ಬೆಂಗಳೂರು, ನ. 30: ಅಕಾಲಿಕ ಮಳೆ ನಾಡಿನ ರೈತರಿಗೆ ಸಂಕಷ್ಟ ತಂದಿದೆ. ಕಳೆದ ವರ್ಷ ಕೊರೊನಾ ವೈರಸ್, ಲಾಕ್‌ಡೌನ್‌ನಿಂದ ಬೆಳೆಗಳಿಗೆ ಸರಿಯಾದ ಬೆಲೆಯಿಲ್ಲದೆ ನಷ್ಟಹೊಂದಿದ್ದರೈತರಿಗೆ ಅಕಾಲಿಕ ಮಳೆ ಮತ್ತಷ್ಟು ಹೊಡೆತ ಕೊಟ್ಟಿದೆ. ಪ್ರಕೃತಿ ವಿಕೋಪದಿಂದ ರೈತರು ಬಹಳಷ್ಟು ಸಮಸ್ಯೆಗೆ ಸಿಲುಕಿದ್ದಾರೆ.
ಇದೇ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ್ ರೈಯರಿಗೆ ನೆಮ್ಮದಿ ತರುವಂಥ ಭರವಸೆಯನ್ನು ಕೊಟ್ಟಿದ್ದಾರೆ.
“ಬೆಳೆ ಪರಿಹಾರದ ಮೊತ್ತವನ್ನು ಮಧ್ಯವರ್ತಿಗಳಿಗೆ ಅವಕಾಶವಿಲ್ಲದಂತೆ ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ” ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, “ಇತ್ತೀಚೆಗೆ ರಾಜ್ಯಾದ್ಯಂತ ಸುರಿದ ಅಕಾಲಿಕ ಮಳೆಯಿಂದ ಅಪಾರ ಬೆಳೆ ಮತ್ತು ಆಸ್ತಿ ಹಾನಿ ಸಂಭವಿಸಿತ್ತು. ಇದಕ್ಕೆ ಸಂಬಂದಿಸಿದಂತೆ ತುಮಕೂರು, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆ ಪ್ರವಾಸ ನಡೆಸಿ ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ವಿತರಿಸುವ ಭರವಸೆ ನೀಡಿದ್ದೆ. ಅದರಂತೆ ಈವರೆಗೆ ಬೆಳೆ ಪರಿಹಾರಕ್ಕೆ ಸಂಬಂದಿಸಿದಂತೆ 3 ಲಕ್ಷ ರೈತರಿಗೆ 226.57 ಕೋಟಿ ರೂಪಾಯಿಗಳ ಪರಿಹಾರ ವಿತರಿಸಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.
ಜೊತೆಗೆ “ಇಂದು 1.61 ರೈತರಿಗೆ 92.30 ಕೋಟಿ ಹಣ ಬಿಡುಗಡೆ ಮಾಡುತ್ತಿದ್ದೇವೆ. ಒಟ್ಟು 4.61 ರೈತರಿಗೆ 318.87 ಕೋಟಿ ರೂ. ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು ಮಧ್ಯವರ್ತಿಗಳಿಗೆ ಯಾವುದೇ ಅವಕಾಶ ಸಿಗದಂತೆ ಎಚ್ಚರಿಕೆ ವಹಿಸಲಾಗಿದೆ” ಎಂದು ಅಶೋಕ್ ಹೇಳಿದ್ದಾರೆ.
“ಈ ಹಿಂದೆ ಮೂರು ತಿಂಗಳಿಗೊಮ್ಮೆ ಬೆಳೆ ಪರಿಹಾರ ವಿತರಿಸಲಾಗುತ್ತಿತ್ತು. ಈಗ ಈ ವ್ಯವಸ್ಥೆಯನ್ನು ಸಂಪೂರ್ಣ ಬದಲಾವಣೆ ಮಾಡಲಾಗಿದೆ. ಎರಡು ಮೂರು ದಿನಕ್ಕೆ ಒಮ್ಮೆ ತಂತ್ರಾಂಶದಲ್ಲಿ ನಮೂದಿಸಿ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಲಾಗಿದೆ. ಕೇಂದ್ರಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ವರದಿ ಸಿದ್ದಪಡಿಸುತ್ತಿದ್ದೇವೆ. ಬೆಳೆ ಪರಿಹಾರ ನೀಡಲು ರಾಜ್ಯದಲ್ಲಿ ಹಣಕಾಸಿನ ಕೊರತೆ ಇಲ್ಲ. ರೈತರಿಗೆ ಅನುಕೂಲವಾಗಬೇಕು. ರೈತರ ಹಿತ ಕಾಯಲು ರಾಜ್ಯ ಸರಕಾರ ಸದಾ ಬದ್ದವಾಗಿದೆ” ಎಂದು ಇದೇ ವೇಳೆ ಆರ್. ಅಶೋಕ್ ಹೇಳಿದ್ದಾರೆ.