ಬೆಂಗಳೂರು: ತಿರುಪತಿ ತಿಮ್ಮಪ್ಪನ ಭಕ್ತರು ದೇಣಿಗೆ ನೀಡೋ ಮೂಲಕ ಕೂಡ ಇನ್ನು ಮುಂದೆ ವಿಐಪಿ ದರ್ಶನ ಪಡೆಯಬಹುದಾಗಿದೆ. ಯಾಕಂದ್ರೆ ಇದೀಗ ಟಿಟಿಡಿ 10 ಸಾವಿರ ದೇಣಿಗೆ ನೀಡುವ ಭಕ್ತರಿಗೂ ಕೂಡ ವಿಐಪಿ ದರ್ಶನಕ್ಕೆ ಅನುವು ಮಾಡಿಕೊಡಲು ನಿರ್ಧರಿಸಿದೆ.
ತಿರುಪತಿ ತಿಮ್ಮಪ್ಪ ಒಂದು ಕ್ಷಣದ ದರ್ಶನಕ್ಕಾಗಿ ದಿನನಿತ್ಯ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಏರಿಕೆಯಾಗ್ತಿದೆ. ತಿಮ್ಮಪ್ಪನನ್ನು ಕಣ್ತುಂಬಿಕೊಳ್ಳಲು 6-7 ಗಂಟೆ ಕಾದು ಕುಳಿತು ದರ್ಶನ ಪಡೀತಾರೆ. ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಇತರೆ ಪ್ರಭಾವಿ ವ್ಯಕ್ತಿಗಳಿಂದ ಪತ್ರ ಪಡೆಯೋ ಮೂಲಕ ಸಾಕಷ್ಟು ಮಂದಿ ದರ್ಶನ ವ್ಯವಸ್ಥೆ ಮಾಡಿಕೊಳ್ತಾರೆ. ಇನ್ನು ದುಡ್ಡಿರುವವರು ವಿಐಪಿ ಟಿಕೆಟ್ ಪಡೆದು ದರ್ಶನವನ್ನು ತ್ವರಿತವಾಗಿ ಪಡೀತಾರೆ. ಆದ್ರೆ ದೇವಸ್ಥಾನದ ಟ್ರಸ್ಟ್ ದಿನಕ್ಕೆ ಇಂತಿಷ್ಟೇ ವಿಐಪಿ ಮತ್ತು ವಿವಿಐಪಿ ಟಿಕೆಟ್ ಗಳನ್ನು ನಿಗದಿಪಡಿಸಿದ್ದು ಅದೃಷ್ಟವಂತರು ಮಾತ್ರ ಟಿಕೆಟ್ ಪಡೀತಾರೆ. ಕೆಲವೊಮ್ಮೆ ದುಡ್ಡು ಕೊಟ್ಟರೂ ಆ ದಿನದ ಕೋಟಾ ಮುಗಿದಿರುತ್ತೆ. ಇನ್ನು ಮಧ್ಯವರ್ತಿಗಳ ಮೂಲಕ ಜನರು ಸಾವಿರಾರು ರೂಪಾಯಿ ಹಣ ನೀಡಿ ಟಿಕೆಟ್ ಪಡೆಯೋದೂ ಉಂಟು. ಇದಕ್ಕೆಲ್ಲಾ ಬ್ರೇಕ್ ಹಾಕಲು ಇದೀಗ ಟಿಟಿಡಿ ಒಂದು ಪ್ಲಾನ್ ಮಾಡಿದೆ.
ಇನ್ನು ಮುಂದೆ ದೇವಸ್ಥಾನಕ್ಕೆ 10 ಸಾವಿರ ರೂಪಾಯಿ ದೇಣಿಗೆ ನೀಡುವವರಿಗೂ ಕೂಡ ವಿಐಪಿ ದರ್ಶನ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದೆ. ಇದಕ್ಕಾಗಿ ದೇವಸ್ಥಾನದ ಶ್ರೀವಾಣಿ ಟ್ರಸ್ಟ್ ಮೂಲಕ ದೇಣಿಗೆ ಸಂಗ್ರಹಿಸಲು ಟಿಟಿಡಿ ಮುಂದಾಗಿದೆ. ಈ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಭಕ್ತರು ಯಾವುದೇ ನೂಕಾಟ ತಳ್ಳಾಟವಿಲ್ಲದೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ.