ಲಂಡನ್: ಮೊದಲ ಏಕದಿನ ಪಂದ್ಯ ಗೆದ್ದು ಆತ್ಮವಿಶ್ವಾಸದಲ್ಲಿ ಇರುವ ಭಾರತ ತಂಡ ಇಂದು ನಿರ್ಣಾಯಕ ಎರಡನೆ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಗುರುವಾರ ಕ್ರಿಕೆಟ್ ಕಾಶಿ ಲಾಡ್ರ್ಸ್ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಪಡೆಗೆ ಸರಣಿ ಗೆಲ್ಲಲು ಹೋರಾಡಿದರೆ ಜೋಸ್ ಬಟ್ಲರ್ ಪಡೆ ಸರಣಿ ಉಳಿಸಿಕೊಳ್ಳಲು ಗೆಲ್ಲಲ್ಲೇ ಬೇಕಾದ ಒತ್ತಡದಲ್ಲಿ ಸಿಲುಕಿದೆ.
ಓವೆಲ್ ಅಂಗಳದಂತೆ ಲಾಡ್ರ್ಸ್ ಪಿಚ್ ವರ್ತಿಸಲಿದೆ ಎಂಬ ವಿಶ್ವಾಸದಲ್ಲಿ ನಾಯಕ ರೋಹಿತ್ ಶರ್ಮಾ ಇದ್ದಾರೆ.
ತಂಡದ ತಾರಾ ಆಟಗಾರ ವೇಗಿ ಜಸ್ಪ್ರೀತ್ ಬುಮ್ರಾ ಲಯದಲ್ಲಿರುವುದು ಭಾರತ ಉತ್ಸಾಹ ಹೆಚ್ಚಿಸಿದೆ. ಇನ್ನು ಮತ್ತೊರ್ವ ವೇಗಿ ಮೊಹ್ಮದ್ ಶಮಿ ಕೂಡ ಎದುರಾಳಿ ತಂಡವನ್ನು ಧ್ವಂಸ ಮಾಡುವ ತಾಕತ್ತು ಹೊಂದಿದ್ದಾರೆ. ನಾಯಕ ರೋಹಿತ ಶರ್ಮಾ, ಶ್ರೇಯಸ್ ಅಯ್ಯರ್ ಅವರ ಫಾರ್ಮ್ ಮತ್ತು ಶಾಟ್ ಬಾಲ್ ಸಮಸ್ಯೆಗಳ ಬಗ್ಗೆ ಗಮನ ನೀಡಲಿದೆ.
ಕೆಲ ಆಟಗಾರರ ಖ್ಯಾತಿಯನ್ನು ಉಳಿಸುವುದಕ್ಕಾಗಿ ಯುವ ಬ್ಯಾಟರ್ ದೀಪಕ್ ಹೂಡಾ ಅವರನ್ನು ಆಡುವ ಹನ್ನೊಂದರ ಬಳಗದಿಂದ ಹೊರಗಿಡಲಾಗಿದೆ. ಇದರ ಒತ್ತಡವನ್ನು ಶ್ರೇಯಸ್ ಅಯ್ಯರ್‍ಗೂ ಬಿಸಿ ತಟ್ಟಲಿದೆ.
ಓವೆಲ್ ಪಂದ್ಯ ನಾಯಕ ರೋಹಿತ್ ಶರ್ಮಾಗೆ ಒಳ್ಳೆಯ ಅನುಭವ ನೀಡಿದೆ. 58 ಎಸೆತದಲ್ಲಿ 76 ರನ್ ಚಚ್ಚಿದ ಮುಂಬೈ ಆಟಗಾರ ಚೆನ್ನಾಗಿ ಆಡಬಹುದೆಂಬ ಆಶ್ವಾಸನೆ ನೀಡಿದ್ದಾರೆ.
