Political News: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಪ್ರತೀ ಸಲ ವಾಗ್ದಾಳಿ ಮಾಡುವ ಸಿಎಂ ಸಿದ್ದರಾಮಯ್ಯ ಇಂದೂ ಕೂಡ ಪ್ರಧಾನಿ ಮೋದಿಗೆ ಟ್ವೀಟ್ ಮಾಡುವ ಮೂಲಕ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. ಅವರ ಟ್ವೀಟ್ ಇಂತಿದೆ..
ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಭರವಸೆ ಪ್ರಕಾರ ಹತ್ತು ವರ್ಷಗಳ ಅವಧಿಯಲ್ಲಿ 20 ಕೋಟಿ ಉದ್ಯೋಗ ಕೊಡಬೇಕಾಗಿತ್ತು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಹೇಳುವ ಪ್ರಕಾರ ಕೇಂದ್ರ ಬಿಜೆಪಿ ಸರ್ಕಾರದಿಂದ 7 ಕೋಟಿ ಉದ್ಯೋಗ ಸೃಷ್ಟಿಯಾಗಿದೆಯಂತೆ. ಯಡಿಯೂರಪ್ಪನವರ ಪ್ರಕಾರ ಮೋದಿಯವರು ಹೇಳಿರುವುದು ಸುಳ್ಳು. ಸತ್ಯ ಸಂಗತಿ ಏನೆಂದರೆ ಇಬ್ಬರು ನಾಯಕರು ಹೇಳುತ್ತಿರುವುದು ಸುಳ್ಳು. ಒಂದು ದೊಡ್ಡ ಸುಳ್ಳು, ಇನ್ನೊಂದು ಸಣ್ಣ ಸುಳ್ಳು. ಒಟ್ಟಾರೆ ಎರಡೂ ಸುಳ್ಳು. ಇದು ದೇಶದ ದುರ್ಗತಿ.
ರಾಜ್ಯದಲ್ಲಿ ಉದ್ಯೋಗದ ಸ್ಥಿತಿ ಬಗ್ಗೆ ವಿಶ್ವಾಸಾರ್ಹ ಸಂಸ್ಥೆಗಳು ನೀಡಿರುವ ಅಧಿಕೃತ ಮಾಹಿತಿಯನ್ನು ಆಧರಿಸಿ ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದ ಜಿತೇಂದರ್ ಸಿಂಗ್ ಅವರು 2022ರ ಜುಲೈನಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ “ 2014-15 ಮತ್ತು 2021 -22ರ ಅವಧಿಯ ನಡುವೆ ಕೇವಲ 7 ಲಕ್ಷ ಹೊಸ ಉದ್ಯೋಗಗಳು ಮಾತ್ರ ಸೃಷ್ಟಿಯಾಗಿತ್ತು ಎಂದು ಹೇಳಿದ್ದರು. ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾದ ಎನ್ ಎಸ್ ಎಸ್ ಒ 2017-18ರಲ್ಲಿ ನೀಡಿದ್ದ ವರದಿಯ ಪ್ರಕಾರ ಕಳೆದ 45 ವರ್ಷಗಳಲ್ಲೇ ದೇಶದ ನಿರುದ್ಯೋಗ ಪ್ರಮಾಣ ಅತಿ ಗರಿಷ್ಠ ಮಟ್ಟಕ್ಕೆ, ಅಂದರೆ 6.1 ಗೆ ತಲುಪಿದೆ, 2011-12ರಲ್ಲಿ ಈ ಪ್ರಮಾಣ ಶೇ 2.2 ಆಗಿತ್ತು ಎಂದಿದ್ದರು. ಈ ಸಚಿವರು ಹೇಳಿರುವುದು ನಿಮ್ಮದೇ ಸರ್ಕಾರ ನೀಡಿರುವ ಮಾಹಿತಿಯಲ್ಲವೇ ಪ್ರಧಾನಿಗಳೇ?
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕನಾಮಿ ವರದಿ ಪ್ರಕಾರ ದೇಶದ ನಿರುದ್ಯೋಗ ಪ್ರಮಾಣ 2014ರಲ್ಲಿ 5.44% ಇದ್ದದ್ದು 2023ರ ಅಕ್ಟೋಬರ್ನಲ್ಲಿ 10.05% ತಲುಪಿದೆ. ಇನ್ನು ವಯಸ್ಸಿನ ಆಧಾರದಲ್ಲಿ ನೋಡುವುದಾದರೆ 20 ರಿಂದ 24ರ ವಯೋಮಾನದವರು 43.65% ನಿರುದ್ಯೋಗಿಗಳಿದ್ದರೆ; 25 ರಿಂದ 29 ವಯೋಮಾನದವರಲ್ಲಿ 14.33%, 30 ರಿಂದ 34 ವಯೋಮಾನದವರಲ್ಲಿ 2.49% ನಿರುದ್ಯೋಗಿಗಳಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರವೇ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸುವ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ (ಪಿಎಲ್ಎಫ್ ಎಸ್) ಪ್ರಕಾರ 2019 ರಿಂದ 2022ರವರೆಗಿನ ಅವಧಿಯಲ್ಲಿ ದೇಶದ ನಿರುದ್ಯೋಗ ಪ್ರಮಾಣ 22.9% ಕ್ಕೆ ಏರಿಕೆಯಾಗಿದೆ. ಹೆಚ್ಚಾಗಿರುವುದು ಉದ್ಯೋಗಗಳ ಸಂಖ್ಯೆಯೇ? ಇಲ್ಲವೇ ನೀವು ಹೇಳುತ್ತಿರುವ ಸುಳ್ಳುಗಳ ಸಂಖ್ಯೆಯೇ ಪ್ರಧಾನಿ ನರೇಂದ್ರ ಮೋದಿ ಅವರೇ?
ವಿಶ್ವಬ್ಯಾಂಕ್ 2022ರಲ್ಲಿ ನೀಡಿದ್ದ ವರದಿ ಪ್ರಕಾರ ನಿರುದ್ಯೋಗದ ಪ್ರಮಾಣ. ಪಾಕಿಸ್ತಾನದಲ್ಲಿ ಶೇ. 11.3 ರಷ್ಟಿದ್ದರೆ, ಬಾಂಗ್ಲಾದೇಶದಲ್ಲಿ 12.9 ರಷ್ಟಿತ್ತು. ಭೂತಾನ್ ನಲ್ಲಿ ಶೇ. 14.4 ರಷ್ಟಿದ್ದರೆ, ಚೀನಾದಲ್ಲಿ 13.2 ರಷ್ಟಿತ್ತು. ಆದರೆ, ಅದೇ ಅವಧಿಯಲ್ಲಿ ನಮ್ಮ ಭಾರತದಲ್ಲಿ ನಿರುದ್ಯೋಗ ದರ ಶೇ 23.22 ರಷ್ಟಿತ್ತು. ಇತ್ತೀಚೆಗೆ ಅಂತಾರಾಷ್ಟ್ರೀಯ ಲೇಬರ್ ಆರ್ಗನೈಸೆಷನ್ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ ನಿರುದ್ಯೋಗದ ಪ್ರಮಾಣದಲ್ಲಿ ನಮ್ಮ ದೇಶ, ನೆರೆಯ ದೇಶಗಳಾದ ಮ್ಯಾನ್ಮರ್, ಬಾಂಗ್ಲಾ, ಮಾರಿಷಸ್ ಗಿಂತಲೂ ಕೆಳಗಿನ ಸ್ಥಾನದಲ್ಲಿರುವುದು ನಿಜವಲ್ಲವೇ ಪ್ರಧಾನಿ ನರೇಂದ್ರ ಮೋದಿ ಅವರೇ?
2004-2012ರ ಅವಧಿಯಲ್ಲಿ, ಅಂದರೆ ಯುಪಿಎ ಅವಧಿಯಲ್ಲಿ ಪ್ರತಿವರ್ಷ 75 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು. ಆದರೆ ಈ ಪ್ರಮಾಣ 2013ರ ನಂತರದಲ್ಲಿ 29 ಲಕ್ಷಕ್ಕೆ ಇಳಿದಿದೆ. ನಿರುದ್ಯೋಗದ ತೀವ್ರತೆ ನಮ್ಮ ದೇಶದಲ್ಲಿ ಎಷ್ಟರಮಟ್ಟಿಗೆ ಇದೆಯೆಂದರೆ, ಎನ್ಸಿಆರ್ಬಿ ಪ್ರಕಾರ ಪ್ರತಿ ಗಂಟೆಗೆ ಇಬ್ಬರು ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ..! ಕರ್ನಾಟಕವೊಂದರಲ್ಲೇ 2021ರಲ್ಲಿ 1,129 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನು ನಿರಾಕರಿಸುವ ಧೈರ್ಯ ಇದೆಯೇ ಪ್ರಧಾನಿ ನರೇಂದ್ರ ಮೋದಿ ಅವರೇ?
