ಬೆಳಗಾವಿ : ರೇಪ್ ಆಸ್ವಾದಿಸಿ ಎಂಬ ಹೇಳಿಕೆಗೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಕ್ಷಮೆಯಾಚಿಸಿದ್ದಾರೆ. ಟ್ವೀಟ್ ಮೂಲಕ ಕ್ಷಮೆಯಾಚಿಸಿದ ಕೆ.ಆರ್.ರಮೇಶ್ ಕುಮಾರ್ ಇನ್ನು ಮುಂದೆ ಇಂತಹ ಪದ ಬಳಸದಂತೆ ಎಚ್ಚರ ವಹಿಸುತ್ತೇನೆ ಎಂದು ಹೇಳಿದ್ದಾರೆ.
ಸದನದಲ್ಲಿ ಅತಿವೃಷ್ಟಿ ಕುರಿತು ನಿಯಮ 69ರ ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಜೆ 5ರ ವೇಳೆ ಚರ್ಚೆಗೆ ಹೆಚ್ಚಿನ ಸಮಯಬೇಕು ಎಂದು ಸದಸ್ಯರು ವಿನಂತಿಸಿದ್ದರು. ಆಗ ಸಂಜೆ 6 ಗಂಟೆಯವರೆಗೆ ಸಮಯ ಕೊಡುತ್ತೇನೆ ಎಂದು ಸ್ಪೀಕರ್ ಹೇಳಿದ್ದರು. ಗ್ರಹಚಾರಕ್ಕೆ ಸ್ಪೀಕರ್ ನನ್ನ ಹೆಸರು ಹೇಳಿದಾಗ ಪ್ರತಿಕ್ರಿಯಿಸಿದ್ದೆ. ಹೆಸರಾಂತ ಇಂಗ್ಲಿಷ್ ಚಿಂತಕರ ಹೇಳಿಕೆಯನ್ನು ಉಲ್ಲೇಖಿಸಿದ್ದೆ ಅಷ್ಟೇ. ಹೆಣ್ಣಿಗೆ ಅಪಮಾನಿಸುವ, ಲಘುವಾಗಿ ಮಾತಾಡುವ ಉದ್ದೇಶ ಇಲ್ಲ. ವಿಷಾದ ವ್ಯಕ್ತಪಡಿಸಲು ನನಗೆ ಯಾವುದೇ ರೀತಿಯ ಪ್ರತಿಷ್ಠೆ ಇಲ್ಲ. ಈ ವಿಚಾರಕ್ಕೆ ಇಲ್ಲಿಗೇ ಅಂತ್ಯ ಹಾಡಿ ಕಲಾಪ ಮುಂದುವರಿಸೋಣ. ಇನ್ನು ಈ ವಿಚಾರವಾಗಿ ಕಲಾಪ ಹಾಳು ಮಾಡುವುದು ಬೇಡ. ಹೀಗಾಗಿ ನನ್ನ ಹೇಳಿಕೆಗೆ ಕ್ಷಮೆಯಾಚಿಸುತ್ತಿದ್ದೇನೆ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.