ಮಂಗಳೂರು ಮೂಲದ ಒಂದಷ್ಟು ಕಲಾಪ್ರೇಮಿಗಳೆಲ್ಲ ಸೇರಿ ನಿರ್ಮಿಸಿರುವ ಚಿತ್ರ ಹರೀಶ ವಯಸ್ಸು 36 ಮಾರ್ಚ್ 4ಕ್ಕೆ ಬಿಡುಗಡೆಯಾಗುತ್ತಿದೆ. ರಿಲೀಸ್ ಡೇಟ್ ಅನೌನ್ಸ್ ಮಾಡುವ ಜೊತೆಗೆ ನಿರ್ಮಾಪಕ ಲಕ್ಷ್ಮಿಕಾಂತ್ ಅವರು ಹಾಡಿರುವ ಪ್ರೇಮಗೀತೆಯೊಂದರ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸಂಗೀತ ನಿರ್ದೇಶಕನಾಗಿದ್ದ ಗುರುರಾಜ ಜ್ಯೇಷ್ಠ ಅವರು ಕಥೆ, ಚಿತ್ರಕಥೆ ಬರೆದು ಮೊದಲಬಾರಿಗೆ ನಿರ್ದೇಶನ ಮಾಡಿರುವ, ಹಾಸ್ಯಪ್ರದಾನ ಕಾಥಾಹಂದರ ಹೊಂದಿರೋ ಚಲನಚಿತ್ರ ಇದಾಗಿದ್ದು ಈ ಚಿತ್ರದಲ್ಲಿ ವಿಶೇಷವಾಗಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಟೈಟಲ್‌ಸಾಂಗ್‌ನ್ನು ಹಾಡಿದ್ದಾರೆ. ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಜೋಸೆಫ್ ಮಾಸ್ಟರ್ ಪಾತ್ರ ಮಾಡಿದ್ದ ಯೋಗೀಶ್ ಶೆಟ್ಟಿ ಈ ಚಿತ್ರದ ನಾಯಕ, ಹಿರಿಯನಟ ಉಮೇಶ್, ಶ್ವೇತಾ ಅರೆಹೊಳೆ, ದೀಪಿಕಾರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 36 ವರ್ಷದ ಹರೀಶ ಮದುವೆಯಾಗಲು ಹೊರಟಾಗ ನಾಯಕನ ಸುತ್ತ ನಡೆಯುವ ಹಾಸ್ಯಪ್ರಸಂಗಗಳೇ ಈ ಚಿತ್ರದ ಕಥಾವಸ್ತುವಾಗಿದ್ದು, ಚಕ್ರಧರ್ ರೆಡ್ಡಿ, ಲಕ್ಷಿಕಾಂತರಾವ್, ತ್ರಿಲೋಕ್ ಝಾ ಒಳಗೊಂಡಂತೆ ಈ ಚಿತ್ರಕ್ಕೆ ನಾಲ್ವರು ನಿರ್ಮಾಪಕರು ಕೈಜೋಡಿಸಿದ್ದಾರೆ.
ಈ ಸಂದರ್ಭದಲ್ಲಿ ನಿರ್ಮಾಪಕರಲ್ಲೊಬ್ಬರಾದ ಲಕ್ಷ್ಮಿಕಾಂತ್ ಮಾತನಾಡುತ್ತ ಒಂದೂವರೆ ವರ್ಷದ ಹಿಂದೆ ನಾವು ಕಥೆ ಕೇಳಿದಾಗ ಆಯ್ತು ಮಾಡೋಣ ಎಂದು ಕಳೆದ ಜನವರಿಯಲ್ಲಿ ಚಿತ್ರ ಆರಂಭಿಸಿದೆವು. 21ದಿನಗಳಲ್ಲಿ ಮೇಜರ್ ಪೋರ್ಷನ್ ಚಿತ್ರೀಕರಣ ಮುಗಿಸಿದೆವು. ಸಾಮಾನ್ಯವಾಗಿ ಮಂಗಳೂರು ಕನ್ನಡ ಎಂದರೆ ಎಲ್ಲರಿಗೂ ಇಷ್ಟ. ನಾಟಕದ ಬ್ಯಾಂಕ್ ಗ್ರೌಂಡ್ ಇಟ್ಟುಕೊಂಡು, ಅದನ್ನು ಸಿನಿಮಾ ರೂಪದಲ್ಲಿ ಕನ್ನಡ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ. ಇಂದು ಬಿಡುಗಡೆಯಾದ ಲವ್ ಸಾಂಗನ್ನು ನಾನೇ ಹಾಡಿದ್ದೇನೆ. ಜಿವಿ.ಅತ್ರಿಯವರ ಜೊತೆ ಐದಾರು ವರ್ಷ ಕಲಿತ ಅನುಭವದಿಂದ ಗಾಯಕನೂ ಆದೆ ಎಂದು ಹೇಳಿದರು.
