Sandalwood News: ಸಿನಿಮಾಗಳಲ್ಲಿ ನೈಜ ಘಟನೆ ಕುರಿತ ಹಲವಾರು ಕಥೆಯುಳ್ಳ ಸಿನಿಮಾಗಳು ಬಂದಿವೆ. ಕುಖ್ಯಾತ ರೌಡಿಗಳ ಕಥೆಗಳು ಹಂತಕರ ಕಥೆಗಳ ಸಿನಿಮಾಗಳಿಗೇನೂ ಬರವಿಲ್ಲ. ಹಾಗೆ ನೋಡಿದರೆ, ಸ್ಯಾಂಡಲ್ ವುಡ್ ನಲ್ಲೂ ಕೂಡ ಹಂತಕರ ಬಗೆಗಿನ ಸಿನಿಮಾಗಳು ಬಂದಿದ್ದೂ ಇದೆ. ಅವು ಸೂಪರ್ ಹಿಟ್ ಆಗಿದ್ದೂ ಇದೆ. ದಂಡುಪಾಳ್ಯ ಸೀರೀಸ್ ಬಂದು ಸಾಕಷ್ಟು ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತು. ಅದಕ್ಕೂ ಹಿಂದೆ ಹಲವು ರೌಡಿಗಳ ಕಥೆಗಳು ಕೂಡ ಸಿನಿಮಾ ಆಗಿ ಜೋರು ಸೌಂಡು ಮಾಡಿದ್ದುಂಟು. ಅವುಗಳ ಸಾಲಿಗೆ ಭೀಮಾ ತೀರದ ಹಂತಕರ ಕಥೆ ಕೂಡ ಸಿನಿಮಾ ಆಗಿದ್ದು ಎಲ್ಲರಿಗೂ ಗೊತ್ತು. ಸಿನಿಮಾ ರಿಲೀಸ್ ಮೊದಲೇ ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು.
ಈಗೇಕೆ ಭೀಮಾ ತೀರದ ಹಂತಕರ ಸ್ಟೋರಿ ಎಂಬ ಪ್ರಶ್ನೆ ಕಾಮನ್ ಆಗಿ ಬರುತ್ತೆ. ಇಲ್ಲಿ ಭೀಮಾ ತೀರದ ಹಂತಕರ ವಿಷಯವಿದೆ. ಬಾಗಪ್ಪ ಹರಿಜನ್ ಹತ್ಯೆ ಆಗಿದೆ. ಈ ಮೂಲಕ ಮತ್ತೊಮ್ಮೆ ಭೀಮಾ ತೀರದ ರಕ್ತ ಸಿಕ್ತ ಇತಿಹಾಸ ಚರ್ಚೆಗೆ ಬಂದಿದೆ. ಚಂದಪ್ಪ ಹರಿಜನನ ಸಹೋದರ ಸಂಬಂಧಿ, ಬಲಗೈ ಭಂಟನಾಗಿದ್ದ ಬಾಗಪ್ಪ ಹರಿಜನ್ ಅವರನ್ನು ಹತ್ಯೆ ಮಾಡಲಾಗಿದೆ. ಅಂದಹಾಗೆ ಭೀಮಾ ತೀರದ ಕತೆ ಸ್ಯಾಂಡಲ್ವುಡ್ನಲ್ಲೂ ಹವಾ ಎಬ್ಬಿಸಿತ್ತು ಅನ್ನೋದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.
