Political News: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗ್ಯಾರಂಟಿ ಹುಳುಕುಗಳನ್ನು ಮುಚ್ಚಿಡಲು ಸಿದ್ದರಾಮಯ್ಯ ಬೋಗಸ್ ವಾದ ಮಂಡಿಸುತ್ತಿದ್ದಾರೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನಿರ್ಮಲಾರವರು ಸುಳ್ಳು ಹೇಳುವುದರಲ್ಲಿ ಇತ್ತೀಚೆಗೆ ಮೋದಿಯವರನ್ನೇ ಮೀರಿಸುತ್ತಿದ್ದಾರೆ. ಕರ್ನಾಟಕಕ್ಕೆ ಕೇಂದ್ರದಿಂದ ತೆರಿಗೆ ಅನ್ಯಾಯವಾಗುತ್ತಿರುವುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ತೆರಿಗೆ ಅನ್ಯಾಯದ ಬಗ್ಗೆ ನಾವು ಸಾಕ್ಷಿ ಸಮೇತ ತೋರಿಸಿದ್ದೇವೆ. ಆದರೂ ಅನ್ಯಾಯ ಮಾಡಿಲ್ಲ ಎಂದು ನಿರ್ಮಲಾರವರು ವಿತಂಡ ವಾದ ಮಾಡುವುದ್ಯಾಕೆ.? ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರದ ಪಂಚ ಗ್ಯಾರಂಟಿಗಳು ಅಬಾಧಿತವಾಗಿ ಮುಂದುವರೆಯಲಿವೆ. ಗ್ಯಾರಂಟಿ ಯೋಜನೆಗಳಲ್ಲಿ ಯಾವ ಹುಳುಕುಗಳು ಇಲ್ಲ. ಸಚಿವೆ ನಿರ್ಮಲಾರವರು ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಹುಳುಕು ಕಂಡು ಹಿಡಿಯುವುದು ಮೊಸರಲ್ಲಿ ಕಲ್ಲು ಹುಡುಕಿದಂತೆ. ನಾವು ಕೇಂದ್ರದ ಬಳಿ ಕೇಳುತ್ತಿರುವುದು ನ್ಯಾಯಯುತವಾಗಿ ನಮಗೆ ಸೇರಬೇಕಾದ ತೆರಿಗೆ ಹಣವನ್ನು. ನಾವು ಮೋದಿಯವರ ತಿಜೋರಿಯಿಂದಾಗಲಿ, ಅಮಿತ್ ಶಾರವರ ಬ್ಯಾಂಕ್ ಖಾತೆಯಿಂದಾಗಲಿ ಅನುದಾನ ಕೇಳುತ್ತಿಲ್ಲ. ಈ ಸಾಮಾನ್ಯ ಜ್ಞಾನ ನಿರ್ಮಲಾರವರಿಗೆ ಇದ್ದರೆ ಸಾಕು ಎಂದು ಗುಂಡೂರಾವ್ ಹೇಳಿದ್ದಾರೆ.
6 ತಿಂಗಳ ಹಿಂದೆ BJP ಸರ್ಕಾರವಿದ್ದಾಗ ತೆರಿಗೆ ಅನ್ಯಾಯದ ಪ್ರಸ್ತಾಪವೇ ಇರಲಿಲ್ಲ ಎಂಬರ್ಥದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಮಾತಾಡಿದ್ದಾರೆ. ಅದು ಸತ್ಯ ಕೂಡ. ಯಾಕೆಂದರೆ ಮೋದಿಯವರ ಮುಂದೆ ನಡು ಬಗ್ಗಿಸಿ ನಿಲ್ಲಲು ಹೆದರುವ ಬಿಜೆಪಿ ನಾಯಕರು ತೆರಿಗೆ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಲು ಸಾಧ್ಯವೇ.? ಪ್ರಸ್ತಾಪಿಸಲು ಸಾಧ್ಯವೇ.? ಆದರೆ ನಾವು ಹಿಂದೆ ಪ್ರತಿಪಕ್ಷ ಸ್ಥಾನದಲ್ಲಿದ್ದಾಗಲೂ ತೆರಿಗೆ ಅನ್ಯಾಯದ ಬಗ್ಗೆ ಪ್ರಶ್ನಿಸುತ್ತಲೇ ಇದ್ದೇವೆ. ಹಿಂದಿನ BJP ಸರ್ಕಾರಕ್ಕೂ ಕೇಂದ್ರವನ್ನು ಪ್ರಶ್ನಿಸುವಂತೆ ಒತ್ತಾಯಿಸಿದ್ದೇವೆ. ಈ ಬಗ್ಗೆ ನಿರ್ಮಲಾ ಸೀತಾರಾಮನ್‌ರವರಿಗೆ ಅನುಮಾನಗಳಿದ್ದರೆ ಪರಿಶೀಲಿಸಬಹುದು ಎಂದು ಗುಂಡೂರಾವ್ ಹರಿಹಾಯ್ದಿದ್ದಾರೆ.
