Spiritual News: ಸದಾಕಾಲ ಹಸನ್ಮುಖಿಯಾಗಿ, ಜೀವನದ ಎಲ್ಲ ಕಷ್ಟ, ಸುಖ, ನೋವು, ನಲಿವು, ಅಟ್ಟಹಾಸ ಎಲ್ಲವನ್ನೂ ಕಂಡು, ಜಗಕ್ಕೆ ಜೀವನ ಪಾಠ ಹೇಳಿದ ಮಹಾನುಭಾವ ಶ್ರೀಕೃಷ್ಣ. ಯಾವುದರ ಮೇಲೂ ಮೋಹವಿರಬಾರದು. ಏಕೆಂದರೆ, ಈ ಲೋಕದಲ್ಲಿ ಯಾವುದೂ ನಮ್ಮದಲ್ಲ ಅನ್ನುವುದನ್ನ ನಾವು ಶ್ರೀಕೃಷ್ಣನನ್ನು ನೋಡಿ ಕಲಿಯಬೇಕು. ಇಂಥ ಶ್ರೀಕೃಷ್ಣನ ಜೀವನದಲ್ಲಿ ನಡೆದ ಕೆಲ ಸತ್ಯ ಘಟನೆಗಳ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯ ಸತ್ಯ, ಹಲವರ ನೆಚ್ಚಿನ ದೇವರು ಶ್ರೀಕೃಷ್ಣ. ನೋಡಲು ಸುಂದರ, ಹೇಳಿರುವ ಜೀವನ ಪಾಠವೂ ಅತ್ಯದ್ಭುತ, ಅಲಂಕಾರ ಪ್ರಿಯ. ಹೀಗೆ ಹಲವು ವಿಶೇಷ ಗುಣಗಳು ಶ್ರೀಕೃಷ್ಣನಲ್ಲಿದೆ. ಹಾಗಾಗಿ ಎಲ್ಲ ತಾಯಂದಿರು ತಮ್ಮ ಮಕ್ಕಳಿಗೆ ಶ್ರೀಕೃಷ್ಣನ ವೇಷ ಹಾಕೇ ಹಾಕುತ್ತಾರೆ.
ಪ್ರತೀ ತಾಯಂದಿರುವ ತಮ್ಮ ಗಂಡು ಮಕ್ಕಳಿಗೆ ಹೆಣ್ಣಿನ ವೇಷ ಹಾಕೇ ಹಾಕುತ್ತಾರೆ. ತನ್ನ ಮಗ ಹೆಣ್ಣು ಮಕ್ಕಳ ಬಟ್ಟೆ ಹಾಕಿದಾಗ, ಹೇಗೆ ಕಾಣುತ್ತಾನೆ ಎಂದು ನೋಡುವ ಕುತೂಹಲ ಎಲ್ಲ ತಾಯಂದಿರಿಗೂ ಇರುತ್ತದೆ. ಹಾಗಾಗಿ ಜೀವನದಲ್ಲಿ ಒಮ್ಮೆಯಾದರೂ ಈ ಆಸೆಯನ್ನು ಅವರು ಈಡೇರಿಸಿಕೊಳ್ಳುತ್ತಾರೆ. ಅಲ್ಲದೇ ಹೆಣ್ಣು ಮಗುವಿಗಾಗಲಿ, ಗಂಡು ಮಗುವಿಗಾಗಲಿ ಕಾಡಿಗೆ ಹಚ್ಚೇ ಹಚ್ಚುತ್ತಾರೆ. ಆದರೆ ಇದರ ಹಿಂದೆ ಶ್ರೀಕೃಷ್ಣನ ಜೀವನದ ಒಂದು ಘಟನೆ ಅಡಗಿದೆ.
