Thursday, November 21, 2024

Latest Posts

ಧನುಷ್ ವಿರುದ್ಧ ನಯನಾತಾರ ಕೆಂಡ! ಸಿಟ್ಟೇಕೆ ಸಿಡುಕೇಕೆ ಲೇಡಿ ಸೂಪರ್ ಸ್ಟಾರ್?

- Advertisement -

Sandalwood News: ಸೌತ್ ಇಂಡಿಯಾದ ಲೇಡಿ ಸೂಪರ್ ಸ್ಟಾರ್  ಸೂಪರ್‌ಸ್ಟಾರ್  ನಯನತಾರಾ ಅದೇಕೋ, ಇದ್ದಕ್ಕಿದ್ದಂತೆಯೇ ನಟ ಧನುಷ್ ವಿರುದ್ಧ ಬೇಸರ ಹೊರಹಾಕಿದ್ದಾರೆ. ಅದಕ್ಕೆ ಕಾರಣವೂ ಇದೆಯನ್ನಿ. ತಮ್ಮ ಇನ್ ಸ್ಟಾ ಗ್ರಾಂ ಮೂಲಕ ಅವರು ಬಹಿರಂಗ ಪತ್ರವನ್ನು ಬರೆದಿದ್ದಾರೆ. ಎಲ್ಲಾ ಸರಿ, ಅಷ್ಟಕ್ಕೂ ಧನುಷ್ ಮೇಲೆ ನಯನತಾರಾ  ಅವರಿಗೆ ಸಿಟ್ಟೇಕೆ?  ಇನ್‌ಸ್ಟಾಗ್ರಾಂ ಮೂಲಕ ಸುದೀರ್ಘ  ಬಹಿರಂಗ ಪತ್ರ ಬರೆದಿದ್ದಾದರೂ ಯಾಕೆ? ಅದರಲ್ಲಿ ಅಂಥದ್ದೇನಿದೆ? ಆ ಬಗ್ಗೆ ಹೇಳೋದಾದರೆ,

ನಯನತಾರಾ ಇನ್ ಸ್ಟಾ ಗ್ರಾಂ ಮೂಲಕ ನಟ ಧನುಷ್ ಅವರಿಗೆ ಬಹಿರಂಗ ಪತ್ರ ಬರೆದಿರೋದು ನಿಜ. ಅವರು ಧನುಷ್ ವಿರುದ್ಧ ಕಿಡಿಕಾರಿರುವುದೂ ಸತ್ಯ. ಇಷ್ಟಕ್ಕೂ ನಯನಾತಾರ ನಿಗಿ ನಿಗಿ ಕೆಂಡ ಕಾರೋಕೆ ಕಾರಣ, ನಯನಾತಾರ ಹಾಗು ವಿಘ್ನೇಶ್ ಶಿವನ್ ಅವರ ಸಾಕ್ಷ್ಯ ಚಿತ್ರ! ಹೌದು, ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆಯ ಸಾಕ್ಷ್ಯಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಇದರಲ್ಲಿ ಧನುಷ್ ನಿರ್ಮಿಸಿದ ‘ನಾನುಂ ರೌಡಿ ಧನ್‌’ ಸಿನಿಮಾದ ಮೇಕಿಂಗ್ ದೃಶ್ಯವನ್ನು ಬಳಸಿಕೊಳ್ಳಲಾಗಿದೆ. ಇದೇ ವಿಷಯಕ್ಕೆ ಧನುಷ್ ಅವರು ನಯನಾತಾರ ಅವರಿಗೆ ಲೀಗಲ್ ನೋಟೀಸ್ ಕಳುಹಿಸಿದ್ದಾರೆ. ಇದರಿಂದ ನಯನಾತಾರ ಧನುಷ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ನಯನತಾರಾ ಹಾಗೂ ವಿಘ್ನೇಶ್ ಶಿವನ್  ಇವರಿಬ್ಬರ ಪ್ರೀತಿ ಹುಟ್ಟಿದ್ದು ಇದೇ ‘ನಾನುಂ ರೌಡಿ ಧನ್‌’ ಸಿನಿಮಾ ಸೆಟ್ಟಲ್ಲಿ ಅನ್ನೋದು ವಿಶೇಷ. ಹೀಗಾಗಿ ನಯನತಾರಾ  ಧನುಷ್ ಬಳಿ ಆ ಸಿನಿಮಾದ ದೃಶ್ಯಗಳನ್ನು ಬಳಸಿಕೊಳ್ತೀನಿ ಅಂತ ಅನುಮತಿ ಕೇಳಿದ್ರು. ಆದರೆ, ಎರಡು ವರ್ಷಗಳಾದರೂ ಧನುಷ್  ನಯನಾತಾರಾ ಅವರಿಗೆ ಅನುಮತಿ ನೀಡಿರಲಿಲ್ಲ. ಹೀಗಾಗಿ  ನಯನತಾರಾ ಆ ಸಿನಿಮಾ  ಚಿತ್ರೀಕರಣದ ವೇಳೆ ತನ್ನ ಮೊಬೈಲ್‌ನಲ್ಲೇ ಚಿತ್ರೀಕರಿಸಿದ  ಕೇವಲ 3 ಸೆಕೆಂಡ್‌ಗಳ ತುಣುಕನ್ನು ಬಳಸಿದ್ದರು. ಇದೊಂದೇ ಕಾರಣಕ್ಕೆ ನಟ ಧನುಷ್ ಬರೋಬ್ಬರಿ 10 ಕೋಟಿ ರೂಪಾಯಿ ಪರಿಹಾರ ಕೇಳಿ ನೋಟೋಸ್ ಕಳಿಸಿದ್ದಾರೆ. ಹೀಗಾಗಿಯೇ ನಯನತಾರಾ ಕಿಡಿಕಾರುವಂತೆ ಮಾಡಿದೆ.

