಮಾಡಬೇಕು ಎಂದ.
ಇನ್ನು ಎರಡನೇಯದಾಗಿ ನಿನ್ನ ಶತ್ರುವನ್ನ ನೀನು ತುಚ್ಛನೆಂದು ಭಾವಿಸಬೇಡ. ಇದರಿಂದಲೇ ನಿನ್ನ ಸೋಲಾಗುತ್ತದೆ. ನಾನು ಶಿವನನ್ನು ಕುರಿತು ತಪಸ್ಸು ಮಾಡಿದಾಗ, ಕಿನ್ನರರು, ದೇವತೆಗಳು, ರಾಕ್ಷಸರುಗಳಿಂದ ನನ್ನ ಸಂಹಾರವಾಗಬಾರದು ಎಂದು ಬೇಡಿದ್ದೆ. ಯಾಕೆಂದರೆ ನಾನು ಮನುಷ್ಯ ಮತ್ತು ವಾನರರನ್ನು ತುಚ್ಛರೆಂದು ತಿಳಿದಿದ್ದೆ. ಹಾಗಾಗಿಯೇ ವಾನರನಾದ ಹನುಮ, ನನ್ನ ಸೇನೆಯನ್ನೇ ನಾಶ ಮಾಡಿದ. ಮನುಷ್ಯನಾದ ರಾಮ, ನನ್ನನ್ನೇ ಸಂಹಾರ ಮಾಡಿದ ಎಂದ.
ಮೂರನೇಯದಾಗಿ ನಿನ್ನ ಜೀವನದ ಯಾವುದೇ ರಹಸ್ಯವನ್ನು ಯಾರೊಂದಿಗೂ ಹಂಚಿಕೊಳ್ಳಬೇಡ. ನಾವು ಹಲವರನ್ನು ನಂಬಿ ನಮ್ಮ ಜೀವನದ ರಹಸ್ಯಗಳನ್ನು ಹೇಳಿದರೆ, ಅವರು ಅದನ್ನೇ ತಮ್ಮ ಆಯುಧವನ್ನಾಗಿ ಬಳಸಿಕೊಂಡು, ನಿಮ್ಮ ಜೀವನದ ಜೊತೆ ಆಟವಾಡುತ್ತಾರೆ. ನನ್ನ ಸಾವು ಹೇಗಾಗುತ್ತದೆ ಅನ್ನೋ ರಹಸ್ಯ ವಿಭಿಷಣನಿಗೆ ಗೊತ್ತಿತ್ತು. ಹಾಗಾಗಿ ಇಂದು ನನಗೆ ಈ ಪರಿಸ್ಥಿತಿ ಬಂದಿದೆ. ನಾನು ಸಹೋದರನೆಂಬ ನಂಬಿಕೆಯಿಂದ ಅವನಿಗೆ ಈ ಮಾತನ್ನು ಹೇಳಿದ್ದೆ. ಆದ್ರೆ ಅವನು ಅದನ್ನು ರಾಮನಿಗೆ ಹೇಳಿ, ನನ್ನ ಸಂಹಾರವಾಗುವಂತೆ ಮಾಡಿದ ಎಂದು ಹೇಳುತ್ತಾನೆ. ಇವಿಷ್ಟು ರಾವಣ, ಲಕ್ಷ್ಮಣನಿಗೆ ಹೇಳಿದ ಜೀವನ ಪಾಠ.