ಶ್ರೀಕೃಷ್ಣನ ತಾಯಿ ಯಶೋಧೆ ಕೂಡ ತನ್ನ ಮಗ ಶ್ರೀಕೃಷ್ಣನ ಮೇಲೆ ಯಾವುದೇ ದುಷ್ಟ ಶಕ್ತಿಗಳು, ರಾಕ್ಷಸರ ದೃಷ್ಟಿ ಬೀಳದಿರಲು ಎಂದು ಶ್ರೀಕೃಷ್ಣನಿಗೆ ಹೆಣ್ಣು ಮಕ್ಕಳ ಉಡುಪಿ ಹಾಕುತ್ತಿದ್ದಳಂತೆ. ಮತ್ತು ಕಾಡಿಗೆ ಹಚ್ಚುತ್ತಿದ್ದಳಂತೆ. ಅದೇ ಪದ್ಧತಿಯನ್ನು ಇಂದಿನ ಕಾಲದ ತಾಯಂದಿರು ಅನುಸರಿಸುತ್ತಿದ್ದಾರೆ. ಆದರೆ ಈ ಸತ್ಯ ಮಾತ್ರ ಗೊತ್ತಿರಲಿಕ್ಕಿಲ್ಲ.
ಇನ್ನು ಎರಡನೇಯ ಸತ್ಯ, ಶ್ರೀಕೃಷ್ಣನನ್ನು ಬೆಣ್ಣೆ ಕಳ್ಳನೆಂದು ಕರೆಯಲಾಗುತ್ತಿತ್ತು. ಏಕೆಂದರೆ, ಆತ ತಾಯಿ ಮಾಡಿದ್ದ ಬೆಣ್ಣೆಯನ್ನು ಕದ್ದು ತಿನ್ನುತ್ತಿದ್ದ. ಹಾಗಾಗಿಯೇ ಇಂದಿಗೂ ಶ್ರೀಕೃಷ್ಣನಿಗೆ ಬೆಣ್ಣೆಯನ್ನೇ ಪ್ರಥಮ ನೈವೇದ್ಯವನ್ನಾಗಿ ಇಡಲಾಗುತ್ತದೆ. ಇನ್ನು ಶ್ರೀಕೃಷ್ಣ ಬೆಣ್ಣೆ ಕದ್ದು, ಅದರಲ್ಲಿ ದೊಡ್ಡ ಭಾಗವನ್ನು ಮಂಗಗಳಿಗೆ ಹಂಚುತ್ತಿದ್ದರು. ಬಳಿಕ ಸಣ್ಣ ಭಾಗವನ್ನು ತಾವು ತಿನ್ನುತ್ತಿದ್ದರು. ಏಕೆಂದರೆ, ವಾನರರು ಯಾರೆಂದು ಅವರಿಗೆ ತಿಳಿದಿದ್ದು, ಕಳೆದ ಜನ್ಮದಲ್ಲಿ ರಾಮನ ಅವತಾರದಲ್ಲಿದ್ದಾಗ, ತನಗೆ ಸಹಾಯ ಮಾಡಿದ್ದೇ ವಾನರರು ಎಂಬ ಕಾರಣಕ್ಕೆ, ಶ್ರೀಕೃಷ್ಣ ವಾನರರಿಗೆ ಬೆಣ್ಣೆ ಹಂಚುತ್ತಿದ್ದ.
