ಹುಬ್ಬಳ್ಳಿಯಲ್ಲಿ ಸಾರಿಗೆ ಬಸ್ ಗಳೇ ಈಗ ಕಳ್ಳರ ʼಟಾರ್ಗೆಟ್ ಜೋನ್ʼ ಆಗಿದೆ. KSRTC ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ತುಮಕೂರಿನ ಮಹಿಳೆಯೊಬ್ಬರಿಗೆ ದೊಡ್ಡ ಶಾಕ್ ಎದುರಾಗಿದೆ. ತುಮಕೂರು ವಾಲ್ಮೀಕಿ ನಗರದ ಗೀತಾ ಅವರು ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದಿಂದ ಹೊಸೂರು ಬಸ್ ಟರ್ಮಿನಲ್ ಕಡೆ KSRTC ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನ ಮತ್ತು ನಗದು ಕಳುವಾಗಿದೆ.
ಒಟ್ಟು ಸುಮಾರು 165 ಗ್ರಾಂ ಚಿನ್ನಾಭರಣ (ಮೌಲ್ಯ ₹9.90 ಲಕ್ಷ) ಹಾಗೂ ₹5,000 ನಗದು ಕಳ್ಳರ ಕೈ ಸರೆಯಾಗಿದೆ ಎಂದು ತಿಳಿದುಬಂದಿದೆ. ಪ್ರಯಾಣದ ಮಧ್ಯೆ ಯಾರೋ ಬ್ಯಾಗ್ ಟಾರ್ಗೆಟ್ ಮಾಡಿ ಕಳ್ಳತನ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ಬಳಿಕ ಗೀತಾ ಅವರು ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಸ್ ಪ್ರಯಾಣದ ಸಿಸಿಟಿವಿ ಹಾಗೂ ಇತರ ಪ್ರಯಾಣಿಕರ ಮಾಹಿತಿ ಆಧರಿಸಿ ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕ ಸಾರಿಗೆಯಲ್ಲಿ ನಡೆದ ಈ ಚಿನ್ನ ಕಳ್ಳತನ ಪ್ರಕರಣ ಇದೀಗ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಪೊಲೀಸರು ಕಳ್ಳರ ಜಾಡು ಹಿಡಿಯಲು ಬಲೆ ಬೀಸಿದ್ದಾರೆ.




