ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರು ಘಟನೆಗೆ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಇದೀಗ ಈ ರಣಹೇಡಿ ಉಗ್ರರ ವಿರುದ್ಧ ಸಿನಿಮಾ ನಟ ಹಾಗೂ ನಟಿಯರು ಸಿಡಿದೆದ್ದಿದ್ದಾರೆ. ಅಲ್ಲದೆ ಅಮಾಯಕ ಜೀವಗಳನ್ನು ಬಲಿ ಪಡೆದಿರುವ ಉಗ್ರರಿಗೆ ತಕ್ಕ ಶಾಸ್ತಿಯಾಗುವಂತೆ ಒತ್ತಾಯಿಸಿದ್ದಾರೆ.
ಉಗ್ರರ ದಮನಕ್ಕೆ ಸರ್ಕಾರಕ್ಕೆ ಬೆಂಬಲ..
ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವರು ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡು ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಶಾಂತಿ ಸೌಹಾರ್ದದತೆಯ ಭಾರತದಲ್ಲಿ ಇಂತಹ ಕೃತ್ಯಗಳು ಮರುಕಳಿಸದಿರಲಿ. ಹಾಗೆಯೇ ಈ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಲಿ ಮತ್ತು ನಮ್ಮನ್ನು ಅಗಲಿದ ಎಲ್ಲಾ ಭಾರತೀಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕೋರುತ್ತೇನೆ. ಅವರ ಎಲ್ಲ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಹಾಗೂ ಧೈರ್ಯವನ್ನು ದೇವರು ನೀಡಲಿ. ಈ ಪೈಶಾಚಿಕ ಕೃತ್ಯ ಎಸಗುವವರ ವಿರುದ್ಧದ ಸರ್ಕಾರದ ಹೋರಾಟಕ್ಕೆ ಸದಾ ಬೆಂಬಲವಿರುತ್ತದೆ ಎಂದು ಶಿವರಾಜ್ ಕುಮಾರ್ ಉಗ್ರರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಪಹಲ್ಗಾಮ್‌ನಲ್ಲಿ ಮುಗ್ಧ ಜನರ ಕ್ರೂರ ಹತ್ಯೆಗಳಿಂದ ತೀವ್ರ ದುಃಖವಾಗಿದೆ. ಮುಗ್ಧ ಜೀವಗಳ ಮೇಲಿನ ದಾಳಿಯನ್ನು ಊಹಿಸಲು ಸಾಧ್ಯವಿಲ್ಲ. ಈ ಭೀಕರ ದುರಂತದ ಶೋಕದಲ್ಲಿ ಸಂತ್ರಸ್ತ ಕುಟುಂಬಗಳು ಮತ್ತು ರಾಷ್ಟ್ರದೊಂದಿಗೆ ದೃಢವಾಗಿ ನಿಲ್ಲುತ್ತೇವೆ ಎಂದು ನಟ ಯಶ್ ತಮ್ಮ ಸಾಂತ್ವನ ತಿಳಿಸಿದ್ದಾರೆ.
ದೇಶದ ಶಕ್ತಿಯ ಮೇಲಿನ ದಾಳಿ..
ಅಲ್ಲದೆ ಪಹಲ್ಗಾಮ್‌ನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ನಡೆದ ಕ್ರೂರ ದಾಳಿ ಹೃದಯ ವಿದ್ರಾವಕವಾಗಿದೆ. ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ, ಬದಲಾಗಿ ನಮ್ಮ ರಾಷ್ಟ್ರದ ಶಕ್ತಿಯ ಮೇಲಿನ ದಾಳಿ. ಇದು ಸಂಯಮದ ಸಮಯವಲ್ಲ. ತಕ್ಕ ಉತ್ತರ ನೀಡುವ ಸಮಯವಾಗಿದೆ. ಈ ಘಟನೆಯ ಹಿಂದಿರುವ ಪಾತಕಿಗಳನ್ನು ತ್ವರಿತವಾಗಿ ನ್ಯಾಯದ ಕಟ ಕಟೆಗೆ ತರಬೇಕೆಂದು ಭಾವುಕರಾಗಿ ನಟ ಕಿಚ್ಚ ಸುದೀಪ್ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.
ಇನ್ನೂ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಗ್ಗೆ ಕೇಳಿ ನೋವಾಗಿದೆ. ಅವರ ಕುಟುಂಬಗಳಿಗೆ ಹೃದಯಪೂರ್ವಕ ಪ್ರಾರ್ಥನೆ ಮತ್ತು ಸಂತಾಪಗಳು. ಇದು ಎಂದಿಗೂ ಮರೆಯಲಾಗದ ಘೋರ ದಾಳಿ ಎಂದು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕಂಬನಿ ಮಿಡಿದು ಘಟನೆಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಆಘಾತ ಮತ್ತು ದುಃಖವಾಗಿದೆ. ಇಂತಹ ಘಟನೆಗಳಿಗೆ ನಮ್ಮ ಸಮಾಜದಲ್ಲಿ ಜಾಗವಿಲ್ಲ, ಅವುಗಳನ್ನು ನಾವೆಲ್ಲ ಬಲವಾಗಿ ಖಂಡಿಸಬೇಕು. ಸಂತ್ರಸ್ತರ ಕುಟುಂಬದ ಪರವಾಗಿ ನಾವಿದ್ದೆವೆ ಎಂದು ನಟ ರಾಮ್ ಚರಣ್ ಪೋಸ್ಟ್ ಮಾಡಿದ್ದಾರೆ.