ಕಳೆದ ಮಂಗಳವಾರ ರಾತ್ರಿಯಷ್ಟೆ ಬಾಗಪ್ಪ ಹರಿಜನ್ ಅವರನ್ನು ವಿಜಯಪುರದ ಮದಿನಾ ನಗರದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಭೀಮಾ ತೀರದಲ್ಲಿ ಅಟ್ಟಹಾಸ ಮೆರೆದಿದ್ದ ಚಂದಪ್ಪ ಹರಿಜನನ ಬಲಗೈ ಭಂಟನಾಗಿದ್ದ ಬಾಗಪ್ಪ ಹರಿಜನ್ , ಈ ಹಿಂದೆ ಕೆಲ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಇದೀಗ ಬಾಗಪ್ಪನ ಹತ್ಯೆ ಮೂಲಕ ಭೀಮಾ ತೀರದ ರಕ್ತ ಸಿಕ್ತ ಅಧ್ಯಾಯ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಭೀಮಾ ತೀರದ ಕೊಲೆಗಳು ಪೊಲೀಸರನ್ನು ನಿದ್ದೆಗೆಡಿಸಿರುವುದು ಮಾತ್ರವೇ ಅಲ್ಲದೆ, ಈ ಹಿಂದೆ ಸ್ಯಾಂಡಲ್ವುಡ್ನಲ್ಲೂ ಈ ಹಂತಕರ ಸುದ್ದಿ ಬಿರುಗಾಳಿಯನ್ನೇ ಎಬ್ಬಿಸಿತ್ತು.
ಅದು 2012 ರ ಏಪ್ರಿಲ್ 6. ದುನಿಯಾ ವಿಜಯ್ ನಟನೆಯ ‘ಭೀಮಾ ತೀರದಲ್ಲಿ’ ಹೆಸರಿನ ಸಿನಿಮಾ ಬಿಡುಗಡೆ ಆಗಿತ್ತು. ದುನಿಯಾ ವಿಜಯ್ ಅವರು ಈ ಸಿನಿಮಾದಲ್ಲಿ ಚಂದಪ್ಪ ಹರಿಜನ್ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ಓಂ ಪ್ರಕಾಶ್ ರಾವ್ ನಿರ್ದೇಶಕರಾಗಿದ್ದರು. ಅಣಜಿ ನಾಗರಾಜ್ ಅವರು ನಿರ್ಮಾಣ ಮಾಡಿದ್ದರು. ಎಲ್ಲವೂ ಸರಿ, ಆದರೆ ಈ ಸಿನಿಮಾ ಬಿಡುಗಡೆಗೂ ಮೊದಲು ಒಂದಷ್ಟು ಮಂದಿ ಅಪಸ್ವರ ಎತ್ತಿದ್ದರು. ಭೀಮಾ ತೀರದ ಮಂದಿ ಕೂಡ ರಿಲೀಸ್ ಗೆ ಅಡ್ಡಿ ಪಡಿಸಿದ್ದರು. ಆಗ ಅವರ ಮನವೊಲಿಸಲಾಗಿತ್ತು. ರಿಲೀಸ್ ಆದ ಮರುದಿನವೇ ಹಿರಿಯ ಪತ್ರಕರ್ತ, ಬರಹಗಾರ ರವಿ ಬೆಳಗೆರೆ ಅವರು ಸಿನಿಮಾ ತಂಡದ ವಿರುದ್ಧ ಆರೋಪಿಸಿದ್ದರು. ನಾನು ಬರೆದ ಪುಸ್ತಕ ‘ಭೀಮಾ ತೀರದ ಹಂತಕರು’ ಇದರೊಳಗಿದ್ದ ಕೆಲವು ವಿಷಯಗಳನ್ನು ಕದ್ದು ಈ ಚಿತ್ರವನ್ನು ಮಾಡಲಾಗಿದೆ ಎಂದು ಆರೋಪಿಸಿದ್ದರು. ತಮ್ಮ ಧಾಟಿಯಲ್ಲೇ ಅವರು ಚಿತ್ರತಂಡದ ವಿರುದ್ಧ ಹರಿಹಾಯ್ದಿದ್ದರು.
ಆಗ ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ, ಖಾಸಗಿ ವಾಹಿನಿಯೊಂದು ಚಿತ್ರತಂಡ ಹಾಗೂ ರವಿ ಬೆಳಗೆರೆ ಅವರನ್ನು ಮುಖಾ-ಮುಖಿಯಾಗಿಸಿ ಕೂರಿಸಿತ್ತು. ಅಷ್ಟೇ ಅಲ್ಲ, ಸುಮಾರು ನಾಲ್ಕು ಗಂಟೆಗಳ ಕಾಲ ಅವರೊಂದಿಗೆ ಚರ್ಚೆ ನಡೆಸಿತ್ತು. ಚರ್ಚೆಯ ವೇಳೆ ಹಲವು ಬಾರಿ ದುನಿಯಾ ವಿಜಯ್ ಮತ್ತು ಬೆಳಗೆರೆ ಅವರ ನಡುವೆ ಏರಿದ ಧ್ವನಿಯಲ್ಲಿ ಮಾತುಗಳು ಹೊಬಂದಿದ್ದವು. ‘ಭೀಮಾ ತೀರ ಯಾರಿಗೂ ಗೊತ್ತಿರಲಿಲ್ಲ, ನಾಲ್ಕು ವರ್ಷಗಳ ಕಾಲ ಅಲ್ಲೆಲ್ಲಾ ಓಡಾಡಿ, ಒಂದಷ್ಟು ಮಾಹಿತಿಯನ್ನು ಸಂಗ್ರಹಿಸಿ ಬರೆದಿದ್ದೇನೆ. ನಾನು ಪುಸ್ತಕ ಬರೆಯುವ ಮುನ್ನ ಚಂದಪ್ಪ ಹರಿಜನ್ ಹೆಸರು ಯಾರಿಗೂ ತಿಳಿದಿರಲಿಲ್ಲ. ನನ್ನ ಬೌದ್ಧಿಕ ಆಸ್ತಿಯನ್ನು ಕದ್ದಿದ್ದೀರಿ’ ಎಂದು ರವಿ ಬೆಳಗೆರೆ ಅವರು ಗಂಭೀರವಾದ ಆರೋಪ ಮಾಡಿದ್ದರು.
ಅಂದು ನಡೆದ ಆ ಚರ್ಚೆ ಭಾರೀ ಕುತೂಹಲ ಕೆರಳಿಸಿತ್ತು. ಅಷ್ಟೇ ಅಲ್ಲ, ಒಂದಷ್ಟು ಜನ ಸಿನಿಮಾ ತಂಡದೊಂದಿಗೆ ನಿಂತರೆ, ಇನ್ನಷ್ಟು ಜನ ರವಿಬೆಳಗೆರೆ ಅವರಿಗೆ ಸಾಥ್ ನೀಡಿದ್ದರು. ಅದು ಯಾವ ಮಟ್ಟಕ್ಕೆ ಹೋಗಿತ್ತು ಅಂದರೆ, ಕ್ಯಾಮೆರಾ ಮುಂದೆ ಒಬ್ಬರಿಗೊಬ್ಬರು ಹೊಡೆದಾಡುಕೊಳ್ಳುವ ಹಂತಕ್ಕೆ ಹೋಗಿತ್ತು. ಆಗ ನಿರ್ದೇಶಕ ಓಂ ಪ್ರಕಾಶ್ ರಾವ್ ಕೂಡ ಒಂದಷ್ಟು ಸ್ಪಷ್ಟನೆ ಕೊಟ್ಟಿದ್ದರು. ನಾನು 1996ಲ್ಲಿ ಸಿಂಹದ ಮರಿ ಸಿನಿಮಾದ ಚಿತ್ರೀಕರಣಕ್ಕಾಗಿ ಉತ್ತರ ಕರ್ನಾಟಕ ಭಾಗಕ್ಕೆ ಹೋದಾಗ, ಅಲ್ಲಿದ್ದ ಕೆಲವರಿಂದ ನನಗೆ ಚಂದಪ್ಪ ಹರಿಜನ್ ಅವರ ವಿಷಯ ಗೊತ್ತಾಯ್ತು. ಅದನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಇದು ನಿಜವಾದ ಕಥೆ ಅಲ್ಲ. ಇಲ್ಲಿ ಬೇರೆ ಕೆಲವು ಪಾತ್ರಗಳನ್ನು ಸೃಷ್ಟಿಸಲಾಗಿದೆ. ಇದೊಂದು ಕಾಲ್ಪನಿಕ ಕಥೆ ಎಂಬುದನ್ನು ಸಿನಿಮಾದ ಮೊದಲೇ ತೋರಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು.
