ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಸಿನಿಮಾದ ಟ್ರೇಲರ್ ಇಂದು ಸಂಜೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ರಿಲೀಸ್ ಆಗಿದೆ. ಗೆಳೆಯರಿಗಾಗಿ ಪ್ರಾಣ ಬೇಕಾದರೂ ಕೊಡೋಕೆ ಸಿದ್ಧನಿರುವ ಮಧ್ಯಮ ವರ್ಗದ ಯುವಕನಾಗಿ ಧನಂಜಯ ಮಿಂಚಿದ್ದಾರೆ. ಟ್ರೇಲರ್ ರಿಲೀಸ್ ಆದ ನಂತರದಲ್ಲಿ ಈ ಸಿನಿಮಾ ಬಗ್ಗೆ ಇದ್ದ ನಿರೀಕ್ಷೆಗಳು ದುಪ್ಪಟ್ಟಾಗಿವೆ.
ಧನಂಜಯ್ ಈ ಸಿನಿಮಾದಲ್ಲಿ ಆಟೋ ಓಡಿಸೋ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಕಥಾ ನಾಯಕ ಗೆಳೆಯರಿಗಾಗಿ ಏನು ಮಾಡೋಕೂ ರೆಡಿ ಇರುತ್ತಾನೆ. ಇದು ಆತನನ್ನು ಪ್ರೀತಿಸುವ ಹುಡುಗಿಗೆ ಇಷ್ಟವಿಲ್ಲ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆಗುತ್ತದೆ. ಇನ್ನು, ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ದೃಶ್ಯಗಳು ಇರಲಿವೆ ಎಂಬುದು ಟ್ರೇಲರ್ನಲ್ಲಿ ಹೈಲೈಟ್ ಆಗಿದೆ. ಇನ್ನು, ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಮಿಂಚಿದ್ದಾರೆ.
‘ಡಾಲಿ ಪಿಕ್ಚರ್’ ಬ್ಯಾನರ್‌ನಲ್ಲಿ ಸಾವಿತ್ರಮ್ಮ, ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ್ ಅವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್, ಪೂರ್ಣಚಂದ್ರ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರಕ್ಕೆ ಪ್ರೀತ ಜಯರಾಮನ್ ಛಾಯಾಗ್ರಹಣ, ನಿರಂಜನ್ ದೇವರಮನೆ ಸಂಕಲನ ಹಾಗೂ ವಿನೋದ್ ಸಾಹಸ ನಿರ್ದೇಶನವಿದೆ. ಈ ಚಿತ್ರವನ್ನು ಕೆಆರ್ಜಿ ಸ್ಟೂಡಿಯೋ ಸಂಸ್ಥೆ ಬಿಡುಗಡೆ ಮಾಡುತ್ತಿದೆ.