ಶಿವ ವೀರಭದ್ರನ ಅವತಾರವೆತ್ತಲು ಕಾರಣವೇನು..?

ಶಂಭೋ ಎಂದರೆ ಒಲಿದು ಬರು ಭೋಲೆನಾಥ ಹಲವು ರೂಪಗಳನ್ನು ತಾಳಿದ್ದು ನಿಮಗೆ ಗೊತ್ತೇ ಇದೆ. ಅಲ್ಲದೇ, ಶಿವನ ಹಲವು ರೂಪಗಳ ಬಗ್ಗೆ ನಾವು ನಿಮಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಇಂದು ನಾವು ಶಿವ ವೀರಭದ್ರನ ರೂಪ ತಾಳಲು ಕಾರಣವೇನು ಅನ್ನೋ ಬಗ್ಗೆ ಹೇಳಲಿದ್ದೇವೆ.

ಬರೀ ದೇವತೆ,  ಮನುಷ್ಯರಿಗಷ್ಟೇ ಅಲ್ಲ, ಬದಲಾಗಿ ರಾಕ್ಷಸರಿಗೂ ಒಲಿದ ದೇವರು ಅಂದ್ರೆ ಶಿವ. ಇತ್ತ ಶಿವ ರಾಕ್ಷಸರಿಗೆ ವರ ಕೊಟ್ಟರೆ, ಅತ್ತ ಶ್ರೀ ವಿಷ್ಣು, ರಾಕ್ಷಸರ ಸಂಹಾರ ಮಾಡಲು ಹಲವು ಅವತಾರಗಳೆತ್ತಬೇಕಾಯಿತು. ಮುಖದ ಮೇಲೆ ಸದಾ ಮಂದಹಾಸ ಬೀರುವ ಶಿವ, ದುಷ್ಟರ ಸಂಹಾರಕ್ಕಾಗಿ, ಉಗ್ರ ರೂಪವನ್ನ ಸಹ ತಾಳಿದ್ದಾನೆ. ಅಂಥ ರೂಪಗಳಲ್ಲಿ ವೀರಭದ್ರ ರೂಪ ಕೂಡ ಒಂದು. ಈ ವೀರಭದ್ರ ರೂಪ ತಾಳಲು ಕಾರಣ, ದಕ್ಷ ಪ್ರಜಾಪತಿ. ದಾಕ್ಷಾಯಿಣಿ ಅಂದ್ರೆ ಸತಿ ದೇವಿಯ ತಂದೆ ದಕ್ಷ ಪ್ರಜಾಪತಿ. ಈತ ಬ್ರಹ್ಮದೇವನ ಮಗನಾಗಿದ್ದ. ಸತಿ ಶಿವನನ್ನು ಮೆಚ್ಚಿ ಮದುವೆಯಾಗಿದ್ದು, ದಕ್ಷ ರಾಜನಿಗೆ ಇದು ಇಷ್ಟವಿರಲಿಲ್ಲ. ಒಮ್ಮೆ ದಕ್ಷ ರಾಜ ಯಜ್ಞ ಮಾಡಲು ಇಚ್ಛಿಸಿದ್ದು, ಸತಿ ಮತ್ತು ಶಿವನನ್ನು ಬಿಟ್ಟು ಉಳಿದೆಲ್ಲರನ್ನೂ ಆಹ್ವಾನಿಸಿದ್ದ.

ಇದಕ್ಕೆ ಕೋಪಗೊಂಡ ಸತಿ, ತಾನೇ ದಕ್ಷ ಯಜ್ಞಕ್ಕೆ ಹೋದಳು. ಅಲ್ಲಿ ದಕ್ಷರಾಜ, ಶಿವನನ್ನು ಅವಮಾನಿಸಿದ ಕಾರಣ, ಸತಿದೇವಿ, ಅಗ್ನಿ ಕುಂಡಕ್ಕೆ ಹಾರಿ ತನ್ನ ಜೀವ ತ್ಯಾಗ ಮಾಡಿದಳು. ಆಗ ಶಿವ ಆಕೆಯ ಶವವನ್ನು ಹಿಡಿದು, ಜಟೆ ಬಿಚ್ಚಿ, ರೌದ್ರವಾಗಿ ಕುಣಿದ. ಶಿವ ರೌದ್ರಾವತಾರ ಕಾಣಲಾಗದೇ, ವಿಷ್ಣು, ಸತಿಯ ದೇಹವನ್ನು ಬೂದಿಯಾಗಿಸಿದ. ಆಗ ಶಿವನ ಜಟೆಯಿಂದ ಉದ್ಭವಿಸಿದ ಅಂಶವೇ, ವೀರಭದ್ರ.

ವೀರಭದ್ರ ಶಿವನ ಆಜ್ಞೆಯಂತೆ, ದಕ್ಷ ಪ್ರಜಾಪತಿಯ ತಲೆ ಕಡಿದು, ಸಂಹಾರ ಮಾಡಿದ. ಆಗ ಬ್ರಹ್ಮ, ವಿಷ್ಣು ಸೇರಿ, ಶಿವನ ಸಿಟ್ಟನ್ನು ಕಡಿಮೆ ಮಾಡಿ, ಯಾವ ಯಜ್ಞವನ್ನು ಅರ್ಧಕ್ಕೆ ನಿಲ್ಲಿಸುವುದು ಸರಿಯಲ್ಲ ಎಂದು ಹೇಳಿದಾಗ, ದಕ್ಷನ ದೇಹಕ್ಕೆ ಮೇಕೆಯ ಮುಖ ಹೊಂದಿಸಿ, ದಕ್ಷ ಪ್ರಜಾಪತಿಗೆ ಜೀವದಾನ ನೀಡಿದ.

About The Author