ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಮೊದಲ ಚಿತ್ರದಲ್ಲಿ ನಟಿಯಾಗಿ ಮಿಂಚಿದ ಅಮೂಲ್ಯ. ನಂತರ ಬ್ಯಾಕ್ ಟೂ ಬ್ಯಾಕ್ ಸೂಪರ್ ಹಿಟ್ ಸಿನಿಮಾ ಕೊಡುತ್ತ ಹೋದರು. ಇದೀಗ ಅವಳಿ ಗಂಡು ಮಕ್ಕಳ ತಾಯಿಯಾಗಿರುವ ಅಮೂಲ್ಯ. ಚೆಲುವಿನ ಚಿತ್ತಾರ ಸಿನಿಮಾದ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಚೆಲುವಿನ ಚಿತ್ತಾರ ಸಿನಿಮಾದ ನಿರ್ದೇಶಕರಿಂದ ಹಿಡಿದು, ಎಲ್ಲರಿಗೂ ಅಮೂಲ್ಯ ಧನ್ಯವಾದ ತಿಳಿಸಿದ್ದಾರೆ.
ಚೆಲುವಿನ ಚಿತ್ತಾರ ಎಂಬ ಮೊದಲ ಸಿನಿಮಾ, ನನ್ನ ಜೀವನದಲ್ಲಿ ಕೇವಲ ಸಿನಿಮಾ ಆಗಿ ಉಳಿದಿಲ್ಲ. ಅದು ಅಪಾರ ನೆನಪುಗಳ ಆಗರವಾಗಿದೆ, ಅದು ನನ್ನ ಬಣ್ಣ ಹಚ್ಚುವ ಕನಸಿಗೆ ಹೊಸ ದಿಶೆ ನೀಡಿದ ಕೂಸಾಗಿದೆ.
ಚೆಲುವಿನ ಚಿತ್ತಾರ ಚಿತ್ರದ ಮೂಲಕ ನನ್ನನ್ನು ನಾಯಕಿ ನಟಿಯಾಗಿ ಪರಿಚಯಿಸಿ, ಕನ್ನಡ ಜನತೆಯ ಮನಸ್ಸಲ್ಲಿ ಐಸೂ ಎನ್ನುವ ಹೆಸರಿನೊಂದಿಗೆ ನನ್ನನ್ನು ಚಿರಸ್ಥಾಯಿಯಾಗಿಸಿದ ಶ್ರೀ ಎಸ್ ನಾರಾಯಣ್ ಸರ್ ಅವರಿಗೂ ಹಾಗು ನನ್ನ ಎಲ್ಲಾ ಹೆಜ್ಜೆಗಳಲ್ಲೂ ಸಲಹೆ ನೀಡುತ್ತಾ ಬೆಂಬಲವಾಗಿ ನಿಂತಿರುವ ಗೋಲ್ಡನ್ ಸ್ಟಾರ್ ಗಣೇಶ್ ರವರಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ.
ಅದಲ್ಲದೇ ಚೆಲುವಿನ ಚಿತ್ತಾರ ಅತ್ಯಂತ ಯಶಸ್ಸು ಕಾಣಲು ಕಾರಣೀಕರ್ತರಾದ ಸಿನಿಮಾ ತಂತ್ರಜ್ಞರು, ಕ್ಯಾಮೆರಾ ಮ್ಯಾನ್, ಮೇಕಪ್ ಮ್ಯಾನ್ ಹಾಗೂ ಮಾಧ್ಯಮ ವರ್ಗದವರಿಗೆ ಹಾಗೂ ಎಲ್ಲಾ ಅಭಿಮಾನಿಗಳಿಗೂ ನಾನು ಆಭಾರಿಯಾಗಿದ್ದೇನೆ. ನಿಮ್ಮ ಅಭಿಮಾನ, ಪ್ರೀತಿ ಹಾರೈಕೆಗಳೇ ನನಗೆ ಶ್ರೀರಕ್ಷೆ ಎಂದು ಅಮೂಲ್ಯ ಬರೆದುಕೊಂಡಿದ್ದಾರೆ.