ಹಾಗಾದರೆ, ಲೇಡಿ ಸೂಪರ್‌ಸ್ಟಾರ್ ಬರೆದ ಬಹಿರಂಗ ಪತ್ರದಲ್ಲಿ ಏನಿದೆ? ಅಂತ ನೋಡುವುದಾದರೆ,

“ಶ್ರೀ ಧನುಷ್ ರಾಜಾ ಅವರೇ, ನಿಮ್ಮ ಕೆಲವು ತಪ್ಪುಗಳನ್ನು ತಿದ್ದಲು ನಾನು ಬಹಿರಂಗ ಪತ್ರ ಬರೆಯುತ್ತಿದ್ದೇನೆ. ನಿಮ್ಮ ತಂದೆ, ನಿಮ್ಮ ಸಹೋದರ ಹಾಗೂ ಖ್ಯಾತ ನಿರ್ದೇಶಕರ ಬೆಂಬಲದಿಂದ ನೀವು ಜನಪ್ರಿಯರಾಗಿದ್ದೀರಿ. ನಿಮ್ಮಂತಹ ನಟರು ಇದನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಸಿನಿಮಾರಂಗ ಅನ್ನೋದು ನನ್ನಂಥವರಿಗೆ ಹೋರಾಟ ಅನ್ನೋದು ಎಲ್ಲರಿಗೂ ಗೊತ್ತು. ಯಾರ ಬೆಂಬಲವೂ ಇಲ್ಲದೆ ಸ್ವಂತ  ಬಲದಿಂದ ಬೆಳೆದು ಬಂದವಳು ನಾನು. ನಾನು ಈಗಿರುವ ಸ್ಥಾನ  ಪಡೆಯಲು ಎಷ್ಟು ಹೋರಾಟ ಮಾಡಿದ್ದೇನೆ ಅನ್ನೋದು ನನಗೆ ಮಾತ್ರ ಗೊತ್ತು. ಹೀಗಾಗಿ ನನ್ನ ಪರಿಚಯ ಇರುವವರಿಗೆ, ಸಿನಿಪ್ರೇಮಿಗಳಿಗೆ, ನೋಡುಗರಿಗೆ  ಹಾಗೂ ಚಿತ್ರರಂಗದ ನನ್ನ ಹಿತೈಷಿಗಳಿಗೆ ಈ ಸತ್ಯವನ್ನು ಹೇಳುವ ಜವಾಬ್ದಾರಿಯಿದೆ.”

“ನೀವು ನಮ್ಮ ಈ ಸಾಕ್ಷಚಿತ್ರದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದೀರಿ. ಅದು ಕೇವಲ ನನಗಷ್ಟೇ ಅಲ್ಲ. ನನ್ನ ಪತಿ ಹಾಗೂ ಈ ಪ್ರಾಜೆಕ್ಟ್‌ಗೆ ಶ್ರಮ ಹಾಕಿದವರ ಸಮಯದ ಮೇಲೂ ಪರಿಣಾಮ ಬೀರುತ್ತಿದೆ. ನೆಟ್‌ಫ್ಲಿಕ್ಸ್‌ನ ಈ ಸಾಕ್ಷಚಿತ್ರ ನನ್ನ ಜೀವನ, ನನ್ನ ಪ್ರೀತಿ, ನನ್ನ ಮದುವೆ, ನನ್ನ ವೃತ್ತಿ ಹಾಗೂ ನನ್ನ ಆಸಕ್ತಿಗಳನ್ನು ಒಳಗೊಂಡಿದೆ. ನನ್ನ ಚಿತ್ರರಂಗದ ಹಿತೈಷಿಗಳು ಅವರ ಸವಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಆದರೆ, ನನ್ನ ಜೀವನದ ಪ್ರಮುಖ ಸಿನಿಮಾ ‘ನಾನುಂ ರೌಡಿ ಧನ್’ ಅನ್ನು ಈ ಸಾಕ್ಷ ಚಿತ್ರದಲ್ಲಿ ಸೇರಿಸಲಾಗಿಲ್ಲ.” ಎಂದು ಅವರು ಬೇಸರ ಹೊರ ಹಾಕಿದ್ದಾರೆ.

