ನವದೆಹಲಿ : ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ವಿಚಾರದಲ್ಲಿ ದೇಶದ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಭದ್ರತೆ ಹಾಗೂ ಗುಪ್ತಚರ ವೈಫಲ್ಯ ಎಂದು ಆರೋಪಿಸುತ್ತಲೇ ಬರುತ್ತಿದೆ. ಈ ಕುರಿತು ದೆಹಲಿಯಲ್ಲಿ ಇತ್ತೀಚಿಗಷ್ಟೇ ನಡೆದಿದ್ದ ಸರ್ವಪಕ್ಷ ಸಭೆಯಲ್ಲಿ ಸ್ವತಃ ಕೇಂದ್ರ ಸರ್ಕಾರವೇ ಭದ್ರತಾ ವೈಫಲ್ಯವಾಗಿದೆ ಎಂದು ಒಪ್ಪಿಕೊಂಡಿತ್ತು. ಆದರೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಗುಪ್ತಚರ ವೈಫಲ್ಯದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಾರ್ಖಂಡ್‌ನಲ್ಲಿ ನಡೆದ ಸಂವಿಧಾನ್ ಬಚಾವೋ ಸಮಾವೇಶದಲ್ಲಿ ಮಾತನಾಡಿರುವ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಮೂರು ದಿನಗಳ ಮೊದಲು ಗುಪ್ತಚರ ವರದಿ ಬಂದ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರಕ್ಕೆ ನಿಗದಿಯಾಗಿದ್ದ ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಈ ದಾಳಿಯು ಗುಪ್ತಚರ ವೈಫಲ್ಯದ ಪರಿಣಾಮ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದು ಜರಿದಿದ್ದಾರೆ.
ಗೊತ್ತಿದ್ದೆ ಮೋದಿ ಕಾಶ್ಮೀರಕ್ಕೆ ಹೋಗಿರಲಿಲ್ಲ..
ಗುಪ್ತಚರ ವೈಫಲ್ಯವಿದೆ ಸರ್ಕಾರ ಎನ್ನುವುದು ಸ್ಪಷ್ಟವಾಗಿದೆ, ಆದರೆ ಕೇಂದ್ರ ಸರ್ಕಾರಕ್ಕೆ ದಾಳಿಯ ಕುರಿತು ಗುಪ್ತಚರ ಮಾಹಿತಿಯು ಬಂದಿದ್ದರೂ ಕೂಡ ಅವರು ಯಾಕೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು, ಭದ್ರತಾ ಕಾರ್ಯಗಳನ್ನು ಕೈಗೊಳ್ಳಲಿಲ್ಲ..? ದಾಳಿಗೆ ಮೂರು ದಿನಗಳ ಮೊದಲು ಪ್ರಧಾನಿ ಮೋದಿಯವರಿಗೆ ಗುಪ್ತಚರ ವರದಿಯನ್ನು ಕಳುಹಿಸಲಾಗಿತ್ತು. ಆದ್ದರಿಂದ ಅವರು ಕಾಶ್ಮೀರಕ್ಕೆ ಭೇಟಿ ನೀಡುವ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು ಎಂಬ ಮಾಹಿತಿ ನನಗೆ ಸಿಕ್ಕಿತು. ನಾನು ಇದನ್ನು ಪತ್ರಿಕೆಯಲ್ಲಿಯೂ ಓದಿದ್ದೇನೆ ಎನ್ನುವ ಮೂಲಕ ಖರ್ಗೆ ದೇಶದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಅಲ್ಲದೆ ಉಗ್ರರ ದಾಳಿಯ ಎಚ್ಚರಿಕೆಯ ನಡುವೆಯೂ ನಿರ್ಲಕ್ಷ್ಯ ತೋರಿದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.
ಪ್ರವಾಸಿಗರ ರಕ್ಷಣೆಗೆ ಕೇಂದ್ರ ಯಾಕೆ ಕ್ರಮ ಕೈಗೊಳ್ಳಲಿಲ್ಲ..?
