ಬೆಂಗಳೂರು: ಸರ್ಕಾರ ಪತನದಂಚಿನಲ್ಲಿರೋ ಮಧ್ಯೆಯೇ ಸಿಎಂ ಕುಮಾರಸ್ವಾಮಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬನಶಂಕರಿ ಬಡಾವಣೆಯ ಡಿನೋಟಿಫಿಕೇಷನ್ ಪ್ರಕರಣ ಕುರಿತು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ರದ್ದುಗೊಳಿಸಿರುವ ನ್ಯಾಯಾಲಯ ಇದೀಗ ಮತ್ತೆ ವಿಚಾರಣೆ ನಡೆಸಲು ಆದೇಶಿಸಿದೆ.
ಈ ಹಿಂದೆ ಎಚ್.ಡಿ ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯಲ್ಲಿ ಬನಶಂಕರಿ 5ನೇ ಹಂತದ ಬಡಾವಣೆಗಾಗಿ ಹಲಗೆವಡೇರಳ್ಳಿಯಲ್ಲಿ ಅಕ್ರಮವಾಗಿ 3.34 ಎಕರೆ ಜಮೀನನ್ನು ಡಿನೋಟಿಫೈ ಮಾಡಿದ್ದಾರೆ ಅಂತ ಚಾಮರಾಜನಗರದ ಮಾಹಿತಿ ಹಕ್ಕು ಹೋರಾಟಗಾರ ಎಂ.ಎಸ್ ಮಹದೇವಸ್ವಾಮಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ರು. ಇನ್ನು ಈ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಕುಮಾರಸ್ವಾಮಿ ವಿರುದ್ಧದ ಆರೋಪ ಸಾಬೀತಾಗಿಲ್ಲವೆಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಮಹದೇವಸ್ವಾಮಿ ಮತ್ತೆ ನ್ಯಾಯಾಲದ ಮೊರೆ ಹೋಗಿದ್ರು. ಇದೀಗ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸಿಎಂ ಕುಮಾರಸ್ವಾಮಿ ವಿರುದ್ಧದ ಈ ಪ್ರಕರಣವನ್ನ ವಿಚಾರಣೆಗೆ ಅಂಗೀಕರಿಸಿದೆ.
2007ರಲ್ಲಿ ಸಿಎಂ ಸ್ಥಾನದಿಂದ ಇಳಿಯುವ ಮೊದಲು ಡಿನೋಟಿಫೈ ಮಾಡಿದ್ದರು. ತನಿಖೆ ವಿಳಂಬವಾಗಿ ಮತ್ತೆ ಸಿಎಂ ಆದ ಸಂದರ್ಭದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಲೋಕಾಯುಕ್ತ ಪೊಲೀಸರ ಮೂಲಕ ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಅನ್ನೋದು ಮಹದೇವಸ್ವಾಮಿ ಆರೋಪ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ರದ್ದುಗೊಳಿಸಿರುವ ಜನಪ್ರತಿನಿಧಿಗಳ ನ್ಯಾಯಾಲಯ ಜು.26ರಂದು ಪ್ರಮಾಣಿತ ಹೇಳಿಕೆ ದಾಖಲಿಸಲು ಆದೇಶಿಸಿದೆ.