ಎರಡು ವರ್ಷಗಳಿಂದ ಎನ್‌ಓಸಿ  ಪಡೆಯುವುದಕ್ಕೆ ಹೋರಾಟ ಮಾಡಿದ್ದಷ್ಟೇ ಬಂತು. ನೆಟ್‌ಫ್ಲಿಕ್ಸ್  ಸಾಕ್ಷಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ನಿಮ್ಮ ಅನುಮತಿಗೆ ಕಾದಿದ್ದಷ್ಟೇ ಬಂತು. ‘ನಾನುಂ ರೌಡಿ ಧನ್’ ಸಿನಿಮಾದ ಹಾಡುಗಳು, ದೃಶ್ಯವನ್ನು ಕೊನೆಗೆ ಫೋಟೋಗಳನ್ನು ಬಳಸಿಕೊಳ್ಳುವುದಕ್ಕೂ ಅನುಮತಿ ನೀಡಲಿಲ್ಲ. ಹೀಗಾಗಿ ನಾವು ಕೈ ಬಿಡಲು ನಿರ್ಧರಿಸಿದ್ವಿ. ಮತ್ತೆ  ರೀ ಎಡಿಟ್ ಮಾಡಿ ಈಗಿರುವ  ವರ್ಷನ್‌ ಅನ್ನು ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಿದ್ದೆವು. ಈ ಸಿನಿಮಾ ಹಾಡುಗಳ ಸಾಹಿತ್ಯ ನೈಜವಾಗಿದ್ದವು. ಹೀಗಾಗಿ ಅವನ್ನು ಬಳಸಿಕೊಳ್ಳುವ ಇಚ್ಛೆಯಾಗಿತ್ತು. ಆದರೆ, ನೀವು ಉದ್ದೇಶಪೂರ್ವಕವಾಗಿ ನಿರ್ದಾಕ್ಷಿಣ್ಯ ತೋರಿಸಿದ್ದು ನನ್ನ ಹೃದಯ ಚೂರಾಗುವಂತೆ ಮಾಡಿದೆ.

ನೆಟ್‌ಫ್ಲಿಕ್ಸ್ ಸಾಕ್ಷಚಿತ್ರದ ಟ್ರೈಲರ್ ರಿಲೀಸ್ ಆದ ಬಳಿಕ ನೀವು ಕಳಿಸಿದ ಲೀಗಲ್ ನೋಟೀಸ್ ನೋಡಿ ಶಾಕ್ ಆಯ್ತು. ಅದರಲ್ಲಿ ಬಳಸಿರುವ ಕೇವಲ 3 ಸೆಕೆಂಡುಗಳ ವಿಡಿಯೋವನ್ನು ನೋಡಿ ನೀವು ಪ್ರಶ್ನಿಸಿರುವ ಸಾಲುಗಳು ನನಗೆ ಆಘಾತ ಉಂಟು ಮಾಡಿದೆ. ನಮ್ಮ ಪರ್ಸನಲ್ ಮೊಬೈಲ್‌ನಿಂದ ತೆಗೆದುಕೊಂಡು ತೆರೆಯ ಹಿಂದಿನ 3 ಸೆಕೆಂಡುಗಳ ದೃಶ್ಯಕ್ಕೆ 10 ಕೋಟಿ ರೂಪಾಯಿ ಕೇಳಿದ್ದೀರಿ. ಇದು ನಿಮ್ಮ ಕ್ಯಾರೆಕ್ಟರ್ ಏನು ಅನ್ನೋದನ್ನು ಹೇಳುತ್ತೆ. ನೀವು ಆಡಿಯೋ ರಿವೀಲ್ ವೇಳೆ ನಿಮ್ಮ ಮುಗ್ಧ ಅಭಿಮಾನಿಗಳೊಂದಿಗೆ ಮಾತಾಡುವಂತೆ ನೀವಿಲ್ಲ. ಕೊನೆಯ ಪಕ್ಷ ನನ್ನೊಂದಿಗೆ ಅಂತೂ ಇಲ್ಲ. ನಾನು ಕಾನೂನು ಹೋರಾಟ ಮಾಡುತ್ತೇನೆ. ಹಕ್ಕು ಸ್ವಾಮ್ಯದ  ದೃಷ್ಟಿಕೋನದಿಂದ ‘ನಾನುಂ ರೌಡಿ ಧನ್’ ದೃಶ್ಯಗಳನ್ನು ಬಳಸಿಕೊಳ್ಳಲು NOC ನೀಡಲು ನಿರಾಕರಿಸಿದ್ದಾಗಿ ಸಮರ್ಥಿಸಿಕೊಳ್ಳಬಹುದು. ಆದರೆ, ಅದರಲ್ಲಿ ನೈತಿಕ ಅಂಶವೂ ಇದೆ ಅನ್ನೋದನ್ನು ನಿಮಗೆ ನೆನಪಿಸುತ್ತೇನೆ.” ಎಂದು ನಯನತಾರಾ ಕಿಡಿಕಾರಿದ್ದಾರೆ.

ವಿಜಯ್ ಭರಮಸಾಗರ, ಫಿಲ್ಮ್ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss