ಮುಂಬೈ : ನಗರದಲ್ಲಿರುವ ಬಾಲಿವುಡ್ ಖ್ಯಾತ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಬಾಂದ್ರಾ ಪಶ್ಚಿಮ ಪ್ರದೇಶದಲ್ಲಿರುವ ಗ್ಯಾಲಾಕ್ಸಿ ಅಪಾರ್ಟ್ಮೆಂಟ್ನ ನಿವಾಸಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮುಂಬೈ ಪೊಲೀಸರು ಒಬ್ಬ ಪುರುಷ ಮತ್ತು ಮಹಿಳೆಯನ್ನು ಬಂಧಿಸಿದ್ದಾರೆ. ಅನಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಅಕ್ರಮವಾಗಿ ಮನೆಯೊಳಗೆ ಪ್ರವೇಶಕ್ಕೆ ಯತ್ನಿಸಿದ್ದರು. ಕೂಡಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಈ ಘಟನೆಯಿಂದ ನಟನ ಮನೆಯ ಸುತ್ತ ಇನ್ನಷ್ಟು ಭದ್ರತೆಯನ್ನು ಹೆಚ್ಚಸಲಾಗಿದೆ.
ಛತ್ತೀಸ್‌ಗಢದ ಜಿತೇಂದ್ರ ಕುಮಾರ್ ಸಿಂಗ್ ಬಂಧನ..
ಇನ್ನೂ ಮಂಗಳವಾರ, ಛತ್ತೀಸ್‌ಗಢದ ಜಿತೇಂದ್ರ ಕುಮಾರ್ ಸಿಂಗ್ ಎಂಬ 23 ವರ್ಷದ ಯುವಕ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್ ಬಳಿ ನಿಂತಿದ್ದ” ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಗ್ಗೆ, ಸಲ್ಮಾನ್ ಖಾನ್ ಅವರ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದ ಪೊಲೀಸ್ ಅಧಿಕಾರಿಯೊಬ್ಬರು ಜಿತೇಂದ್ರ ಕುಮಾರ್ ಸಿಂಗ್ ಅಲೆದಾಡುತ್ತಿರುವುದನ್ನು ಗಮನಿಸಿ ಅಲ್ಲಿಂದ ಹೊರಹೋಗುವಂತೆ ತಿಳಿಸಿದ್ದರು. ಇದರಿಂದ ಕೋಪಗೊಂಡ ಸಿಂಗ್, ತನ್ನ ಮೊಬೈಲ್ ಫೋನ್ ಅನ್ನು ನೆಲಕ್ಕೆ ಒಗೆದು ಒಡೆಯುವ ಮೂಲಕ ತನ್ನ ಆಕ್ರೋಶವನ್ನು ವ್ಯಕ್ತಪಡಸಿದ್ದ ಎಂದು ಅವರು ಹೇಳಿದ್ದಾರೆ.
ಮತ್ತೆ ಅದೇ ದಿನ ಸಂಜೆ, ಸಿಂಗ್ ಆ ಕಟ್ಟಡದ ನಿವಾಸಿಯೊಬ್ಬರಿಗೆ ಸೇರಿದ ಕಾರನ್ನು ಬಳಸಿಕೊಂಡು ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್ ಆವರಣಕ್ಕೆ ಪ್ರವೇಶಿಸಿದ್ದಾನೆ. ಆದರೆ, ಪೊಲೀಸರು ಮತ್ತೊಮ್ಮೆ ಅವನನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಅವನನ್ನು ಬಾಂದ್ರಾ ಪೊಲೀಸರೆದುರು ಹಾಜರುಪಡಿಸಿ, ನಂತರ ವಶಕ್ಕೆ ಪಡೆಯಲಾಗಿದೆ.
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಭೇಟಿಯಾಗಲು ಬಯಸಿದ್ದೆ..!
ಅಲ್ಲದೆ ಪೊಲೀಸರ ವಿಚಾರಣೆಯ ವೇಳೆ, ಜಿತೇಂದ್ರ ಕುಮಾರ್ ಸಿಂಗ್ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಭೇಟಿಯಾಗಲು ಬಯಸಿದ್ದಾಗಿ ಹೇಳಿಕೊಂಡಿದ್ದಾನೆ. ಪೊಲೀಸರು ಕಟ್ಟಡಕ್ಕೆ ಪ್ರವೇಶಿಸಲು ಬಿಡದ ಕಾರಣ ತಾನು ಒಳಗೆ ನುಸುಳಲು ಪ್ರಯತ್ನಿಸಿದೆ ಎಂದು ಸಿಂಗ್ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇನ್ನೂ ಗ್ಯಾಲಾಕ್ಸಿ ಅಪಾರ್ಟ್ಮೆಂಟ್ನ ನಿವಾಸಿಯ ವಾಹನವನ್ನು ಹೇಗೆ ಹತ್ತಿದ ಎಂಬುದನ್ನು ತಿಳಿದುಕೊಳ್ಳಲು ಅಧಿಕಾರಿಗಳು ಇನ್ನೂ ತನಿಖೆ ಮಾಡುತ್ತಿದ್ದಾರೆ. ಇದಾದ ಮರುದಿನವೇ ನಡೆದ ಇದೇ ರೀತಿಯ ಇನ್ನೊಂದು ಘಟನೆಯಲ್ಲಿ, ಮಹಿಳೆಯೊಬ್ಬರು ಕಟ್ಟಡದ ಭದ್ರತೆಯನ್ನು ಉಲ್ಲಂಘಿಸಿ ಸಲ್ಮಾನ್ ಖಾನ್ ಅವರ ಫ್ಲ್ಯಾಟ್ ಬಳಿ ಬಂದಿದ್ದಾರೆ. ಅವರು ನಟನ ಫ್ಲ್ಯಾಟ್ ಪ್ರವೇಶಿಸುವ ಮೊದಲೇ ಅವರನ್ನು ತಡೆಯಲಾಗಿದೆ.
