ಹಿರಿಯ ನಟ ದೊಡ್ಡಣ್ಣ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಯಶ್ ಬಗ್ಗೆ ದೊಡ್ಡಣ್ಣ ಹೆಮ್ಮೆ ಪಟ್ಟಿದ್ದಾರೆ.
ಯಶ್ ಅಪ್ಪಟ ಕನ್ನಡದ ಪ್ರತಿಭೆ. ನಮ್ಮೂರ ಹುಡುಗ. ನಾವು ಹಾಸನದವ್ರು, ಅವನು ಅದೇ ಸ್ಥಳದವನು. ಅಂಥವನು ಈ ಮಟ್ಟಿಗೆ ಬೆಳೆದಿದ್ದಾನೆ ಅಂದ್ರೆ ತುಂಬಾ ಹೆಮ್ಮೆಯಾಗತ್ತೆ. ಖುಷಿಯಾಗತ್ತೆ. ಅದಕ್ಕಿಂತ ಇನ್ನೇನು ಬೇಕು..? ಎಲ್ಲಾದ್ರೂ ಸಿಕ್ಕಿದ್ರೆ ಅಣ್ಣಾ ಚನಾಗಿದ್ದೀರಾ ಅಂತಾ ಮಾತಾಡ್ತಾರೆ. ಇಂಥ ರತ್ನಗಳೆಲ್ಲ ಹೀಗೆ ಉನ್ನತ ಮಟ್ಟಕ್ಕೆ ಹೋಗಬೇಕು ಅಂತಾ ನಟ ದೊಡ್ಡಣ್ಣ ಹಾರೈಸಿದ್ದಾರೆ.
ಇನ್ನು ತಮ್ಮ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ ದೊಡ್ಡಣ್ಣ, ಸಂಸಾರ ಸಾಗರ ಇದ್ದಂಗೆ, ಅದನ್ನ ದಾಟಿಕೊಂಡು ದಡ ಸೇರಿದವನು ಗೆದ್ದ ಹಾಗೆ ಎಂದಿದ್ದಾರೆ. ಅಲ್ಲದೇ ಇಂದಿನ ದಿನಗಳಲ್ಲಿ ಹೆಚ್ಚಾಗಿ ಡಿವೋರ್ಸ್ ಆಗುತ್ತಿರುವ ಬಗ್ಗೆ ಮಾತನಾಡಿದ ದೊಡ್ಡಣ್ಣ, ಈ ವಿಷಯದಲ್ಲಿ ತಂದೆ ತಾಯಿ ಕೊಡುವ ಸಂಸ್ಕಾರ ಮತ್ತು ಶಿಕ್ಷಣ ಬಹಳ ಮುಖ್ಯವಾಗುತ್ತದೆ. ಅದು ಬರೀ ಹೆಣ್ಣಿಗೆ ಸೀಮಿತ ಅಲ್ಲ. ಗಂಡಿಗೂ ಕೂಡ ಅನ್ವಯಿಸುತ್ತದೆ. ಗಂಡಸು ಕೂಡ ತಪ್ಪು ಮಾಡ್ಬಾರ್ದು ಎಂದಿದ್ದಾರೆ ದೊಡ್ಡಣ್ಣ.
ಅಲ್ಲದೇ, ನಮ್ಮ ಕಾಲದಲ್ಲಿ ಶಾಲೆಗೆ ಹೋಗುವಾಗ ವರ್ಷಕ್ಕೆ ಒಂದು ರೂಪಾಯಿ ಫೀಸ್ ಇತ್ತು. ಅದನ್ನ ಕಟ್ಟೋಕ್ಕೆ ನಮ್ಮ ತಂದೆ ತಾಯಿ ತುಂಬಾ ಪರದಾಡ್ತಿದ್ರು. ಶಿಕ್ಷಕರು ಚೆನ್ನಾಗಿ ಹೊಡೆದು ನಮಗೆ ಪಾಠ ಮಾಡ್ತಿದ್ರು. ಅವರ ಪೆಟ್ಟಿಂದಲೇ ನಾವು ಕಲ್ಲಿನಿಂದ ಶಿಲೆಗಳಾಗಿದ್ದೇವೆ. ಮನೆಯಲ್ಲಿ ಹಿರಿಯರಿದ್ರು, ಅಜ್ಜಾ ಅಜ್ಜಿ ಇದ್ರು, ಅವರೆಲ್ಲ ಕಥೆ ಹೇಳಿ, ನಮಗೆ ಜೀವನ ಪಾಠ ಕಲಿಸುತ್ತಿದ್ದರು.
ಇಂದಿನ ಮಕ್ಕಳಿಗೆ ಅಪ್ಪ ಅಮ್ಮ ಚೆನ್ನಾಗಿ ಓದಿಸಿ, ವಿದೇಶಕ್ಕೆ ಕಳಿಸುತ್ತಾರೆ. ಮಕ್ಕಳು ಅಲ್ಲೇ ಸೆಟಲ್ ಆಗಿ, ದುಡ್ಡು ಕಳಿಸ್ತಾರೆ. ನಂತರ ತಂದೆ ತಾಯಿಯನ್ನ ವೃದ್ಧಾಶ್ರಮಕ್ಕೆ ಕಳಿಸುತ್ತಾರೆ. ನಾವೆಲ್ಲ ಇದ್ದಾಗ ಹೀಗಿರಲಿಲ್ಲ. ಅಜ್ಜ ಅಜ್ಜಿ ಜೊತೆ ಇರುವ ಮಕ್ಕಳೆಂದೂ ಹೀಗಾಗುವುದಿಲ್ಲ. ಇಂದಿನವರು ಅಪ್ಪ ಅಮ್ಮನನ್ನು ಕರೆದುಕೊಂಡು ಹೋಗಿ ವೃದ್ಧಾಶ್ರಮಕ್ಕೆ ಬಿಡುತ್ತಾರೆ. ಹಾಗಾಗಿ ಅವರ ಮಕ್ಕಳು ಸಂಸ್ಕಾರ ಸಿಗದೇ, ಹೀಗಾಗ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.




