Movie News: ಡಿ.ಎನ್ ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿ ಅವರು ನಿರ್ಮಿಸಿರುವ, ಅನಿಲ್ ಕುಮಾರ್ ನಿರ್ದೇಶನದ ಹಾಗೂ ಚಿಕ್ಕಣ್ಣ ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ “ಉಪಾಧ್ಯಕ್ಷ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
ನಾನು ಚಿಕ್ಕಣ್ಣ ಅವರನ್ನು ಬಹಳ ಇಷ್ಟಪಡುತ್ತೇನೆ ಎಂದು ಮಾತನಾಡಿದ ಶಿವರಾಜಕುಮಾರ್, ಚಿಕ್ಕಣ್ಣ ನನ್ನ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ನಾಯಕನಾಗುತ್ತಿದ್ದಾರೆ. ಹಾಡುಗಳನ್ನು ನೋಡಿದ್ದೇನೆ. ಚಿಕ್ಕಣ್ಣ ನಿಜಕ್ಕೂ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ. ಉಮಾಪತಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅನಿಲ್ ಕುಮಾರ್ ನಿರ್ದೇಶಿಸಿದ್ದಾರೆ. ನಾನು ಕೂಡ ಈ ಚಿತ್ರವನ್ನು ಮೈಸೂರಿನಲ್ಲಿ ನೋಡುತ್ತೇನೆ ಎಂದರು.
ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಶಿವರಾಜಕುಮಾರ್ ಅವರಿಗೆ ಅನಂತ ಧನ್ಯವಾದ. ನಾವು “ಉಪಾಧ್ಯಕ್ಷ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಡಬೇಕೆಂದು ಕೇಳಿದಾಗ ಒಪ್ಪಿ ಬಂದಿದ್ದಾರೆ. ಅವರ ಸರಳತೆ ಬಗ್ಗೆ ಎಷ್ಟು ಹೇಳಿದರು ಕಡಿಮೆ. ನನಗೆ ಅವರ ಸಿನಿಮಾ ನಿರ್ಮಾಣ ಮಾಡುವ ಆಸೆಯಿದೆ. ಇನ್ನು “ಉಪಾಧ್ಯಕ್ಷ” ಚಿತ್ರವನ್ನು ನನ್ನ ಪತ್ನಿ ಸ್ಮಿತಾ ನಿರ್ಮಾಣ ಮಾಡಿದ್ದಾರೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನೋಡಿ ಹಾರೈಸಿ ಎಂದರು ನಿರ್ಮಾಪಕ ಉಮಾಪತಿ.
“ಉಪಾಧ್ಯಕ್ಷ”, ” ಅಧ್ಯಕ್ಷ” ಚಿತ್ರದ ಮುಂದುವರೆದ ಭಾಗ ಎಂದು ಮಾತು ಆರಂಭಿಸಿದ ನಿರ್ದೇಶಕ ಅನಿಲ್ ಕುಮಾರ್, “ಅಧ್ಯಕ್ಷ” ಚಿತ್ರದ ಕಥೆ ಎಲ್ಲಿಗೆ ನಿಂತಿತ್ತೊ “ಉಪಾಧ್ಯಕ್ಷ” ಚಿತ್ರದ ಕಥೆ ಅಲ್ಲಿಂದ ಆರಂಭವಾಗುತ್ತದೆ. ಇದೊಂದು ಪಕ್ಕಾ ಮನೋರಂಜನಾ ಚಿತ್ರ. ಲಾಕ್ ಡೌನ್ ಸಮಯದಲ್ಲಿ ಚಂದ್ರ ಮೋಹನ್ ಅವರು ಈ ಚಿತ್ರದ ಕಥೆ ಹೇಳಿದರು. ಆನಂತರ ಸ್ನೇಹಿತರೆಲ್ಲಾ ಸೇರಿ ಈ ಚಿತ್ರದ ಕುರಿತು ಚರ್ಚಿಸಿ, ನಿರ್ಮಾಪಕ ಉಮಾಪತಿ ಅವರಿಗೆ ಕಥೆ ಹೇಳಿದೆವು. ಅವರು ಕಥೆ ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದರು. ಚಿತ್ರ ಚೆನ್ನಾಗಿ ಮೂಡಿಬರಲು ಸಹಕರಿಸಿದ ಚಿಕ್ಕಣ್ಣ ಸೇರಿದಂತೆ ಎಲ್ಲಾ ಕಲಾವಿದರಿಗೆ ಹಾಗೂ ಅರ್ಜುನ್ ಜನ್ಯ ಅವರು ಸೇರಿದಂತೆ ಪ್ರತಿಯೊಬ್ಬ ತಂತ್ರಜ್ಞರಿಗೆ ನನ್ನ ಧನ್ಯವಾದ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಶಿವಣ್ಣ ಅವರಿಗೆ ವಿಶೇಷ ಧನ್ಯವಾದ ಎಂದರು.
ಈವರೆಗೂ ಸುಮಾರು 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ನಾಯಕನಾಗಿ ಇದು ಮೊದಲ ಚಿತ್ರ. “ಉಪಾಧ್ಯಕ್ಷ” ಕುಟುಂಬ ಸಮೇತ ನೋಡಬಹುದಾದ ಚಿತ್ರ. ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದೇನೆ. “ಅಧ್ಯಕ್ಷ” ಚಿತ್ರದ ಸೀಕ್ವೆಲ್ ಆಗಿರುವ ಈ ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಗೆದ್ದಿದೆ. ಇಂದು ಶಿವರಾಜಕುಮಾರ್ ಅವರು ಟ್ರೇಲರ್ ಬಿಡುಗಡೆ ಮಾಡಿ ಹಾರೈಸಿದ್ದಾರೆ. ಚಿತ್ರ ನೋಡಿ. ಎಲ್ಲರೂ ಪ್ರೋತ್ಸಾಹ ನೀಡಿ ಎಂದು ನಾಯಕ ಚಿಕ್ಕಣ್ಣ ತಿಳಿಸಿದರು.
ನಾಯಕಿ ಮಲೈಕ ಹಾಗೂ ನಟ ರವಿಶಂಕರ್ ಸೇರಿದಂತೆ ಅನೇಕ ಕಲಾವಿದರು “ಉಪಾಧ್ಯಕ್ಷ” ಚಿತ್ರದ ಕುರಿತು ಮಾತನಾಡಿದರು.
ಹಿರಿಯ ನಟಿ ದಿ.ಲೀಲಾವತಿ ಸ್ಮಾರಕದ ಗುದ್ದಲಿ ಪೂಜೆ ನೆರವೇರಿಸಿದ ವಿನೋದ್ ರಾಜ್
ಮನೆಯಲ್ಲಿ ಪ್ರತಿಷ್ಠಾಪಿಸಿದ ರಜನಿ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ಪೊಂಗಲ್ ಆಚರಿಸಿದ ಅಭಿಮಾನಿ..