Political News: ಬಿಜೆಪಿ ನಾಯಕ ರಮೇಶ್ ಬಿಧುರಿ, ತಾವು ಗೆದ್ದರೆ, ಪ್ರಿಯಾಂಕಾ ಗಾಂಧಿ ಕೆನ್ನೆಯಂತೆ ರಸ್ತೆ ನಿರ್ಮಿಸುವೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಕಾಂಗ್ರೆಸ್ ಅದಾಗಲೇ, ಆಕ್ರೋಶ ಹೊರಹಾಕಿದೆ. ಆದರೆ ಬಿಧುರಿ ದೆಹಲಿ ಸಿಎಂ ಆತಿಶಿ ತಂದೆ ಬಗ್ಗೆಯೂ ಹೇಳಿಕೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಗೆ ಪ್ರಚಾರ ಮಾಡುವ ಭರದಲ್ಲಿ, ರಮೇಶ್ ನಾಲಿಗೆ ಹರಿಬಿಟ್ಟಿದ್ದಾರೆ. ಆತಿಶಿ ತಮ್ಮ ತಂದೆಯನ್ನೇ ಬದಲಿಸಿಕೊಂಡಿದ್ದಾರೆ ಎಂದು ರಮೇಶ್ ನಿನ್ನೆ ಹೇಳಿಕೆ ನೀಡಿದ್ದರು.
ಈ ಹಿನ್ನೆಲೆ ಇಂದು ದೆಹಲಿ ಸಿಎಂ ಆತಿಶಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ರಮೇಶ್ ಮಾತಿಗೆ ಬೇಸರಗೊಂಡು ಕಣ್ಣೀರು ಹಾಕಿದ್ದಾರೆ. ನನ್ನ ತಂದೆ ಶಿಕ್ಷಕರಾಗಿದ್ದವರು, ಹಲವು ಮಕ್ಕಳಿಗೆ ಶಿಕ್ಷಣ ಹೇಳಿಕೊಟ್ಟವರು. ಬಡ ಕೆಳ ವರ್ಗದ ಮಕ್ಕಳಿಗೆ ವಿದ್ಯೆ ನೀಡಿದ್ದಾರೆ. ಅವರಿಗೆ ಈಗ 80 ವರ್ಷ ವಯಸ್ಸು. ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನಡೆದಾಡಲು ಕಷ್ಟಪಡುತ್ತಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು ಎಂದು, ಹಿರಿಯರನ್ನು ಗುರಿಯಾಗಿಸಿಕೊಂಡು ಮಾತನಾಾಡುವುದು ಎಷ್ಟು ಸರಿ ಎಂದು ಆತಿಶಿ ಪ್ರಶ್ನಿಸಿದ್ದಾರೆ.
ಅಲ್ಲದೇ, 10 ವರ್ಷ ರಮೇಶ್ ಬಿಧುರಿ ಸಂಸದರಾಗಿದ್ದಾಗ, ತಮ್ಮ ಕ್ಷೇತ್ರಕ್ಕಾಗಿ ಏನೇನು ಕೆಲಸ ಮಾಡಿದ್ದಾರೆಂದು ತೋರಿಸಲಿ. ಆ ವಿಷಯದ ಮೇಲೆ ಅವರು ಓಟ್ ಕೇಳಲಿ. ಅದನ್ನು ಬಿಟ್ಟು ಇನ್ನೊಬ್ಬರನ್ನು ಗುರಿಯಾಗಿಸಿಕೊಂಡು ಓಟ್ ಕೇಳುವುದಲ್ಲ ಎಂದು ಆತಿಶಿ ಹೇಳಿದ್ದಾರೆ.