ಭಯೋತ್ಪಾದಕತೆಗೆ ಜಾಗವಿಲ್ಲ..!
ಅವರು ನಮ್ಮ ಜನರನ್ನು ರಕ್ತದಲ್ಲಿ ಕೊಂದಿದ್ದಾರೆ. ಇದನ್ನೂ ಕ್ಷಮಿಸಲು ಸಾಧ್ಯವಿಲ್ಲ. ನಾವು ಪ್ರತಿಕಾರ ತೀರಿಸಿಕೊಳ್ಳಬೇಕು. ನಮ್ಮ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಅವರು ಈ ಹೇಯ ಕೃತ್ಯ ಮಾಡಿದವರಿಗೆ ತಕ್ಕ ಶಿಕ್ಷೆಯನ್ನು ನೀಡಬೇಕೆಂದು ನಾನು ವಿನಂತಿಸುತ್ತೇನೆ ಎಂದು ನಟ ಸಂಜಯ್ ದತ್ತ ತಿಳಿಸಿದ್ದಾರೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ನಡೆದ ಹೇಡಿತನದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ನಾಗರಿಕ ಜಗತ್ತಿನಲ್ಲಿ ಭಯೋತ್ಪಾದನೆಗೆ ಯಾವುದೇ ಸ್ಥಾನವಿಲ್ಲ. ಈ ಹೇಯ ಕೃತ್ಯವು ಸ್ವೀಕಾರಾರ್ಹವಲ್ಲ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದುಅವರು ಹೇಳಿದ್ದಾರೆ.
ಇನ್ನೂ ಓಂ ಶಾಂತಿ, ನನ್ನ ಕಡೆಯಿಂದ ಸಂತಾಪ ಸೂಚಿಸುತ್ತೇನೆ. ಆಘಾತ ಮತ್ತು ಕೋಪ ಬರುತ್ತಿದೆ. ದುಃಖವನ್ನು ವ್ಯಕ್ತಪಡಿಸಲು ಪದಗಳಿಲ್ಲ. ನಾವು ಸಣ್ಣ ಪುಟ್ಟ ಜಗಳಗಳನ್ನು ಬಿಟ್ಟು, ಒಗ್ಗೂಡಿ ನಿಜವಾದ ಶತ್ರುಗಳನ್ನು ಅರಿತುಕೊಳ್ಳುವ ಸಮಯ ಬಂದಿದೆ ಎಂದು ರವೀನಾ ಟಂಡನ್ ಬರೆದುಕೊಂಡು ದಾಳಿಗೆ ಆಘಾತ ವ್ಯಕ್ತಪಡಿಸಿದ್ದಾರೆ. ನನ್ನ ಹೃದಯ ಒಡೆದಿದೆ ಎಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ನಟಿ ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.
ದಾಳಿಗೆ ಸ್ಥಳೀಯರ ಸಹಕಾರ..?
ಇಷ್ಟೇ ಅಲ್ಲದೆ ಪಹಲ್ಗಾಮ್‌ನಲ್ಲಿ ನಡೆದ ಈ ದಾಳಿಯಲ್ಲಿ ಇಬ್ಬರು ವಿದೇಶಿಗರು ಸೇರಿದಂತೆ 27 ಜನ ಭಾರತೀಯರನ್ನು ಕಳೆದುಕೊಂಡ ದೇಶದಲ್ಲಿ ಆಕ್ರೋಶದ ಜ್ವಾಲೆ ಹೆಚ್ಚಾಗುತ್ತಿದೆ. ಉಗ್ರರ ವಿರುದ್ಧ ಇಡೀ ಭಾರತ ಒಗ್ಗಟ್ಟಾಗಿ ನಿಲ್ಲುತ್ತಿದೆ. ಆದರೆ ಈ ದಾಳಿಗೆ ಕಾಶ್ಮೀರದ ಕೆಲ ದೇಶ ವಿರೋಧಿಗಳ ಬೆಂಬಲ ಇರುವುದನ್ನು ತಳ್ಳಿ ಹಾಕುವಂತಿಲ್ಲ. ಪಾಕ್ ಆಕ್ರಮಿತ ಕಾಶ್ಮೀರದ ಅಡಗುತಾಣದಲ್ಲಿನ ಸ್ಥಳೀಯ ಉಗ್ರರು ಇದರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇದೊಂದು ಸಂಘಟಿತ ದಾಳಿಯಾಗಿದೆ. ಪಾಕ್ ಉಗ್ರರು ಸ್ಥಳೀಯರ ಸಹಕಾರದ ಮೂಲಕ ಈ ಹೇಯ ಕೃತ್ಯ ನಡೆಸಿದ್ದಾರೆ. ಹೀಗಾಗಿ ಈ ಘಟನೆಯನ್ನು ಖಂಡಿಸಿ ಅಖಂಡ ಭಾರತ ಉಗ್ರರನ್ನು ಸದೆಬಡೆಯುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದೆ. ಅಲ್ಲದೆ ಇದನ್ನುಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ರಣಹೇಡಿಗಳ ಹೆಡೆಮುರಿ ಕಟ್ಟಲು ಸರಣಿ ಸಭೆಗಳನ್ನು ನಡೆಸುವ ಮೂಲಕ ಉತ್ತರ ನೀಡಲು ಸಿದ್ಧತೆ ನಡೆಸುತ್ತಿದೆ.