ಇಂದಿನ ಪಂದ್ಯದಲ್ಲಿ ರೋಹಿತ್ ದೂರದೃಷ್ಟಿಯಿರುವ ನಿರ್ಧಾರಗಳನ್ನು ಕೈಗೊಂಡು ಬ್ಯಾಟಿಂಗ್‍ನಲ್ಲೂ ರನ್ ಮಳೆ ಸುರಿಸಬೇಕಿದೆ.
ಇನ್ನು ಸೋಲಿನಿಂದ ಕಂಗೆಟ್ಟಿರುವ ಇಂಗ್ಲೆಂಡ್‍ಗೆ ಜೋಸ್ ಬಟ್ಲರ್, ಜೋ ರೂಟ್, ಬೆನ್‍ಸ್ಟೋಕ್ಸ್, ಜಾನಿ ಬೈರ್‍ಸ್ಟೊ , ಜಾಸನ್ ರಾಯ್, ವೇಗಿಗಳಿಗೆ ನೆರವಾಗುವ ಲಾಡ್ರ್ಸ್ ಅಂಗಳದಲ್ಲಿ ಮತ್ತೊಂದು ಅಗ್ನ ಪರೀಕ್ಷೆಯನ್ನು ಎದುರಿಸಲಿದ್ದಾರೆ.
ಲಾಡ್ರ್ಸ್ ಅಂಗಳ ಬ್ಯಾಟರ್‍ಗಳಿಗೆ ನೆರವಾಗುತ್ತದೆ. ಆದರೆ ಯುವ ವೇಗಿ ಪ್ರಸಿದ್ಧ ಕೃಷ್ಣರಂತಹ ಹೇಳಿ ಮಾಡಿಸಿದ ಪಿಚ್ ಆಗಿರುತ್ತದೆ. ಲಾಡ್ರ್ಸ್ ಮೈದಾನ ಭಾರತ ತಂಡಕ್ಕೆ ನೆರವಾಗುವ ಸಾಧ್ಯತೆ ಹೆಚ್ಚಿದ್ದು ರೋಹಿತ್ ಪಡೆ ಗೆಲುವಿನ ಬಾವುಟ ಹಾರಿಸಿ ಸರಣಿ ಕೈವಶ ಮಾಡಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.
ವಿರಾಟ್ ಕೊಹ್ಲಿ ಆಡುವುದು ಅನುಮಾನ :
ಇಂದು ನಡೆಯುವ ಆಂಗ್ಲರ ವಿರುದ್ಧದ ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಆಡುವುದು ಅನುಮಾನದಿಂದ ಕೂಡಿದೆ.ಕಳಪೆ ಆಟ ಪ್ರದರ್ಶಿಸುತ್ತಿರುವ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಗೆ ಗುರಿಯಾಗಿದ್ದಾರೆ. ಎರಡನೆ ಪಂದ್ಯಕ್ಕೆ ಲಭ್ಯವಿರುತಾರಾ ಎನ್ನುವುದರ ಬಗ್ಗೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿಲ್ಲ.
ಸಂಭಾವ್ಯ ತಂಡಗಳು :
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ದವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯಜ್ವಿಂದರ್ ಚಾಹಲ್, ಪ್ರಸಿದ್ಧ ಕೃಷ್ಣ.
ಇಂಗ್ಲೆಂಡ್ ತಂಡ: ಜಾಸನ್ ರಾಯ್, ಜಾನಿ ಬೈರ್‍ಸ್ಟೊ, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ನಾಯಕ, ವಿಕೆಟ್ ಕೀಪರ್), ಲಿಯಾಮ್ ಲಿವೀಂಗ್ ಸ್ಟೋನ್, ಮೊಯಿನ್ ಅಲಿ, ಡೇವಿಡ್ ವಿಲ್ಲಿ, ಕ್ರೇಗ್ ಒವರ್‍ಟನ್, ಬ್ರೈಡಾನ್ ಕಾರ್ಸ್, ರೀಸಿ ಟಾಪ್ಲೆ.
ಪಂದ್ಯ ಆರಂಭ: ಸಂಜೆ 5.30