Political News: ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ಹಲವು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಅವರ ಪ್ರತಿಭಟನೆಗೆ ಹಲವು ಸೆಲೆಬ್ರಿಟಿಗಳು, ಬಿಜೆಪಿ-ಜೆಡಿಎಸ್ ನಾಯಕರು ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ, ಇದೀಗ ಸಂಸದ ತೇಜಸ್ವಿ ಸೂರ್ಯ ಕೂಡ ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದು, ಸಿಎಂ ಬಳಿ ಮನವಿಯೂ ಮಾಡಿದ್ದಾರೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿಯೂ ನಡೆಸಿದ್ದಾರೆ.
ರಾಜ್ಯದ ಮೂಲೆ-ಮೂಲೆಗಳಿಂದ ತಮ್ಮ ಮನೆ-ಮಕ್ಕಳನ್ನು ಬಿಟ್ಟು ಬಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಳೆದ 9 ದಿನಗಳಿಂದ ತಮ್ಮ ಹಕ್ಕಿಗಾಗಿ, ನ್ಯಾಯಯುತವಾಗಿ ಪ್ರತಿಭಟನೆ ನಡೆಸುತ್ತಿರುವ ನಮ್ಮ ಆಶಾ ಕಾರ್ಯಕರ್ತೆಯರ ಕೂಗನ್ನು ಕೇಳಿಸಿಕೊಳ್ಳದೇ ಇರುವಷ್ಟು ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರ ಜಾಣಕಿವುಡಾಗಿದೆ! ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಅನಗತ್ಯ ಸುರಂಗ ರಸ್ತೆ, ದುಬಾರಿ ವೈಟ್-ಟಾಪಿಂಗ್, ದುಂದುವೆಚ್ಚದ ಪ್ರಚಾರ ಹಾಗೂ ಶಾಸಕರ ಐಷಾರಾಮಿ ದರ್ಬಾರಿಗೆ ಸಾವಿರಾರು ಕೋಟಿ ಸುರಿಯಲು ದುಡ್ಡಿದೆ; ಹಗರಣಗಳಲ್ಲಿ ಕೊಳ್ಳೆ ಹೊಡೆಯಲು ಹಣವಿದೆ. ಆದರೆ ಹಳ್ಳಿಹಳ್ಳಿಗಳಲ್ಲಿ ತಾಯಿ-ಹಸುಗೂಸುಗಳ ಜೀವ ಕಾಯುವ ನಮ್ಮ 41,000ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ಕೊಟ್ಟ ಮಾತಿನಂತೆ ಗೌರವಧನ ಹೆಚ್ಚಿಸಲು ಖಜಾನೆ ಖಾಲಿಯೇ? ಎಂದು ಸಂಸದರು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳೇ, ಜಪಾನ್ನಿಂದ ವಿಡಿಯೋ ಕರೆಗಳಲ್ಲಿ ಸಬೂಬು ಹೇಳುವುದನ್ನು ಬಿಟ್ಟು, ನೇರವಾಗಿ ಫ್ರೀಡಂ ಪಾರ್ಕ್ಗೆ ಬಂದು, ಅವರ ಕಷ್ಟಕ್ಕೆ ಓಗೊಡಿ. ಆಶಾ ಕಾರ್ಯಕರ್ತೆಯರಿಗೆ ನಿಮ್ಮದೇ ಪಕ್ಷ ಕೊಟ್ಟ ಮಾತನ್ನು ಉಳಿಸಿಕೊಳ್ಳಿ. ನುಡಿದಂತೆ ನಡೆಯಿರಿ. ‘ಆಶಾ’ ಎಂದರೆ ಭರವಸೆ. ಅದನ್ನು ಮುರಿಯಬೇಡಿ ಮುಖ್ಯಮಂತ್ರಿಗಳೇ ಎಂದು ತೇಜಸ್ವಿ ಸೂರ್ಯ ಸಿಎಂ ಡಿ.ಕೆ.ಶಿವಕುಮಾರ್ ಬಳಿ ಮನವಿ ಮಾಡಿದ್ದಾರೆ.




