ಬೆಂಗಳೂರು: ರಾಜ್ಯದಲ್ಲಿ ಅದೆಷ್ಟೋ ಪೊಲೀಸ್ ಅಧಿಕಾರಿಗಳು ಪುಂಡರ ಹುಟ್ಟಡಗಿಸಿ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅಂಥವರಲ್ಲಿ ಎಚ್.ಟಿ ಸಾಂಗ್ಲಿಯಾನ ಸೇರಿದಂತೆ ಸಾಕಷ್ಟು ಮಂದಿ ಕ್ರಿಮಿನಲ್ ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಇವರ ಸಾಲಿನಲ್ಲಿ ಕರ್ನಾಟಕದ ರಿಯಲ್ ಸಿಂಗಂ ಅಂತಾನೇ ಕರೆಸಿಕೊಳ್ಳೋ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೂಡ ಒಬ್ಬರು. ಆದ್ರೆ ಇಂಥಾ ಒಬ್ಬ ದಕ್ಷ ಅಧಿಕಾರಿ ಇದೀಗ ಇಲಾಖೆ ತೊರೆದು ಅಪಾರ ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ.
ಉಡುಪಿ, ಚಿಕ್ಕಮಗಳೂರು ಹೀಗೆ ಬಹುಕಾಲ ಕರಾವಳಿ ಭಾಗದಲ್ಲಿ ಕಾರ್ಯನಿರ್ವಹಿಸಿದ ಅಣ್ಣಾಮಲೈ, ಬಾಲ ಬಿಚ್ಚಿದ ರೌಡಿ, ಕ್ರಿಮಿನಲ್ ಗಳ ಬಾಲ ಕಟ್ ಮಾಡಿ ಸೈಡಿಗಟ್ಟಿದ ಕೆಚ್ಚೆದೆಯ ಪೊಲೀಸ್ ಅಧಿಕಾರಿ. ಇವ್ರೇನಾದ್ರೂ ಲಾಠಿ ಹಿಡಿದು ನಿಂತ್ರೆ ಪುಂಡ ಪೋಕರಿಗಳೆಲ್ಲಾ ಕ್ಷಣಮಾತ್ರದಲ್ಲಿ ನಾಪತ್ತೆಯಾಗ್ತಿದ್ರು. ಸದ್ಯ ಬೆಂಗಳೂರು ನಗರ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಸಿಂಗಂ ರಾಜೀನಾಮೆಗೆ ಕಾರಣ ಏನು..?
ಸಾಮಾನ್ಯವಾಗಿ ದಕ್ಷ ಪೊಲೀಸ್ ಅಧಿಕಾರಿಯೊಬ್ಬರು ರಾಜೀನಾಮೆ ನೀಡೋದ್ರ ಹಿಂದೆ ಸರ್ಕಾರದ ಕಿರುಕುಳ, ರಾಜಕಾರಣಿಗಳ ಕಿರಿಕ್ ಹೀಗೆ ಈ ಎರಡು ಮಾತ್ರ ಕಾರಣವಾಗಿರುತ್ತೆ. ಆದ್ರೆ ಡಿಸಿಪಿ ಅಣ್ಣಾಮಲೈ ರಾಜೀನಾಮೆ ನಿರ್ಧಾರದ ಹಿಂದೆ ಇಂಥಾ ಯಾವುದೇ ಕಾರಣಗಳ ಸುಳಿವು ಸಿಕ್ಕಿಲ್ಲ. ಆದ್ರೆ ತಮ್ಮ ರಾಜೀನಾಮೆ ಪತ್ರದಲ್ಲಿ ಅಣ್ಣಾಮಲೈ ,ದಕ್ಷ ಅಧಿಕಾರಿ ಮಧುಕರ್ ಶೆಟ್ಟಿಯವರ ಸಾವು ನನಗೆ ಜೀವನದಲ್ಲಿ ಎಲ್ಲಾ ಒಳ್ಳೆಯದಕ್ಕೂ ಒಂದು ಅಂತ್ಯ ಇದೆ ಅನ್ನೋ ಅರಿವು ಮೂಡಿಸಿತು. ಕಳೆದ ವರ್ಷ ಮಾನಸ ಸರೋವರದ ನನ್ನ ಯಾತ್ರೆಯಲ್ಲಿ ಜೀವನದ ಸಾಕಷ್ಟು ಮೌಲ್ಯಗಳು ಮನದಟ್ಟಾಯಿತು. ಹೀಗಾಗಿ ಲೋಕಸಭಾ ಚುನಾವಣೆ ಮುನ್ನವೇ ನಾನು ರಾಜೀನಾಮೆ ನೀಡೋ ನಿರ್ಧಾರ ತೆಗೆದುಕೊಂಡಿದ್ದೆ. ಆದ್ರೆ ನನ್ನಿಂದ ರಾಜ್ಯ ಸರ್ಕಾರಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಇದೀಗ ರಾಜೀನಾಮೆ ನೀಡಿರುವೆ.
ಇನ್ನು ಮುಂದೆ ನಾನೇನು ಮಾಡುವೆ ಅಂತ ಯೋಚಿಸೋ ಜನರಿಗೆ ನನ್ನ ಉತ್ತರ ಏನಂದರೆ, ನಾನು ಕುಟುಂಬದ ಬಗ್ಗೆ ಗಮನಹರಿಸಬೇಕಿದೆ. ನಾನು ಈವೆರಗೂ ಕಳೆದುಕೊಂಡಿರೋ ಜೀವನದ ಸಣ್ಣಸಣ್ಣ ಖುಷಿಯನ್ನು ಮತ್ತೆ ಅನುಭವಿಸಬೇಕಿದೆ. ನನ್ನ ಮಡದಿಗೆ ಪತಿಯಾಗಿ ಮಗನಿಗೆ ಒಬ್ಬ ಒಳ್ಳೆಯ ತಂದೆಯಾಗಿ ಆತ ಪ್ರತಿದಿನ ಬೆಳೆಯೋದನ್ನ ಕಣ್ತುಂಬಿಕೊಳ್ಳಬೇಕೆಂದು ಬಯಸಿದ್ದೇನೆ. ಅಲ್ಲದೆ ಮತ್ತೆ ಕೃಷಿಯತ್ತ ಗಮನಹರಿಸುವತ್ತ ಮನಸ್ಸು ಮಾಡಿದ್ದೇನೆ ಎಂದಿದ್ದಾರೆ. ಈ ಮೂಲಕ ಅಣ್ಣಾಮಲೈ ರಾಜಕೀಯ ಸೇರ್ತಾರೆ ಅನ್ನೋ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಅದೇನೇ ಇರಲಿ, ಅಣ್ಣಾಮಲೈರಂಥಹ ದಕ್ಷ ಪೊಲೀಸ್ ಅಧಿಕಾರಿ ಇಂತಹ ನಿರ್ಧಾರ ತೆಗೆದುಕೊಂಡ್ರಿರೋದು ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟ ಅನ್ನೋ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಅಣ್ಣಾಮಲೈ ರಾಜೀನಾಮೆ ಕುರಿತಾದ ಕಂಪ್ಲೀಟ್ ಡೀಟೇಲ್ಸ್ ಈ ವಿಡಿಯೋದಲ್ಲಿದೆ ತಪ್ಪದೇ ನೋಡಿ.