ನಿಮ್ಮ ಭದ್ರತೆ ದೃಷ್ಟಿಯಿಂದ ನೀವು ಅಲ್ಲಿಗೆ ಭೇಟಿ ನೀಡುವುದು ಸೂಕ್ತವಲ್ಲ ಎಂದು ಗುಪ್ತಚರ ವರದಿ ಹೇಳಿದಾಗ, ಜನರನ್ನು ರಕ್ಷಿಸಲು ನೀವು ಭದ್ರತಾ ಪಡೆ, ಗುಪ್ತಚರ ಸಂಸ್ಥೆಗಳು, ಸ್ಥಳೀಯ ಪೊಲೀಸರು ಮತ್ತು ಗಡಿ ರಕ್ಷಣಾ ಪಡೆಗೆ ಏಕೆ ತಿಳಿಸಲಿಲ್ಲ? ನಿಮಗೆ ಮಾಹಿತಿ ಸಿಕ್ಕಾಗ, ನೀವು ನಿಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದೀರಿ. ಆದರೆ ಅಲ್ಲಿ ಬಲಿಯಾದ ಅಮಾಯಕ ಪ್ರವಾಸಿಗರನ್ನು ರಕ್ಷಿಸಲು ಹೆಚ್ಚಿನ ಪಡೆಗಳನ್ನು ಏಕೆ ಕಳುಹಿಸಲಿಲ್ಲ ಎಂದು ಮೋದಿ ಸರ್ಕಾರವನ್ನು ತರಾಟೆಗೆ ತೆಗದುಕೊಂಡಿದ್ದಾರೆ. ಕೇಂದ್ರ ಸರ್ಕಾರವೇ ಈ ಪಹಲ್ಗಾಮ್ ದಾಳಿಯ ಹೊಣೆ ಹೊರಬೇಕಲ್ಲವೇ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಪಕ್ಷ, ಧರ್ಮ, ಜಾತಿಯನ್ನು ಮೀರಿದ್ದು ನಮ್ಮ ದೇಶ..
ಆದರೂ ಸಹ ದೇಶದ ಭದ್ರತೆಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡುವುದಿಲ್ಲ. ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಯಾವುದೇ ಕ್ರಮಕ್ಕೆ ಕಾಂಗ್ರೆಸ್ ಕೇಂದ್ರ ಸರ್ಕಾರದ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಖರ್ಗೆ ಘೋಷಿಸಿದ್ದಾರೆ. ಏಕೆಂದರೆ ದೇಶವು ಪಕ್ಷ, ಧರ್ಮ ಮತ್ತು ಜಾತಿಯನ್ನು ಮೀರಿದ್ದು, ಅದು ಪರಮೊಚ್ಚವಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನೂ ಪ್ರಮುಖವಾಗಿ ಪಹಲ್ಗಾಮ್ ದಾಳಿಯ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಹೇಳುತ್ತಿರುವ ಕಾಂಗ್ರೆಸ್ ತನ್ನ ರಾಜಕೀಯ ಮುಂದುವರೆಸಿಯೇ ಇದೆ. ಅದರಲ್ಲೂ ಮಲ್ಲಿಕಾರ್ಜುನ ಖರ್ಗೆಯವರ ಈ ಹೇಳಿಕೆಯು ಕೇಂದ್ರ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುವಂತಿದೆ. ಹಾಗಾದರೆ ಅನಾಹುತದ ಮುನ್ಸೂಚನೆ ಇದ್ದಿದ್ದರೂ ಕೂಡ ಕೇಂದ್ರ ಸರ್ಕಾರ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಎಡವಿತಾ ಎನ್ನುವಂತಹ ಇನ್ನಷ್ಟು ಗಂಭೀರ ಪ್ರಶ್ನೆಗಳು ಸೃಷ್ಟಿಯಾಗುತ್ತಿವೆ. ಅಲ್ಲದೆ ಸದ್ಯ ಪ್ರಧಾನಿ ಮೋದಿಯವರನ್ನು ಉಲ್ಲೇಖಿಸಿ ಖರ್ಗೆ ಮಾಡಿರುವ ಆರೋಪವು ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನು ಎಬ್ಬಿಸುವ ಸಾಧ್ಯತೆಗಳು ದಟ್ಟವಾಗಿವೆ. ಯಾಕೆಂದರೆ ಖರ್ಗೆ ಹೇಳಿಕೆ ಪ್ರಕಾರ ನೋಡಿದಾಗ, ರಾಷ್ಟ್ರದ ಉನ್ನತ ವ್ಯಕ್ತಿಗೆ ದಾಳಿಯ ಮುನ್ಸೂಚನೆ ಬಂದರೂ ಅದನ್ನು ನಿರ್ಲಕ್ಷ್ಯಿಸಿರುವುದು ದೊಡ್ಡ ಅಪರಾಧವೇ ಆಗಿದೆ.