2024 ಮಾರ್ಚ್ ಅಂತ್ಯಕ್ಕೆ ಬಿಡುಗಡೆಯಾದ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಭಾರತೀಯ ಉದ್ಯೋಗ ವರದಿ – 2024 ಬಿಚ್ಚಿಡುವ ಮಾಹಿತಿ ಇನ್ನೂ ಆಘಾತ ಹುಟ್ಟಿಸುತ್ತದೆ. 15 ರಿಂದ 29 ವಯೋಮಾನದ 82.9% ಯುವಕರು ನಿರುದ್ಯೋಗಿಗಳಾಗಿದ್ದಾರೆಂದು ಈ ವರದಿ ಹೇಳುತ್ತದೆ. 2000 ರಲ್ಲಿ 52% ಯುವಕರು ಉದ್ಯೋಗಿಗಳಾಗಿದ್ದರು. 2022ರಲ್ಲಿ ಈ ಸಂಖ್ಯೆ 37%ಗೆ ಕುಸಿದಿದೆ! ಕಾಲೇಜು ಶಿಕ್ಷಣ ಅಥವಾ ಉನ್ನತ ಶಿಕ್ಷಣ ಪಡೆದ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ 2000ದಲ್ಲಿ ಶೇ 54.ರಷ್ಟಿತ್ತು. 2022ಕ್ಕೆ ಇದು ಶೇ. 65.7ಕ್ಕೆ ಏರಿದೆ. ಈ ಅಂಕಿ ಸಂಖ್ಯೆಯನ್ನಾದರೂ ಒಪ್ಪುತ್ತೀರಾ ಪ್ರಧಾನಿ ನರೇಂದ್ರ ಮೋದಿ ಅವರೇ?
ಕೋವಿಡ್ ಕಾಲದಲ್ಲಿ ನಿರುದ್ಯೋಗದ ಪ್ರಮಾಣ ಜಗತ್ತಿನಾದ್ಯಂತ ಹೆಚ್ಚಾಗಿದ್ದು ನಿಜ. ಆದರೆ ನಮ್ಮಲ್ಲಿ ಇದು 2014-15ರಿಂದಲೇ ಪ್ರಾರಂಭವಾಗಿತ್ತು. 2016ರಲ್ಲಿ ನಡೆದ ನೋಟು ಅಮಾನ್ಯೀಕರಣದಿಂದ ಕೈಗಾರಿಕೆಗಳೆಲ್ಲ ಮುಚ್ಚಿಹೋಗಿ ನಿರುದ್ಯೋಗ ಪ್ರಮಾಣ ಮಿತಿ ಮೀರತೊಡಗಿದ್ದನ್ನು ಹಲವಾರು ಆರ್ಥಿಕ ತಜ್ಞರೇ ವಿವರಿಸಿ ಹೇಳಿದ್ದಾರೆ. ಈ ಕಾರಣಕ್ಕಾಗಿಯೇ, 2017-18ರ ಎನ್.ಎಸ್.ಎಸ್.ಒ ಸರ್ವೇಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲು ವಿಳಂಬ ಮಾಡಿತ್ತೇ ಪ್ರಧಾನಿ ನರೇಂದ್ರ ಮೋದಿ ಅವರೇ?
ಉದ್ಯೋಗ ಅರಸಿ, ದೇಶದಿಂದ ವಿದೇಶಕ್ಕೆ ವಲಸೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. 2018 ರಿಂದ 2019ರ ವರೆಗೆ 8,027 ಮಂದಿ, 2019 ರಿಂದ 2020ರ ವರೆಗೆ 19,883 ಮಂದಿ, 2020 ರಿಂದ 2021ರ ವರೆಗೆ 30,662 ಮಂದಿ, 2021 ರಿಂದ 2022ರ ವರೆಗೆ 63,927 ಮಂದಿ ಭಾರತೀಯರು ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿ ಬಂಧನಕ್ಕೊಳಗಾಗಿದ್ದಾರೆ. ಈ ಅಕ್ರಮ ವಲಸಿಗರ ಪೈಕಿ ಬಹುಪಾಲು ಜನರು ಗುಜರಾತ್ ಮತ್ತು ಪಂಜಾಬ್ ರಾಜ್ಯಗಳಿಗೆ ಸೇರಿದವರು ಎಂಬುದು ಗಮನಿಸಬೇಕಾದ ಅಂಶ ಅಲ್ಲವೇ ಪ್ರಧಾನಿ ನರೇಂದ್ರ ಮೋದಿ ಅವರೇ?