ನಟನ ಫ್ಲ್ಯಾಟ್ ತಲುಪುವ ಮೊದಲೇ ಆಕೆಯನ್ನು ತಡೆಯಲಾಗಿದೆ..
ಇನ್ನೂ ಗುರುವಾರ ಬೆಳಗ್ಗೆ ಮುಂಬೈ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಮಹಿಳೆ ಕಟ್ಟಡದ ಭದ್ರತೆಯನ್ನು ಉಲ್ಲಂಘಿಸಲು ಪ್ರಯತ್ನಿಸುತ್ತಿದ್ದರು. ಆದರೆ ನಟನ ಫ್ಲ್ಯಾಟ್ ತಲುಪುವ ಮೊದಲೇ ಆಕೆಯನ್ನು ತಡೆಯಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಮಹಿಳೆ ಯಾರು ಮತ್ತು ಎಲ್ಲಿಂದ ಬಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ತನಿಖೆ ನಡೆಯುತ್ತಿದೆ. ಅವರು ಸ್ಥಳೀಯ ನಿವಾಸಿಯೇ ಅಥವಾ ಬೇರೆಡೆಯಿಂದ ಪ್ರಯಾಣಿಸಿದ್ದಾರೋ ಎಂಬುದು ಇನ್ನೂ ತಿಳಿದುಬಂದಿಲ್ಲ. ಅಕ್ರಮ ಪ್ರವೇಶಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಇಬ್ಬರೂ ಬಂಧನದಲ್ಲಿದ್ದು, ತನಿಖೆ ಮುಂದುವರೆದಿದೆ.
ಅಲ್ಲದೆ ಈಗಾಗಲೇ ಈ ನಟ ಸಲ್ಮಾನ್ ಖಾನ್ ಹಲವು ಬಾರಿ ದಾಳಿಗಳಿಂದ ತಪ್ಪಿಸಿಕೊಂಡಿದ್ದಾರೆ. ಅವರ ಮನೆಯ ಸುತ್ತ ಮೇಲಿಂದ ಮೇಲೆ ಗುಂಡಿನ ದಾಳಿಗಳು ನಡೆಯುತ್ತಿರುತ್ತವೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಸಲ್ಮಾನ್ ಖಾನ್ ಟಾರ್ಗೆಟ್ ಮಾಡಿಯೇ ಗುಂಡಿನ ದಾಳಿಯನ್ನು ನಡೆಸಲಾಗಿತ್ತು. ಆಗ ಅದರಿಂದ ಅವರು ಬಚಾವಾಗಿದ್ದರು, ಪ್ರಮುಖವಾಗಿ ಇವರ ಮೇಲೆ ಹಲವು ಜನರ ಕಣ್ಣಿದೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಹಿಟ್ ಲಿಸ್ಟ್‌ನಲ್ಲಿ ಸಲ್ಲು..
ಈ ಸಲ್ಮಾನ್ ಖಾನ್ ಜೀವಕ್ಕೆ ಅಪಾಯವಿದೆ ಎಂಬ ವಿಚಾರ ಎಲ್ಲರಿಗೂ ತಿಳಿದಿರುವುದೇ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈಗಾಗಲೇ ಈ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಹಲವು ಬಾರಿ ಬೆದರಿಕೆ ಹಾಕಿದೆ. ಇದಲ್ಲದೆ, ಸಲ್ಮಾನ್ ಮನೆಯಲ್ಲಿ ಹಲವಾರು ಬಾರಿ ಗುಂಡಿನ ದಾಳಿಗಳು ನಡೆದಿವೆ. ಇದರೊಂದಿಗೆ ಸಲ್ಮಾನ್ ಜೀವ ರಕ್ಷಿಸಲು ಪೊಲೀಸರು ಭಾರೀ ಭದ್ರತೆ ಒದಗಿಸುತ್ತಿದ್ದಾರೆ. ಮತ್ತೊಂದೆಡೆ, ಸಲ್ಮಾನ್ ಎಲ್ಲಿಗೆ ಹೋದರೂ ಅವರಿಗೆ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿರುತ್ತದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಯಾವಾಗಲೂ ಸಲ್ಮಾನ್‌ಗೆ ಹಾನಿ ಮಾಡುತ್ತದೆ ಎಂದು ಅಭಿಮಾನಿಗಳು ಚಿಂತಿತರಾಗಿದ್ದಾರೆ.
ಇನ್ನೂ ಮುಖ್ಯವಾಗಿ ಕಳೆದ 1998 ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಬೇಟೆಯಾಡಿದ ಆರೋಪ ಇವರ ಮೇಲಿದೆ. ಅಂದಿನಿಂದ, ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆಗಳು ಬರುತ್ತಿವೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಆತನನ್ನು ಕೊಲೆ ಮಾಡಲು ಪ್ರಯತ್ನಿಸುತ್ತಿದೆ. ಅವರು ಸಾರ್ವಜನಿಕವಾಗಿ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆರಿಕೆ ಹಾಕಿದ್ದು, ನಟನಿಗೆ ಯಾವಾಗ ಏನಾಗುತ್ತೋ ಎಂಬ ಭಯದಲ್ಲಿ ಸದ್ಯ ಅವರ ಅಭಿಮಾನಿಗಳು ಚಿಂತಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಸಲ್ಲು ಮನೆಗೆ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತಿದ್ದಾರೆ.