ಕೇಂದ್ರದಿಂದ ಯಾವುದೇ ತೆರಿಗೆ ಬಾಕಿಯಿಲ್ಲ, ಕೊಡಬೇಕಾಗಿರುವುದೆನ್ನಲ್ಲಾ ಕೊಟ್ಟಾಗಿದೆ ಎಂದು ಗಿಳಿಪಾಠ ಹೇಳುವ ನಿರ್ಮಲಾರವರು, 2109 ರ ಬಜೆಟ್ ಗಾತ್ರ ಹಾಗೂ 2024 ರ ಬಜೆಟ್ ಗಾತ್ರ ಎಷ್ಟಾಗಿದೆ ಎಂದು ತುಲನೆ ಮಾಡಲಿ. ಬಜೆಟ್ ಗಾತ್ರ ಹೆಚ್ಚಾದಂತೆ ರಾಜ್ಯಗಳಿಗೆ ಕೊಡಬೇಕಾದ ಅನುದಾನಗಳು ಹೆಚ್ಚಾಗಬೇಕು ಎಂಬುವುದು ಕಾಮನ್ ಸೆನ್ಸ್. 2019 ರಲ್ಲಿ ನಮ್ಮ ರಾಜ್ಯಕ್ಕೆ ಬಂದ ಅನುದಾನವೆಷ್ಟು? ಈಗ 45 ಲಕ್ಷ ಕೋಟಿ ಬಜೆಟ್‌ನಲ್ಲಿ ಕೊಟ್ಟಿರುವ ಅನುದಾನವೆಷ್ಟು ಎಂದು ಪ್ರಾಮಾಣಿಕವಾಗಿ ಹೇಳಲಿ. ಇದನ್ನು ಬಿಟ್ಟು ಜನರ ಕಿವಿಗೆ ಹೂ ಮುಡಿಸುವ ವ್ಯರ್ಥ ಪ್ರಯತ್ನವೇಕೆ.? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ
‘ನಮ್ಮವರೇ ನಮಗೆ ಮೂಲ’ ಎಂಬಂತೆ ರಾಜ್ಯದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ಕೇಂದ್ರದಿಂದ ತೆರಿಗೆಯಲ್ಲಿ, ಅನುದಾನದಲ್ಲಿ, ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ, ಅಕ್ಕಿ ಕೊಡುವ ವಿಚಾರದಲ್ಲಿ, ಮಹದಾಯಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳಲ್ಲಿ ಅನ್ಯಾಯವಾಗುತ್ತಿರುವುದು ಆ ಸೂರ್ಯ ಚಂದ್ರರಷ್ಟೇ ಸತ್ಯ. ಈ ಸತ್ಯವನ್ನು ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿ ನಾಯಕರು ಒಪ್ಪಿಕೊಳ್ಳಲಿ. ಕನಿಷ್ಟಪಕ್ಷ ಸತ್ಯ ಒಪ್ಪಿಕೊಂಡ ಕಾರಣಕ್ಕಾದರೂ ಕನ್ನಡಿಗರು ನಿಮ್ಮನ್ನು ಕ್ಷಮಿಸಬಹುದು ಎಂದು ಗುಂಡುರಾವ್ ಹೇಳಿದ್ದಾರೆ.
ಈ ಷರತ್ತು ಒಪ್ಪಿದರೆ ಮಾತ್ರ, ಇಂಡಿಯಾ ಕೂಟದೊಟ್ಟಿಗೆ ಹೊಂದಾಣಿಕೆ: ಸಮಾಜವಾದಿ ಪಾರ್ಟಿ
ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾದ ರಾಜಸ್ಥಾನ ಬುಡಕಟ್ಟು ಮುಖಂಡ ಮಹೇಂದ್ರ ಜೀತ್