ಮೂರನೇಯ ಸತ್ಯ, ಉಜ್ಜಯನಿಯಲ್ಲಿ ಶ್ರೀಕೃಷ್ಣ ಗುರುಕುಲ ಸೇರಿ, ಅಲ್ಲಿಯೇ ಶಿಕ್ಷಣ ಪಡೆದಿದ್ದ. ಆ ಆಶ್ರಮದಲ್ಲಿ ಶ್ರೀಕೃಷ್ಣನಿಗೆ ಸಾಂದೀಪನ ಋಷಿಗಳು, ಪಾಠ ಹೇಳುತ್ತಿದ್ದರು. ಇದೇ ವೇಳೆ ಶ್ರೀಕೃಷ್ಣನಿಗೆ ಸುಧಾಮನೆಂಬ ಗೆಳೆಯ ಸಿಕ್ಕಿದ್ದು. ಶಿಕ್ಷಣವೆಲ್ಲ ಮುಗಿದ ಬಳಿಕ ಸಾಂದೀಪನ ಗುರುಗಳ ಬಳಿ ಹೋಗಿ, ಶ್ರೀಕೃಷ್ಣ ಗುರುದಕ್ಷಿಣೆಯಾಗಿ ನಾನೇನು ಕೊಡಲಿ ಎಂದು ಕೇಳುತ್ತಾನೆ. ಆದರೆ ತನಗೇನೂ ಬೇಡವೆಂದು ಸಾಂದೀಪನ ಗುರುಗಳು ನಿರಾಕರಿಸುತ್ತಾರೆ. ಆದರೂ ಬಿಡದ ಶ್ರೀಕೃಷ್ಣ ಗುರುದಕ್ಷಿಣೆ ಕೇಳಲೇಬೇಕೆಂದು ಹಠ ಮಾಡುತ್ತಾನೆ.
ಶ್ರೀಕೃಷ್ಣನ ಬಲ ಗೊತ್ತಿದ್ದ ಸಾಂದೀಪನ ಮುನಿಗಳು, ನನಗೊಬ್ಬ ಮಗನಿದ್ದ. ಅವನು ಆಡುತ್ತ ಸಮುದ್ರದ ಬಳಿ ಹೋದ. ಆಗ ಸಮುದ್ರದ ಅಲೆಗಳು ಬಂದು, ಅವನನ್ನು ಆವರಿಸಿ, ಕೊಂಡೊಯ್ಯಿತು. ಅಂದಿನಿಂದ ನನ್ನ ಮಗ ನನ್ನಿಂದ ದೂರವಾಗಿದ್ದಾನೆ, ಸಮುದ್ರದ ಅಲೆಗಳಿಂದ ಅವನನ್ನು ಪುನಃ ಕರೆತರಲು ಸಾಧ್ಯವಾದರೆ, ಕರೆ ತಾ ಎನ್ನುತ್ತಾರೆ.
ಆಗ ಸಮುದ್ರದ ಬಳಿ ಹೋದ ಶ್ರೀಕೃಷ್ಣನಿಗೆ ಈ ಕೆಲಸ ಶಂಖಾಸುರನದ್ದು ಎಂದು ಗೊತ್ತಾಗತ್ತದೆ. ಅವನು ಸಮುದ್ರದ ಬಳಿ ಬಂದವರನ್ನು ಕರೆದುಕೊಂಡು ಹೋಗಿ, ಸಮುದ್ರದ ಆಳದಲ್ಲಿರಿಸಿಕೊಳ್ಳುತ್ತಾನೆ ಎಂದು ಶ್ರೀಕೃಷ್ಣ ಅರಿಯುತ್ತಾನೆ. ಬಳಿಕ ಸಮುದ್ರದ ಆಳಕ್ಕೆ ಹೋಗಿ, ಶಂಖಾಸುರನೊಂದಿಗೆ ಯುದ್ಧ ಮಾಡಿ, ಸಾಂದೀಪನ ಗುರೂಜಿಯ ಮಗನೊಂದಿಗೆ ಇನ್ನೂ ಹಲವರ ಪ್ರಾಣ ರಕ್ಷಣೆ ಮಾಡುತ್ತಾನೆ.
ಶ್ರೀಕೃಷ್ಣನ ಜೀವನ ಸತ್ಯದ ಬಗ್ಗೆ ಇನ್ನೂ ಹಲವು ವಿಚಾರಗಳನ್ನು ಮುಂದಿನ ಭಾಗದಲ್ಲಿ ತಿಳಿಯೋಣ..
ನಿಮ್ಮ ಪರ್ಸ್‌ನಲ್ಲಿ ಯಾವುದೇ ಕಾರಣಕ್ಕೂ ಈ 5 ವಸ್ತುಗಳನ್ನು ಇಟ್ಟುಕೊಳ್ಳಬೇಡಿ