ಬರುವಾಗ ಮತ್ತು ಹೋಗುವಾಗ ಬೆತ್ತಲೆ. ಆದರೆ ನಡುವೆ ಯಾಕೆ ಕತ್ತಲೆ..?: ಶಿವಾಚಾರ್ಯ ಸ್ವಾಮೀಜಿ

Dharwad News: ಧಾರವಾಡ : ಧಾರವಾಡದ ಲಿಂಗಾಯತ ಭವನ ನೂತನ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕುಡಿಯಬಾರದ್ದನ್ನು ಕುಡಿಯೋದು, ತಿನ್ನಬಾರದ್ದನ್ನು ತಿನ್ನುವುದು, ಮಾಡಬಾರದ್ದನ್ನು ಮಾಡುವುದು, ಹಾಗೆಲ್ಲ ಆದಾಗ ಕಾಯ ಶುದ್ಧಿ ಕಾಪಾಡಿಕೊಳ್ಳಲು ಸಾಧ್ಯವಾ? ಎಂದು ಪ್ರಶ್ನಿಸಿದ್ದಾರೆ.

ಇವತ್ತು ಬಹಳ ದೊಡ್ಡ ಸೆಲೆಬ್ರಿಟಿಗಳೆನಿಸಿಕೊಂಡವರು ಏನಾಗ್ತಾ ಇದಾರೆ. ಚಲನಚಿತ್ರ ಕ್ಷೇತ್ರ ಇರಬಹುದು. ರಾಜಕೀಯ ಕ್ಷೇತ್ರ, ಧಾರ್ಮಿಕ ಕ್ಷೇತ್ರ ಇರಬಹುದು. ವೈಯಕ್ತಿಕ ನೆಲಗಟ್ಟು ಕುಸಿದು ಎಂದರೆ, ಅಂಹಕಾರಕ್ಕೆ ಬಲಿಯಾದರೆ, ಆತನ ಬದುಕು ನರಕ ಆಗುತ್ತದೆ. ಅದಕ್ಕಾಗಿ ಬಸವಣ್ಣ ಅಂಹಕಾರದಿಂದ ಹೊರಗೆ ಬನ್ನಿ ಎಂದು ಹೇಳಿದ್ದರು. ವಿನಯ, ವಿವೇಕ ಮನುಷ್ಯನಿಗೆ ಬರಬೇಕಿದೆ ಎಂದರು.

ಈ ಜಗತ್ತು ಬಹಳ ಸುಂದರವಾಗಿದೆ. ಅದನ್ನು ನಾವು ಕುರೂಪ ಮಾಡುವುದು ಬೇಡ. ಅತಿಯಾದ ಆಸೆಗೆ ಬಲಿಯಾಗುತ್ತಿದ್ದೇವೆ. ಆಸೆ, ಅಮಿಷಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಾಗಿದೆ. ಕಟ್ಟಡ ಕಟ್ಟಿದ್ದೆ ಕಟ್ಟಿದ್ದು. ಆಸ್ತಿ ಮಾಡಿದ್ದೇ ಮಾಡಿದ್ದು. ಕಾರು ಕೊಂಡಿದ್ದೆ ಕೊಂಡಿದ್ದು. ಆದರೆ ಹೋಗುವಾಗ ಯಾವುದನ್ನು ಹೊತ್ತುಕೊಂಡು ಹೋಗ್ತಿರೇನು? ಬರುವಾಗ ಮತ್ತು ಹೋಗುವಾಗ ಬೆತ್ತಲೆ. ಆದರೆ ನಡುವೆ ಯಾಕೆ ಕತ್ತಲೆ..? ಎಂದು ಆಚಾರ್ಯರು ಪ್ರಶ್ನಿಸಿದ್ದಾರೆ.

ನಮ್ಮ ಬದುಕನ್ನು ಆದರ್ಶದ ಮೇಲೆ‌ ಕಟ್ಟಿಕೊಳ್ಳಬೇಕು. ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಕೇವಲ ಘೋಷಣೆ ಮಾಡಿದರೆ ಸಾಲದು. ಆ ಸಾಂಸ್ಕೃತಿಕ ನಾಯಕನ ತತ್ವಗಳು ಮಕ್ಕಳಿಗೆ ತಲುಪಬೇಕು. ಶಾಲಾ‌ ಕಾಲೇಜ್ ಪಠ್ಯದಲ್ಲಿ ಅಳವಡಿಸಬೇಕು. ಜಿಲ್ಲೆಗೊಂದು ಬಸವ ಭವನ ನಿರ್ಮಾಣ ಆಗಬೇಕು. ಆ ಕೆಲಸ‌ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾಡುತ್ತದೆಂಬ ವಿಶ್ವಾಸವಿದೆ. ಹಿಂದೆಯೇ ಕಾಂಗ್ರೆಸ್ ಸರ್ಕಾರ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕ ಎಂದು ಹೇಳಿದೆ. ಜೊತೆಗೆ ಸ್ವತಂತ್ರ ಧರ್ಮ ಅಸ್ತಿತ್ವ ಕೊಡುವ ಪ್ರಯತ್ನ ನಡೆದಿತ್ತು. ಎಂ.ಬಿ‌.ಪಾಟೀಲ ಸೇರಿ ಅನೇಕರು ಹೋರಾಟ ಮಾಡಿದ್ದರು. ಆದರೆ ಸ್ಥಿತ್ಯಂತರ ಬೇರೆಬೇರೆಯಾಗಿ ಅದು ಅಲ್ಲಿಗೆ ನಿಂತಿದೆ. ಈಗ ಮತ್ತೆ ಆ ಕಾರ್ಯ ಮುಂದುವರಿಸಬೇಕು. ಈ ವಿಷಯದಲ್ಲಿ ನಮ್ಮ ನೇತಾರರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಏಕೆಂದರೆ ನಮ್ಮ ಸಮಾಜದಲ್ಲಿ ಎಲ್ಲರೂ ಶ್ರೀಮಂತರಿಲ್ಲ. ಬಡವರು ಬಹಳ ಜನ ಇದಾರೆ ಎಂದು ಶಿವಾಚಾರ್ಯಸ್ವಾಮೀಜಿ ಹೇಳಿದರು.

About The Author