ನಂತರ ನಿರ್ದೇಶಕ ಗುರುರಾಜ ಜೇಷ್ಠ ಮಾತನಾಡುತ್ತ ಎರಡು ವರ್ಷಗಳ ದೀರ್ಘ ಪಯಣದ ಸ್ಕ್ರಿಪ್ಟ್ ಈಗ ಬಿಡುಗಡೆ ಹಂತದಲ್ಲಿದೆ. 15 ನಿಮಿಷದಲ್ಲಿ ಲಕ್ಷ್ಮಿ ಕಾಂತ್ ಅವರು ಕಥೆ ಕೇಳಿ ಓಕೆ ಮಾಡಿದ್ದರು. ಸಣ್ಣ ಮಂದಹಾಸ ಇರಬೇಕು ಎಂದಿದ್ದರು. 36 ವರ್ಷದ ಹುಡುಗನ ಮದುವೆ ಪ್ರಹಸನ, ಹಾಸ್ಯದ ರೂಪದಲ್ಲಿ ಹೇಳಿದ್ದೇವೆ. ಚಿತ್ರಕ್ಕೆ ಯು ಸರ್ಟಿಫಿಕೇಟ್ ಸಿಕ್ಕಿದ್ದು, ಮಾರ್ಚ್ 4ರಂದು ರಿಲೀಸಾಗುತ್ತಿದೆ. ನನ್ನ ಕಸಿನ್ ಗೆ 37 ವರ್ಷ, ವೃತ್ತಿಪರ ನಾಟಕ ತಂಡದವನು, ಆತ ಮದುವೆಯಾಗಲು ಹೊರಟ ಸಂದರ್ಭದಲ್ಲಿ ನಡೆದ ಘಟನೆಗಳೇ ಈ ಚಿತ್ರಕ್ಕೆ ಸ್ಪೂರ್ತಿ. ಒಂದು ಬೀದಿ ಮತ್ತು ಮನೆಯಲ್ಲಿ ಹೆಚ್ಚಿನ ಕಥೆ ನಡೆಯುತ್ತದೆ, ನಾಯಕ ಬಾಡಿಗೆ ಮನೆ ಕೊಡಿಸುವ ಬ್ರೋಕರ್, ಅದರ ಜೊತೆ ಹುಡುಗಿ ನೋಡುವ ಕೆಲಸ, ಈತನನ್ನ ಯಾವ ಹುಡುಗಿ ನೋಡಿದರೂ ಇಷ್ಟಪಡಲ್ಲ, ಕೊನೆಗೂ ನಮ್ಮ ನಾಯಕ ಹರೀಶನನ್ನು ಪ್ರೀತಿಸುವ ಹುಡುಗಿ ಸಿಕ್ತಾಳಾ, ಆತನ ಮದುವೆಯಾಯಿತೇ ಇಲ್ಲವೇ ಎಂಬುದನ್ನು ದಕ್ಷಿಣ ಕನ್ನಡದ ಸ್ಲ್ಯಾಂಗ್ ಇಟ್ಟುಕೊಂಡು ನಿರೂಪಿಸಿದ್ದೇನೆ. ಧರ್ಮಸ್ಥಳದ ಬಳಿ ೧೦೫ ವರ್ಷದಷ್ಟು ಹಳೆಯದಾದ ಗುತ್ತೆಮನೆಯಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು.
ನಿರ್ಮಾಪಕ ಚಕ್ರಧರ್ ರೆಡ್ಡಿ, ಮತ್ತೊಬ್ಬ ನಿರ್ಮಾಪಕ ಬಿಹಾರ ಮೂಲದ ತ್ರಿಲೋಕ್ ಝಾ, ನಾಯಕ ಯೋಗೀಶ್ ಶೆಟ್ಟಿ, ನಟಿ ದೀಪಿಕಾರಾವ್ ಸಿನಿಮಾದ ವಿಶೇಷತೆಗಳ ಬಗ್ಗೆ ಹೇಳಿದರು. ಆನಂದ್ ಆಡಿಯೋ ಸಂಸ್ಥೆ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದಿದೆ.