New Delhi: ಭಾರತದ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉದ್ಯಮಕ್ಕೆ ಕೇಂದ್ರದ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಪರಿವರ್ತನಾತ್ಮಕ ಹೆಜ್ಜೆ ಇರಿಸಿದ್ದು, ಪ್ರಧಾನಿಗಳ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ (Construction and Infrastructure Equipment-CIE) ಉತ್ಪಾದನಾ ಪೂರಕ ವ್ಯವಸ್ಥೆಯನ್ನು ಬಲಪಡಿಸಲು ₹11,000 ಕೋಟಿ ಮೌಲ್ಯದ ಬೃಹತ್ ಯೋಜನೆಗೆ ಅನುಮೋದನೆ ನೀಡಿದೆ.
ಈ ಬಗ್ಗೆ ಪ್ರಧಾನಿಗಳಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿರುವ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಬೃಹತ್ ಕೈಗಾರಿಕಾ ಸಚಿವಾಲಯದ ವ್ಯಾಪ್ತಿಯಲ್ಲಿ ಅನುಷ್ಠಾನಕ್ಕೆ ಬರಲಿರುವ ಈ ಯೋಜನೆಯು ರಾಷ್ಟ್ರದ ನಿರ್ಮಾಣ ಮತ್ತು ಮೂಲಭೂತ ಸೌಕರ್ಯಕ್ಕೆ ಹೊಸ ಆಯಾಮ ನೀಡಲಿದೆ ಎಂದಿದ್ದಾರೆ.
ಈ ಯೋಜನೆಯು ದೇಶೀಯ ಉತ್ಪಾದನೆಯನ್ನು ಬಲಪಡಿಸುತ್ತದೆ, ಸ್ಥಳೀಯ ಉತ್ಪಾದನೆಯನ್ನು (localization) ವೇಗಗೊಳಿಸುತ್ತದೆ. ಜತೆಗೆ ಸುಧಾರಿತ ತಂತ್ರಜ್ಞಾನವನ್ನು ಉತ್ತೇಜಿಸುತ್ತದೆ ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಜತೆಗೆ, ‘ಆತ್ಮನಿರ್ಭರ’ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿರುವ ಬಲಿಷ್ಠ ಭಾರತದತ್ತ ಇದು ಒಂದು ಬೃಹತ್ ಹೆಜ್ಜೆಯಾಗಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತದ ಆರ್ಥಿಕ ಪ್ರಗತಿಗೆ ಮೂಲಸೌಕರ್ಯ ಅಭಿವೃದ್ಧಿ ಬಹಳ ಮುಖ್ಯವಾಗಿದ್ದು; ರಸ್ತೆ, ರೈಲ್ವೆ, ಮೆಟ್ರೋ, ವಿಮಾನ ನಿಲ್ದಾಣ, ಬಂದರು, ಗಣಿಗಾರಿಕೆ, ಜಲಸಂಪನ್ಮೂಲ ಹಾಗೂ ಇಂಧನ ಕ್ಷೇತ್ರಗಳ ಅಭಿವೃದ್ಧಿಗೆ ಅತ್ಯಾಧುನಿಕ ಯಂತ್ರೋಪಕರಣಗಳ ಅತ್ಯಗತ್ಯವನ್ನು ಪೂರೈಸುವುದು ಈ ಯೋಜನೆಯ ಉದ್ದೇಶ. ಆದರೆ ಇಂತಹ ಪ್ರಮುಖ ಯಂತ್ರೋಪಕರಣಗಳು ಮತ್ತು ಅವುಗಳ ಬಿಡಿಭಾಗಗಳಿಗಾಗಿ ಭಾರತ ಇಂದಿಗೂ ವಿದೇಶಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿದೆ. ಈ ಅವಲಂಬನೆಯನ್ನು ಕಡಿಮೆ ಮಾಡಿ, ಭಾರತವನ್ನೇ ಜಾಗತಿಕ ಮಟ್ಟದ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಈ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
2026-27ರ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾದ ಈ ಯೋಜನೆಗೆ ಒಟ್ಟು ₹11,000 ಕೋಟಿ ಅನುದಾನವನ್ನು ನಿಗದಿಪಡಿಸಲಾಗಿದೆ. ಎಂಟು ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳ್ಳಲಿರುವ ಈ ಯೋಜನೆಯಡಿ ₹10,515 ಕೋಟಿಯನ್ನು ದೇಶೀಯ ಉತ್ಪಾದಕರಿಗೆ ಮಾರಾಟ ಆಧರಿತ ಪ್ರೋತ್ಸಾಹಧನವಾಗಿ ನೀಡಲು ಉದ್ದೇಶಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಭಾರತ ಜಗತ್ತಿನ 3ನೇ ಅತಿದೊಡ್ಡ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಮಾರುಕಟ್ಟೆಯಾಗಿದೆ. ಆದರೂ ಈ ಕ್ಷೇತ್ರದಲ್ಲಿ ದೇಶೀಯ ಉತ್ಪಾದನೆಯ ಪಾಲು ಸರಾಸರಿ ಶೇ.50ರಷ್ಟಿದೆ. ಇದಕ್ಕೆ ಹೋಲಿಸಿದರೆ ಚೀನಾದಲ್ಲಿ ಶೇ.95 ಮತ್ತು ಜಪಾನ್ನಲ್ಲಿ ಶೇ.85ರಷ್ಟು ಸ್ಥಳೀಯ ಉತ್ಪಾದನಾ ಪಾಲಿದೆ. ಅಂದರೆ ಭಾರತದಲ್ಲಿ ಬೇಡಿಕೆ ಮತ್ತು ಮಾರುಕಟ್ಟೆ ದೊಡ್ಡದಿದ್ದರೂ, ಅಗತ್ಯವಿರುವ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಬಿಡಿಭಾಗಗಳ ಉತ್ಪಾದನೆಯಲ್ಲಿ ಇನ್ನೂ ಸಾಕಷ್ಟು ಪ್ರಗತಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನಿಗಳ ದೂರದೃಷ್ಟಿಯ ಫಲವಾಗಿ ರೂಪಗೊಂಡಿರುವ ಯೋಜನೆ ನಿರ್ಮಾಣ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಅಗೆಯುವ ಯಂತ್ರಗಳು, ಸುರಂಗ ಕೊರೆಯುವ ಯಂತ್ರಗಳು, ಕ್ರೇನ್ಗಳು, ಲೋಡರ್ಗಳು, ಎಂಜಿನ್ಗಳು, ಹೈಡ್ರಾಲಿಕ್ ವ್ಯವಸ್ಥೆಗಳು ಮತ್ತು ಟ್ರಾನ್ಸ್ಮಿಷನ್ಗಳಂತಹ ಪ್ರಮುಖ ಉಪಕರಣಗಳ ದೇಶೀಯ ಉತ್ಪಾದನೆಗೆ ಈ ಯೋಜನೆ ಉತ್ತೇಜನ ನೀಡಲಿದೆ. ಇವು ರಸ್ತೆ, ರೈಲ್ವೆ, ಮೆಟ್ರೋ, ಗಣಿಗಾರಿಕೆ, ಬಂದರು ಮತ್ತು ಇಂಧನ ಕ್ಷೇತ್ರಗಳ ಅಭಿವೃದ್ಧಿಗೆ ಅತ್ಯಂತ ಅಗತ್ಯವಾದ ಉಪಕರಣಗಳಾಗಿವೆ. ಭಾರತದಲ್ಲಿ ಈಗ ಮೆಟ್ರೋ ರೈಲು ಯೋಜನೆಗಳು, ರಾಷ್ಟ್ರೀಯ ಹೆದ್ದಾರಿಗಳು, ಸುರಂಗ ಮಾರ್ಗಗಳು, ಬಂದರುಗಳು ಮತ್ತು ಗಣಿಗಾರಿಕೆ ಯೋಜನೆಗಳು ವೇಗವಾಗಿ ವಿಸ್ತರಿಸುತ್ತಿವೆ. ಇಂತಹ ಯೋಜನೆಗಳಿಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ದೇಶದಲ್ಲಿಯೇ ಉತ್ಪಾದಿಸಲು ಸಾಧ್ಯವಾದರೆ ನಿರ್ಮಾಣ ವೆಚ್ಚವನ್ನು ನಿಯಂತ್ರಿಸುವುದರ ಜತೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಭಾರತ ಬಲಿಷ್ಠವಾಗಬಹುದು ಎಂಬುದು ನರೇಂದ್ರ ಮೋದಿ ಅವರ ಆಶಯವಾಗಿದೆ ಎಂದು ಸಚಿವರು ಹೇಳಿದ್ದಾರೆ.




