ಹುಬ್ಬಳ್ಳಿ: ಗ್ಯಾರಂಟಿ ಭರವಸೆಯ ಮುಖಾಂತರ ಈಗ ರಾಜ್ಯ ಸರ್ಕಾರ ಹಗರಣಗಳ ಸರ್ಕಾರ ಎಂದೇ ಬಿಂಬಿತವಾಗಿದೆ. ವಾಲ್ಮೀಕಿ ಹಗರಣ, ಮುಡಾ ಹಗರಣದಲ್ಲಿ ಭಾಗಿಯಾಗಿರುವುದು. ಅಲ್ಲದೇ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡದೇ ಹಗರಣದಲ್ಲಿಯೇ ತೊಡಗಿಕೊಂಡಿದೆ ಎಂದು ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಗ್ಯಾರಂಟಿ ಹೆಸರಿನ ಮುಖಾಂತರ ಸಾಕಷ್ಟು ಹಗರಣ ಮಾಡುತ್ತಿದೆ. ಕಾಂಗ್ರೆಸ್ಸಿನ ನಾಯಕರಿಗೆ, ಚುನಾಯಿತ ಪ್ರತಿನಿಧಿಗಳಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಸಿಎಂ ಅವರಿಗೆ ಬೆಂಗಳೂರು ಮಾತ್ರವೇ ಕಾಣುತ್ತಿದೆ. ರಾಜ್ಯದ ಉದ್ದಗಲಕ್ಕೂ ಸಾಕಷ್ಟು ಗುಂಡಿಗಳು ಬಿದ್ದಿವೆ. ಆದರೆ ಅಭಿವೃದ್ಧಿ ಬಗ್ಗೆ ಯಾವುದೇ ಛಕಾರ ಎತ್ತದೇ ಇರುವುದು ರಾಜ್ಯದ ಜನರ ದುರ್ದೈವವಾಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಆಂತರಿಕ ಕಚ್ಚಾಟ ಜೋರಾಗಿದೆ. ಜನರು ಯಾಕಾದರೂ ಕಾಂಗ್ರೆಸ್ಸಿಗೆ ಮತ ಹಾಕಿದೆವೋ ಎಂಬುವಂತ ಪರಿಸ್ಥಿತಿಯಲ್ಲಿದ್ದಾರೆ. ಜನರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರವನ್ನು ಕ್ಷಮಿಸುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.