Political News: ಬೀದರ್, ಶಿವಮೊಗ್ಗ, ಧಾರವಾಡದಲ್ಲಿ ಸಿಇಟಿ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿ, ಪರೀಕ್ಷೆ ಬರೆಯಲು ಅಡ್ಡಿಪಡಿಸಿದ ವಿಚಾರಕ್ಕೆ ಸಂಬಂದಿಸಿದಂತೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಸಿ.ಇ.ಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವ ಕ್ರಮ ನಿಯಮ ಬಾಹಿರವಾದುದ್ದು. ಪರೀಕ್ಷೆಯಲ್ಲಿ ಅಕ್ರಮ ನಡೆಸಬಹುದಾದ ಸಾಧ್ಯತೆಗಳನ್ನು ಪರಿಗಣಿಸಿ ಮಾತ್ರವೇ ಕ್ರಮ ಕೈಗೊಳ್ಳಬೇಕು, ವಿನಃ ಹೀಗೆ ಅನವಶ್ಯಕವಾಗಿ ಇತರರ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾದ ನಿಯಮ ಹೇರಿಕೆ ಮಾಡಬಾರದು. ಇಂಥದ್ದನ್ನು ನಾವು ಸಹಿಸುವುದಿಲ್ಲ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿದ್ಯಾರ್ಥಿಗಳ ಜನಿವಾರ ಕಳಚಿದ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ನೀಡಲು ಸರ್ಕಾರ ಬದ್ಧ! ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು. ಧರ್ಮದ ಆಚರಣೆ ವಿಚಾರದಲ್ಲಿ ಸರ್ಕಾರ ಎಂದಿಗೂ ಮಧ್ಯಪ್ರವೇಶ ಮಾಡುವುದಿಲ್ಲ. ಆಯಾ ಧರ್ಮ ಉಳಿಸಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ನಮ್ಮ ಸರ್ಕಾರ ಎಲ್ಲರನ್ನೂ ಸಾಮರಸ್ಯದಿಂದ ಒಗ್ಗೂಡಿಸಿಕೊಂಡು ಹೋಗುವ ಕೆಲಸ ಮಾಡಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇನ್ನು ಈ ಘಟನೆ ಖಂಡಿಸಿ ರಾಜ್ಯದಾದ್ಯಂತ ಬ್ರಾಹ್ಮಣ ಸಂಘಗಳು ಪ್ರತಿಭಟನೆ, ಜಾತಾ ಹಮ್ಮಿಕೊಂಡಿದೆ. ಅಲ್ಲದೇ, ಸಿಬ್ಬಂದಿಗಳ ಈ ಕ್‌ರಮ ಖಂಡನೀಯವೆಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಇನ್ನು ಬೀದರ್‌ನಲ್ಲಿ ಜನಿವಾಾರ ತೆಗೆಯದಿದ್ದಕ್ಕೆ, ಪರೀಕ್ಷೆ ಬರೆಯಲು ಅವಕಾಶ ಕೊಡದಿರುವ ಕಾರಣ, ನಮ್ಮ ಮಗನ ಎಂಜನಿಯರಿಂಗ ಕಲಿಯುವ ಕನಸು ಭಗ್ನವಾಗಿದೆ ಎಂದು ವಿದ್ಯಾರ್ಥಿಯ ತಂದೆ ಹೇಳಿದ್ದರು. ಹಾಗಾಗಿ ನಿನ್ನೆ ವಿದ್ಯಾರ್ಥಿ ಮನೆಗೆ ಭೇಟಿ ಕೊಟ್ಟ ಸಚಿವ ಈಶ್ವರ ಖಂಡ್ರೆ, ವಿದ್ಯಾರ್ಥಿಗೆ ಉಚಿತ ಎಂಜಿನಿಯರಿಂಗ್ ಸೀಟ್ ಕೊಡುವುದಾಗಿ ಭರವಸೆ ನೀಡಿದ್ದಾರೆ.