Monday, September 9, 2024

Latest Posts

Renukaswamy Murder Case: ದರ್ಶನ್ & ಗ್ಯಾಂಗ್​ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ: ಈ ಪ್ರಕರಣದಲ್ಲಿ ‘ಕಾಟೇರ’ನ ಪಾತ್ರವೇನು?

- Advertisement -

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಮಗ್ರ ತನಿಖೆ ನಡೆಸಿರುವ ಕಾಮಾಕ್ಷಿಪಾಳ್ಯ ಪೊಲೀಸರು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ (24th Additional Chief Metropolitan Magistrate)​ಗೆ 3 ಸಾವಿರದ 991 ಪುಟಗಳ ದೋಷಾರೋಪ ಪಟ್ಟಿ (3991 page Charge Sheet)ಯನ್ನು ಸಲ್ಲಿಸಿದ್ದಾರೆ. ನಟ ದರ್ಶನ್​ (Actor Darshan), ಪವಿತ್ರಾ ಗೌಡ (Pavithra Gowda) ಸೇರಿದಂತೆ ಪ್ರಕರಣದ ಎಲ್ಲಾ 17 ಆರೋಪಿಗಳ ವಿರುದ್ಧ ಸಂಗ್ರಹ ಮಾಡಲಾಗಿರುವ ಪ್ರತ್ಯಕ್ಷ, ಪರೋಕ್ಷ, ಸಾಂದರ್ಭಿಕ, ತಾಂತ್ರಿಕ, ವೈಜ್ಞಾನಿಕ ಹಾಗೂ ಇತರೆ ಸಾಕ್ಷ್ಯಾಧಾರಗಳನ್ನ ಆಧರಿಸಿ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. ದೋಷಾರೋಪ ಪಟ್ಟಿಯಲ್ಲಿ ಒಟ್ಟು 231 ಸಾಕ್ಷಿಗಳನ್ನು ನಮೂದಿಸಲಾಗಿದೆ. ಒಟ್ಟು 3 ಸಾವಿರದ 991 ಪುಟಗಳ ಆರೋಪ ಪಟ್ಟಿಯಲ್ಲಿ ಒಟ್ಟು 7 ಸಂಪುಟಗಳಿದ್ದು, 10 ಕಡತಗಳನ್ನು ಒಳಗೊಂಡಿದೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಸರ್ಕಾರಿ ಅಧಿಕಾರಿಗಳು, ಮೂರು ಪ್ರತ್ಯಕ್ಷ ಸಾಕ್ಷಿಗಳು ಸೇರಿದಂತೆ ಒಟ್ಟು 231 ಸಾಕ್ಷಿದಾರರ ಹೇಳಿಕೆಗಳನ್ನು ಪೊಲೀಸರು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ. ಎಫ್​ಎಸ್​ಎಲ್​ ಮತ್ತು ಸಿಎಫ್​ಎಸ್​ಎಲ್​ನಿಂದ 8 ವರದಿಗಳು ಈಗಾಗಲೇ ಪೊಲೀಸರ ಕೈ ಸೇರಿದ್ದು, ನಟ ದರ್ಶನ್ ಮತ್ತವರ ತಂಡದ ವಿರುದ್ಧ ಸಾಕಷ್ಟು ತಾಂತ್ರಿಕ ಸಾಕ್ಷಿಗಳನ್ನ ಸಂಗ್ರಹಿಸಿರೋ ತನಿಖಾಧಿಕಾರಿಗಳು ಆರೋಪ ಪಟ್ಟಿಯಲ್ಲಿ ಎಲ್ಲವನ್ನೂ ಸಂಕ್ಷಿಪ್ತವಾಗಿ ಉಲ್ಲೇಖಿಸಿದ್ದಾರೆ.

ಚಾರ್ಜ್​​ಶೀಟ್​ನಲ್ಲೂ ನಟ ದರ್ಶನ್ 2ನೇ ಆರೋಪಿ
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರು ಎಫ್​ಐಆರ್​ ದಾಖಲಿಸೋವಾಗ ಪವಿತ್ರಾಗೌಡ ಎ1 ಹಾಗೂ ದರ್ಶನ್ ಅವರನ್ನ 2ನೇ ಆರೋಪಿಯನ್ನಾಗಿ ಮಾಡಿದ್ದರು. ಚಾರ್ಜ್​ಶೀಟ್​ನಲ್ಲಿ ದರ್ಶನ್ ಅವರನ್ನ ಎ1, ಪವಿತ್ರಾ ಗೌಡ ಎ2 ಆಗಬಹುದು ಎನ್ನಲಾಗ್ತಿತ್ತು. ಆದ್ರೀಗ ಎಸಿಪಿ ಚಂದನ್​​ ಕುಮಾರ್ ನೇತೃತ್ವದ ತನಿಖಾ ತಂಡ ದರ್ಶನ್ ಅವರನ್ನ 2ನೇ ಆರೋಪಿ ಆಗಿಯೇ ಚಾರ್ಜ್​​ಶೀಟ್​ನಲ್ಲಿ ಉಲ್ಲೇಖ ಮಾಡಿದೆ. ಹೀಗಾಗಿ ಪವಿತ್ರಾ ಗೌಡ ಪ್ರಕರಣದ ಎ1 ಆರೋಪಿ ಆಗಿ ಮುಂದುವರಿದಿದ್ದಾರೆ.

 

ಕೊಲೆ ಪ್ರಕರಣದಲ್ಲಿ ‘ಕಾಟೇರ’ನ ಪಾತ್ರವೇನು?
ಪ್ರಕರಣದ 2ನೇ ಆರೋಪಿಯಾಗಿರುವ ದರ್ಶನ್ ವಿರುದ್ಧ ಚಾರ್ಜ್​ಶೀಟ್​ನಲ್ಲಿ ಗಂಭೀರ ಆರೋಪಗಳಿವೆ. ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿಸಿದ್ದು, ಹಲ್ಲೆ ಮಾಡಿದ್ದು, ಕೊಲೆ ನಡೆದ ಬಳಿಕ ಪ್ರಕರಣವನ್ನ ಮುಚ್ಚಿ ಹಾಕಲು ಹಣ ನೀಡಿದ್ದೇ ದರ್ಶನ್ ಎಂಬ ಅಂಶವನ್ನ ಪೊಲೀಸರು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ. ಕೊಲೆ ನಡೆದ ಸ್ಥಳದಲ್ಲಿ ದರ್ಶನ್​ ಇರುವುದು ಮತ್ತು ಕೊಲೆ ನಡೆದ ಬಳಿಕ ಸ್ಥಳದಿಂದ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದರ್ಶನ್ ಅವರ ಬಟ್ಟೆ ಮತ್ತು ಶೂನಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಇರೋದು ಪತ್ತೆಯಾಗಿದ್ದು, ಇದಕ್ಕೆ ಸಾಕ್ಷ್ಯಗಳು ಕೂಡ ಸಿಕ್ಕಿವೆ. ಅಲ್ಲದೆ, ದರ್ಶನ್ ಹಲ್ಲೆ ಮಾಡಿರೋದು ಮತ್ತು ಕೊಲೆಯಲ್ಲಿ ಭಾಗಿಯಾಗಿರೋದು ಚಾರ್ಜ್​ಶೀಟ್​ನಲ್ಲಿ ದೃಢಪಟ್ಟಿದೆ.

ರೇಣುಕಾಸ್ವಾಮಿ ಕೊಲೆಗೆ ಪವಿತ್ರಾಗೌಡ ಮೂಲ ಕಾರಣ
ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್​ಗೆ ದೋಷಾರೋಪ ಪಟ್ಟಿಯನ್ನ ಸಲ್ಲಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು ಕೊಲೆಗೆ ಪವಿತ್ರಾ ಗೌಡ ಅವರೇ ಮೂಲ ಕಾರಣ ಎಂದು ಚಾರ್ಜ್​​ಶೀಟ್​ನಲ್ಲಿ ಉಲ್ಲೇಖ ಮಾಡಿದ್ದಾರೆ. ಹಲ್ಲೆ ನಡೆಸುವ ಸ್ಥಳದಲ್ಲಿ ಹಾಜರಿದ್ದ ಪವಿತ್ರಾಗೌಡ, ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದಿರೋದು ಅಧಿಕೃತ ಆಗಿದೆ. ಅಲ್ಲದೆ, ಪಟ್ಟಣಗೆರೆ ಶೆಡ್​ಗೆ ಪವಿತ್ರಾ ಗೌಡ ಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆಕೆಯ ಮೊಬೈಲ್ ಕೃತ್ಯದ ಸ್ಥಳದಲ್ಲಿ ಆ್ಯಕ್ಟೀವ್ ಆಗಿತ್ತು ಅನ್ನೋದು ಕೂಡ ದೃಢಪಟ್ಟಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಕಾಮಾಕ್ಷಿಪಾಳ್ಯ ಪೊಲೀಸರು ಸಿಆರ್​ಪಿಸಿ 173(8) ಅಡಿಯಲ್ಲಿ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನ ಮಾತ್ರ ಕೋರ್ಟ್​ಗೆ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ಈ ಕೇಸ್​ ಅನ್ನು ಸ್ಪೆಷಲ್ ಕೋರ್ಟ್ ಅಥವಾ ತ್ವರಿತ ಕೋರ್ಟ್​ಗೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಒಂದುವೇಳೆ ಪೊಲೀಸರ ಈ ಮನವಿಗೆ ಸರ್ಕಾರ ಒಪ್ಪಿಗೆ ಕೊಟ್ಟರೆ ನಟ ದರ್ಶನ್​ ಆ್ಯಂಡ್ ಗ್ಯಾಂಗ್ ವಿರುದ್ಧದ ಕೊಲೆ ಪ್ರಕರಣ ಆದಷ್ಟು ಬೇಗ ಇತ್ಯರ್ಥವಾಗಲಿದೆ.

- Advertisement -

Latest Posts

Don't Miss