Belagavi News: ಬೆಳಗಾವಿ: ಬೆಳಗಾವಿಯ ದಂಡು ಮಂಡಳಿ ಸಿಇಒ ಕರ್ನಲ್ ಆನಂದ್ (40) ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ (ನ.25) ಬೆಳಗ್ಗೆ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಕೆ. ಆನಂದ್ ಅವರ ಸರ್ಕಾರಿ ನಿವಾಸದಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ದಂಡು ಮಂಡಳಿ ಸಿಇಒ ಆಗಿ ಸೇವೆ ಸಲ್ಲಿಸುತ್ತಿರುವ ಆನಂದ್ ಅವರು ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವಿಸ್‌ಗೆ ಸೇರಿದ್ದರು.
ಮೃತ ಆನಂದ ತಮಿಳುನಾಡು ಮೂಲದವರಾಗಿದ್ದು, ವಿವಾಹ ಆಗಿಲ್ಲ. ತಂದೆ-ತಾಯಿ ತಮಿಳುನಾಡಿನಲ್ಲಿದ್ದಾರೆ. ಬೆಳಗಾವಿಯ ಸರ್ಕಾರಿ ನಿವಾಸದಲ್ಲಿ ಒಬ್ಬರೇ ವಾಸವಾಗಿದ್ದರು. ಶನಿವಾರ ಬೆಳಗ್ಗೆ ಮನೆ ಬಾಗಿಲು ತೆರೆಯದೇ ಇದ್ದಾಗ, ಅನುಮಾನಗೊಂಡ ಮನೆ ಸಿಬ್ಬಂದಿ ಕ್ಯಾಂಪ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಮುರಿದು ಒಳ ನುಗ್ಗಿದಾಗ ಶವವಾಗಿ ಪತ್ತೆಯಾಗಿದ್ದಾರೆ.
ಇತ್ತಿಚೆಗೆ ದಂಡುಮಂಡಳಿಯ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದರು. ಇದರಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಎಂಎಲ್ಐಆರ್‌ಸಿ ಕಮಾಂಡೆಂಟ್ ಬ್ರಿಗೇಡಿಯರ್ ಜೋಯದೀಪ ಮುಖರ್ಜಿ, ಡಿಸಿಪಿ ರೋಹನ ಜಗದೀಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಡೆತ್ ನೋಟ್, ವಿಷದ ಬಾಟಲಿ ಪತ್ತೆ:
ಕರ್ನಲ್ ಆನಂದ್ ಅವರ ಕೊಠಡಿ ತಪಾಸಣೆ ವೇಳೆ ಡೆತ್ ನೋಟ್ ಮತ್ತು ವಿಷದ ಬಾಟಲಿ ಪತ್ತೆಯಾಗಿದೆ. ಅದರಲ್ಲಿ ಯಾವೆಲ್ಲಾ ಅಂಶ ಇದೆ ಅನ್ನೋದನ್ನ ಪರಿಶೀಲನೆ ಮಾಡುತ್ತಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ತಿಳಿದಿದ್ದಾರೆ.
ಕ್ಯಾಂಪ್ ನಲ್ಲಿರುವ ಸಿಇಒ ಕೆ.ಆನಂದ್ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 2021ರಿಂದ ಬೆಳಗಾವಿಯ ದಂಡು ಮಂಡಳಿ ಸಿಇಒ ಆಗಿ ಕೆಲಸ ಮಾಡುತ್ತಿದ್ದರು. ಕಳೆದ 2 ದಿನಗಳಿಂದ ಅವರ ಮನೆ ಬಾಗಿಲು ತೆರೆದಿರಲಿಲ್ಲ. ಇದರಿಂದ ನಮ್ಮ ಪೊಲೀಸರು ಅನುಮಾನಗೊಂಡು ಮದ್ರಾಸ್ ನಲ್ಲಿರುವ ಆನಂದ್ ಅವರ ತಂದೆಯನ್ನ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಬಳಿಕ ಬಾಗಿಲು ತೆರೆದು ನೋಡಿದಾಗ ಆನಂದ್ ಸಾವನ್ನಪ್ಪಿರುವುದು ತಿಳಿದು ಬಂದಿದೆ. ಮೂಗಿನಿಂದ ರಕ್ತ ಸೋರಿ ಕೆಳಗೆ ಬಿದ್ದಿತ್ತು, ಹಾಸಿಗೆ ಪಕ್ಕದಲ್ಲಿ ಒಂದು ವಿಷಯ ಬಾಟಿಲು ಸಿಕ್ಕಿದೆ. ಯಾವುದೋ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
ಬೆರಳಚ್ಚು ತಜ್ಞರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಎಲ್ಲ ಪರೀಕ್ಷೆ ಮಾಡಿದ್ದಾರೆ. 174 ವಿಧಿಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ಎಫ್ಎಸ್‌ಎಲ್ ವರದಿ ಬಂದ ಬಳಿಕ ನಿಖರ ಮಾಹಿತಿ ತಿಳಿಯಲಿದೆ. ಡೆತ್ ನೋಟ್ ಸಿಕ್ಕಿದೆ. ಆದ್ರೆ ಏನು ಬರೆದಿದ್ದಾರೆ ಅನ್ನೋದು ತನಿಖೆ ಬಳಿಕ ಬಯಲಾಗಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಅಮಿತ್ ಶಾ ನಮ್ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು : ವಿ.ಸೋಮಣ್ಣ ಅಳಲು
ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಗೆ ಸೇರ್ಪಡೆ: ಶ್ರೀರಾಮುಲು ಏನಂದ್ರು ಗೊತ್ತಾ?




