Political News: ಇಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ್ದು, ಮೈಕ್ರೋ ಫೈನಾನ್ಸ್ ಹಾವಳಿ ಮತ್ತು ಮುಡಾ ಪ್ರಕರಣದ ಕುರಿತು ಹೇಳಿಕೆ ನೀಡಿದ್ದಾರೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವರದಿ ರಾಜಕೀಯ ಪ್ರೇರಿತವಾಗಿದೆ. ಹಣದ ಅಕ್ರಮ ವರ್ಗಾವಣೆ ಆಗಿರುವ ಬಗ್ಗೆ ಯಾವುದೇ ಸಾಕ್ಷಿಯಿಲ್ಲ. ಮುಡಾದ ಮಾಜಿ ಆಯುಕ್ತ ನಟೇಶ್ ಅವರ ಮೇಲೆ ಇಡಿ ಯವರ ಕ್ರಮ ಕಾನೂನು ಬಾಹಿರ ಮತ್ತು ಮನಿಲ್ಯಾಂಡ್ರಿಂಗ್ ಅಗಿಲ್ಲ ಎಂದು ಹೈಕೋರ್ಟ್ ಹೇಳಿದೆ. ಇಡಿ ಯ ಸಂಪೂರ್ಣ ವರದಿಯನ್ನು ಮಾಧ್ಯಮದಲ್ಲಿ ಬಿಡುಗಡೆ ಮಾಡುವ ಮೂಲಕ ಸಂಪೂರ್ಣ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ರಾಜಕೀಯಗೊಳಿಸಿದ್ದಾರೆ. ಸರ್ಕಾರ ಹಾಗೂ ಮುಖ್ಯಮಂತ್ರಿ ಹುದ್ದೆಯ ವರ್ಚಸ್ಸಿಗೆ ಕುಂದು ತರುವಂತಹ ಪ್ರಯತ್ನ ನಡೆಯುತ್ತಿದೆ ಎಂದು ಸಿಎಂ ಅಸಮಾಧಾನ ಹೊರಹಾಕಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಕಾರಣದಿಂದ ನನ್ನ ತೇಜೋವಧೆ ಮಾಡಲಾಗುತ್ತಿದೆ. ನನ್ನ ಶ್ರೀಮತಿಯವರಿಗೆ ಇಡಿ ಯವರ ನೋಟೀಸ್ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತರಲಾಗಿದೆ. ನನ್ನ ವರ್ಚಸ್ಸಿಗೆ ಭಂಗ ತರಬೇಕೇಂಬ ದುರುದ್ದೇಶದಿಂದ, ಇಂತಹ ಕುಕೃತ್ಯಗಳನ್ನು ಮಾಡಲಾಗುತ್ತಿದೆ. ಆದರೆ ಅವರ ಪ್ರಯತ್ನಗಳು ಸಫಲವಾಗಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು ಮೈಕ್ರೋ ಫೈನಾನ್ಸ್ ಹಾವಳಿ ಬಗ್ಗೆ ಮಾತನಾಡಿರುವ ಸಿಎಂ, ಆರ್‌ಬಿಐ ನಿಯಮಾವಳಿ ಉಲ್ಲಂಘಿಸುವ, ಹೆಚ್ಚಿನ ಬಡ್ಡಿದರ ವಸೂಲು ಮಾಡುವ ಹಾಗೂ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದ್ದು, ಜನರು ಆತಂಕಕ್ಕೊಳಗಾಗಿ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ರಾಜ್ಯದ ಜನರಲ್ಲಿ ವಿನಂತಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ.
ಮೈಕ್ರೋ ಫೈನಾನ್ಸ್ ನಿಂದ ಜನರಿಗಾಗುತ್ತಿರುವ ತೊಂದರೆ ನಮ್ಮ ಗಮನದಲ್ಲಿದೆ. ಜನರು ಸಾಲ ಲಭ್ಯವಾಗುವ ಕಡೆ ಸಾಲ ಪಡೆಯುತ್ತಿದ್ದಾರೆ. ಖಾಸಗಿ ಹಣಕಾಸು ಸಂಸ್ಥೆ, ಲೇವಾದೇವಿಗಾರರು ನೀಡುವ ಸಾಲದ ಮೇಲೆ ಹೆಚ್ಚಿನ ಬಡ್ಡಿ ದರವನ್ನು ಹಾಕುವುದಲ್ಲದೇ, ಗೂಂಡಾಗಳ ಮೂಲಕ ಜನರನ್ನು ಹೆದರಿಸಿ, ಅಮಾನವೀಯ ರೀತಿಯಲ್ಲಿ ಸಾಲ ವಸೂಲಾತಿಯಲ್ಲಿ ತೊಡಗಿದ್ದಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ವಾರ್ಷಿಕವಾಗಿ ಶೇ. 28 ರಿಂದ 30 ರಷ್ಟು ಬಡ್ಡಿ ವಸೂಲಿ ಮಾಡುತ್ತಿವೆ. ಇದರಿಂದ ಸಾಲ ಪಡೆದ ಜನರು ಬೇಸತ್ತು, ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ಗಮನಿಸಲಾಗಿದೆ.
ಮೈಕ್ರೋ ಫೈನಾನ್ಸ್ ವ್ಯವಸ್ಥೆಗಳು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ರಿಸರ್ವ್ ಬ್ಯಾಂಕ್ ನ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಮೈಕ್ರೋ ಫೈನಾನ್ಸ್ ನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸದ್ಯದಲ್ಲಿಯೇ ಸುಗ್ರೀವಾಜ್ಞೆಯನ್ನು ಹೊರಡಿಸಲಿದ್ದು, ಕಿರುಕುಳ ನೀಡುತ್ತಿರುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.