ಎಂಜಿನಿಯರಿಂಗ್ ವ್ಯಾಸಂಗ ಮಾಡಿದವರು ಕೂಲಿಗಳಾಗಿದ್ದಾರೆ. ಪಿಎಚ್ಡಿ ಪದವೀಧರರು ಜವಾನ ಹುದ್ದೆಗೆ ಅರ್ಜಿ ಹಾಕುತ್ತಿದ್ದಾರೆ. ಒಂದು ಹುದ್ದೆಗೆ ಸರಾಸರಿ ಮೂರು ಸಾವಿರ ಅರ್ಜಿಗಳು ಬರುತ್ತಿವೆ ಎಂದರೆ ಸ್ಪರ್ಧೆ ಹೇಗಿದೆ ಊಹಿಸಿ! ಈ ಸ್ಪರ್ಧೆಯಲ್ಲಿ ಓಡಲಾಗದ, ಇಬ್ಬರು ನಿರುದ್ಯೋಗಿಗಳು ಪ್ರತಿ ದಿನ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ! ಹೊಸ ಉದ್ಯೋಗ ಸೃಷ್ಟಿಸಲು ಆಗಲಿಲ್ಲ, ನಿರುದ್ಯೋಗಿಗಳಾಗುವುದನ್ನೂ ತಡೆಯಲು ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಆಗಲಿಲ್ಲ. ಐಎಲ್ಒ ವರದಿಯ ಪ್ರಕಾರ ಈ ಹತ್ತು ವರ್ಷಗಳಲ್ಲಿ 12 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ..! 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದ ನಿರುದ್ಯೋಗವನ್ನು ಭಾರತ ನೋಡುತ್ತಿದೆ, ಅಲ್ಲವೇ ಪ್ರಧಾನಿಗಳೇ?
ಇದು ಹೊಸ ಉದ್ಯೋಗಗಳ ಸೃಷ್ಟಿಯ ಕಥೆಯಾದರೆ, ಇರುವ ಸರ್ಕಾರಿ ಉದ್ಯೋಗಗಳ ಭರ್ತಿಯಲ್ಲೂ ತೀರಾ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ವಿವಿಧ ಇಲಾಖೆಯ 30 ಲಕ್ಷ ಹುದ್ದೆಗಳು ಖಾಲಿ ಇವೆ. ಸಣ್ಣಪುಟ್ಟ ಹುದ್ದೆಗಳಿಗೂ ಸ್ನಾತಕೋತ್ತರ ಪದವೀಧರ, ಬಿಇ, ಎಂಬಿಬಿಎಸ್ ಪದವಿ ಪಡೆದವರು ಅರ್ಜಿ ಸಲ್ಲಿಸುವ ವಿದ್ಯಮಾನ ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ದೇಶದ ಯುವಜನರು ನಿರುದ್ಯೋಗದ ದಳ್ಳುರಿಯಲ್ಲಿ ಬೇಯುತ್ತಾ ಇದ್ದಾರೆ. ಕಳೆದ ವರ್ಷಾಂತ್ಯದಲ್ಲಿ ಸಂಸತ್ತಿನ ಭದ್ರತೆಯನ್ನು ಬೇಧಿಸಿ, ಒಳನುಸುಳಿ ಹೊಗೆಬಾಂಬ್ ಸಿಡಿಸುವ ಮಟ್ಟಿಗೆ ಹತಾಶರಾಗಿದ್ದ ಯುವಕರು ಕೂಡಾ ನಿರುದ್ಯೋಗಕ್ಕೆ ಬಲಿಯಾದವರಲ್ಲವೇ ಪ್ರಧಾನಿ ನರೇಂದ್ರ ಮೋದಿ ಅವರೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇಬ್ಬರು ಸೇರಿ ಪ್ರಚಾರವನ್ನು ನಿಲ್ಲಿಸಿಬಿಡೋಣ, ಯಾರು ಗೆಲ್ತಾರೆ ನೋಡೋಣ: ಜೋಶಿಗೆ ಲಾಡ್ ಸವಾಲ್
ಯಾರು ಏನೇ ತಿಪ್ಪರಲ್ಲಾಗ ಹೊಡೆದರೂ ಪ್ರಹ್ಲಾದ್ ಜೋಶಿ ಗೆಲ್ಲುತ್ತಾರೆ ಮೋದಿ ಪ್ರಧಾನಿಯಾಗುತ್ತಾರೆ: ಅರವಿಂದ್ ಬೆಲ್ಲದ್..
ಧಾರವಾಡ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ತೀವಿ: ಶಾಸಕ ಮಹೇಶ್ ಟೆಂಗಿನಕಾಯಿ