ಆದರೆ, ಆ ಕಥೆ ವಿಚಾರ ಇನ್ನೊಂದು ಮಟ್ಟಕ್ಕೆ ಹೋಗಿತ್ತು. ಆಗಾಗ ದುನಿಯಾ ವಿಜಯ್ ಅವರ ಖಾಸಗಿ ಬದುಕಿನ ಬಗ್ಗೆಯೂ ರವಿಬೆಳಗೆರೆ ಅವರು ಮಾತನಾಡುತ್ತಿದ್ದರು. ಅದು ದುನಿಯಾ ವಿಜಯ್ ಅವರ ಫ್ಯಾನ್ಸ್ ಗೆ ನೋವುಂಟು ಮಾಡಿತ್ತು. ಯಾವಾಗ ರವಿಬೆಳಗೆರೆ ಅವರು ಹೆಚ್ಚು ಮಾತನಾಡತೊಡಗಿದರೋ, ಆಗ ದುನಿಯಾ ವಿಜಯ್ ಕೂಡ ರವಿಬೆಳಗೆರೆ ಅವರ ವಿರುದ್ಧ ಸೆಟೆದು ನಿಂತರು. ಏಕವಚನದಲ್ಲಿ ನಿಂದಿಸಿ ಟಾಂಗ್ ಕೊಟ್ಟಿದ್ದರು. ನಂತರ ರವಿಬೆಳಗೆರೆ ನಟ ದರ್ಶನ್ ಅವರ ಹೆಸರನ್ನು ತಂದಿದ್ದರು. ಆಗಲೂ ವಾಹಿನಿಯಲ್ಲಿ ವಿಜಯ್ ಅವರು ದರ್ಶನ್ ಜೊತೆ ಮಾತನಾಡಿ, ನೇರವಾಗಿ ಅಲ್ಲೇ ಕೂತಿದ್ದ ರವಿಬೆಳಗೆರೆ ಅವರಿಗೆ ಟಾಂಗ್ ಕೊಟ್ಟಿದ್ದರು.
ಅದಷ್ಟೇ ಅಲ್ಲ, ‘ಭೀಮಾ ತೀರದಲ್ಲಿ’ ಸಿನಿಮಾ ವಿರುದ್ಧ ಸಮುದಾಯವೊಂದು ಪ್ರತಿಭಟನೆ ನಡೆಸಿತ್ತು. ತಮ್ಮ ಸಮುದಾಯವನ್ನು ಅಪಮಾನಕರ ರೀತಿಯಲ್ಲಿ ಬಿಂಬಿಸಲಾಗಿದೆ ಎಂದು ಆರೋಪಿಸಲಾಗಿತ್ತು. ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ದುನಿಯಾ ವಿಜಯ್, ನಿರ್ಮಾಪಕ ಅಣಜಿ ನಾಗರಾಜ್ ಅವರ ಕ್ಷಮೆಗೆ ಒತ್ತಾಯಿಸಿದ್ದರು. ಅಷ್ಟಾದರೂ, ಭೀಮಾ ತೀರದಲ್ಲಿ ಸಿನಿಮಾ ರಿಲೀಸ್ ಆಗಿ, ಕುತೂಹಲದಿಂದ ನೋಡುಗರನ್ನು ಸೆಳೆದಿತ್ತು. ಈಗ ಬಾಗಪ್ಪ ಹರಿಜನ್ ಹತ್ಯೆಯಾಗಿದೆ. ತಿಳಿಯಾಗಿದ್ದ ಭೀಮಾ ತೀರ ಮತ್ತೆ ಸೌಂಡು ಮಾಡುತ್ತಿದೆ. ಅಲ್ಲಿ ಕೇಳುತ್ತಿದ್ದ ಬುಲೆಟ್ ಸದ್ದು ಮೌನನವಾಗಿತ್ತು. ಈಗ ಮತ್ತೆ ರಕ್ತಸಿಕ್ತ ತಾಣವಾಗಿದೆ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ.
ವಿಜಯ್ ಭರಮಸಾಗರ, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